ಚಳ್ಳಕೆರೆ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಖೇತ್ ಬಚಾವೋ ಆಂದೋಲನ ಕಾರ್ಯಕ್ರಮವನ್ನು ಇಂದು ಸೋಮಗುದ್ದು ಗ್ರಾಮ ಪಂಚಾಯಿತಿಯಲ್ಲಿ ಕೃಷಿ ಇಲಾಖೆಯ ವತಿಯಿಂದ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ರೈತರಿಗೆ ರಸಗೊಬ್ಬರಗಳ ಮಿತ ಬಳಕೆ, ಸಾವಯುವ ಕೃಷಿಯ ಮಹತ್ವ ಹಾಗೂ ಪರ್ಯಾಯ ಬೆಳೆಗಳ ಕುರಿತು ಅರಿವು ಮೂಡಿಸಲಾಯಿತು.
ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಒಂಕಾರಪ್ಪ ಮಾತನಾಡಿ, ತೊಗರಿ, ಶೇಂಗಾ ಹಾಗೂ ತೋಟಗಾರಿಕಾ ಬೆಳೆಗಳಲ್ಲಿ ಕಾಣಿಸಿಕೊಳ್ಳುವ ಕೀಟ ಮತ್ತು ರೋಗಗಳ ಬಗ್ಗೆ ಮಾಹಿತಿ ನೀಡಿದರು. ಸಾವಯುವ ಪದ್ಧತಿಯಲ್ಲಿ ಕೃಷಿ ಮಾಡಿದರೆ ರೋಗ-ಕೀಟಗಳ ಬಾಧೆ ಕಡಿಮೆಯಾಗುವುದರ ಜೊತೆಗೆ ಉತ್ತಮ ಇಳುವರಿ ದೊರೆಯುತ್ತದೆ. ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಲು ಸಾವಯುವ ಕೃಷಿ ಸಹಕಾರಿಯಾಗಿದ್ದು, ದೇಸಿ ಹಸು ಆಧಾರಿತ ಜೀವಾಮೃತ ಬಳಕೆಯಿಂದ ಉತ್ತಮ ಫಲಿತಾಂಶ ಪಡೆಯಬಹುದು ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ರಮೇಶ್ ಎಸ್.ಟಿ. ಮಾತನಾಡಿ, ರೈತರು ರಾಸಾಯನಿಕ ಗೊಬ್ಬರಗಳ ಮೇಲಿನ ಅತಿಯಾದ ಅವಲಂಬನೆಯನ್ನು ಕಡಿಮೆ ಮಾಡಿ ಸಾವಯುವ ಕೃಷಿಯತ್ತ ಹೆಚ್ಚಿನ ಒಲವು ತೋರಬೇಕು ಎಂದು ಕರೆ ನೀಡಿದರು. ಯೂರಿಯಾ ಮತ್ತು ಡಿಎಪಿ ಗೊಬ್ಬರಗಳು ಕೇವಲ ಸಾರಜನಕ ಹಾಗೂ ರಂಜಕ ಪೋಷಕಾಂಶಗಳನ್ನು ಒದಗಿಸುತ್ತವೆ. ಉತ್ತಮ ಇಳುವರಿಗಾಗಿ ಪೊಟಾಷ್ ಅಂಶವೂ ಅಗತ್ಯವಾಗಿರುವುದರಿಂದ ರೈತರು 20:20:0:13, 15:15:15, 16:16:16, 10:26:26 ಹಾಗೂ 16:20:0:13 ಮುಂತಾದ ಕಾಂಪ್ಲೆಕ್ಸ್ ರಸಗೊಬ್ಬರಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.
ಭೂಮಿತಾಯಿಯ ಸಂರಕ್ಷಣೆಗಾಗಿ ಸಾಧ್ಯವಾದಷ್ಟು ಸಾವಯುವ ಕೃಷಿ ಅಳವಡಿಸಿಕೊಳ್ಳುವಂತೆ ರೈತರಿಗೆ ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಿಬ್ಬಂದಿಗಳಾದ ರಾಮಕೃಷ್ಣ, ಧನಂಜಯ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವೇಂದ್ರಪ್ಪ ಸೇರಿದಂತೆ ಹಲವು ರೈತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.