ತುಮಕೂರು, ಜು.31: ನಗರದ ಐತಿಹಾಸಿಕ ಎಂಪ್ರೆಸ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ ಹಾಗೂ ವಿವಿಧ ಯೋಜನೆಗಳ ಉದ್ಘಾಟನಾ ಸಮಾರಂಭದೊಂದಿಗೆ ವಿದ್ಯಾರ್ಥಿನಿಯರ ಮಧ್ಯಾಹ್ನದ ಭೋಜನ ಯೋಜನೆಗೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ರಾಮಕೃಷ್ಣ ಸೇವಾಶ್ರಮದ ಪರಮಪೂಜ್ಯ ಶ್ರೀ ಸ್ವಾಮಿ ಜಪಾನಂದಜೀ ಮಹಾರಾಜ್ ವಹಿಸಿದ್ದರು. ಕಲ್ಪಾಮೃತ ಫೌಂಡೇಷನ್ ಅಧ್ಯಕ್ಷ ಟಿ.ಎನ್. ಮಧುಕರ್, ಕಾರ್ಯದರ್ಶಿ ಬಿ.ಆರ್. ಉಮೇಶ್, ಖಜಾಂಚಿ ಎಸ್.ಪಿ. ಚಿದಾನಂದ, ಕಾಲೇಜಿನ ಪ್ರಾಂಶುಪಾಲೆ ಅನ್ನಪೂರ್ಣ ಡಿ.ಬಿ., ಶಿಕ್ಷಣ ಇಲಾಖೆಯ ಪದವಿ ಪೂರ್ವ ಉಪನಿರ್ದೇಶಕಿ ರಾಧಾ ಎಂ.ಎಸ್. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸುಮಾರು 1,200 ವಿದ್ಯಾರ್ಥಿನಿಯರು ಹಾಗೂ ಕಾಲೇಜಿನ ಪ್ರಾಧ್ಯಾಪಕರು, ಹಿರಿಯ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದ ಸ್ವಾಮಿ ಜಪಾನಂದಜೀ ಮಹಾರಾಜರು, ಶಿಕ್ಷಣವು ಕೇವಲ ಅಂಕಗಳಿಗಾಗಿ ಅಲ್ಲ, ಉತ್ತಮ ವ್ಯಕ್ತಿತ್ವ ನಿರ್ಮಾಣ ಮತ್ತು ಸಮಾಜದಲ್ಲಿ ಗುರುತನ್ನು ಮೂಡಿಸುವ ಸಾಧನೆಯಾಗಬೇಕು ಎಂದು ಕರೆ ನೀಡಿದರು. ಇಂದಿನ ಯುವಜನತೆ ಶಿಕ್ಷಣಕ್ಕಿಂತ ಮನರಂಜನಾ ಕ್ಷೇತ್ರದ ವ್ಯಕ್ತಿಗಳನ್ನು ಆದರ್ಶವಾಗಿಸಿಕೊಳ್ಳುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಜೀವನದಲ್ಲಿ ಉನ್ನತ ಗುರಿಯನ್ನು ಹೊಂದಬೇಕು ಎಂದು ಸಲಹೆ ನೀಡಿದರು.
ಸ್ವಾಮಿ ವಿವೇಕಾನಂದ, ಅರಿಸ್ಟಾಟಲ್, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ವಿಚಾರಗಳನ್ನು ಉಲ್ಲೇಖಿಸಿದ ಅವರು, ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ, ಮೇಡಂ ಕ್ಯೂರಿ ಹಾಗೂ ಕಲ್ಪನಾ ಚಾವ್ಲಾ ಅವರ ಸಾಧನೆಗಳನ್ನು ಉದಾಹರಿಸಿ ವಿದ್ಯಾರ್ಥಿನಿಯರು ಸಮಾಜಕ್ಕೆ ಮಾದರಿಯಾಗುವಂತೆ ಬದುಕಬೇಕು ಎಂದು ಪ್ರೇರೇಪಿಸಿದರು. ಜೊತೆಗೆ ಪೋಷಕರಿಗೆ ಗೌರವ, ಶಿಕ್ಷಕರಿಗೆ ಭಕ್ತಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿನಿಯರು ಹಾಗೂ ಹಿರಿಯ ಉಪನ್ಯಾಸಕರಾದ ಶಿವಪ್ಪ ಕೆ. ಮತ್ತು ಬಿ. ಸೌಭಾಗ್ಯ ಅವರನ್ನು ಸನ್ಮಾನಿಸಲಾಯಿತು.
ಬಳಿಕ ಕಾಲೇಜಿನಲ್ಲಿ ಕಳೆದ ಒಂದು ವರ್ಷದಿಂದ ಜಾರಿಯಲ್ಲಿರುವ ಮಧ್ಯಾಹ್ನದ ಭೋಜನ ಯೋಜನೆಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಐಎಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಐಪಿಎಸ್ ಭಾಗವಹಿಸಿ ಸ್ವಾಮಿ ಜಪಾನಂದಜೀ ಮಹಾರಾಜರೊಂದಿಗೆ ವಿದ್ಯಾರ್ಥಿನಿಯರಿಗೆ ಭೋಜನ ಹಾಗೂ ಸಿಹಿ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮಿ ಜಪಾನಂದಜೀ, ತುಮಕೂರು ವಿಶ್ವವಿದ್ಯಾನಿಲಯ ಹಾಗೂ ಎಂಪ್ರೆಸ್ ಕಾಲೇಜು ಸೇರಿದಂತೆ ಸುಮಾರು 4,000 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮಧ್ಯಾಹ್ನದ ಭೋಜನ ಯೋಜನೆ ಯಶಸ್ವಿಯಾಗಿ ಜಾರಿಯಲ್ಲಿದ್ದು, ದೇಶದಲ್ಲೇ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಆರಂಭಗೊಂಡ ವಿಶಿಷ್ಟ ಯೋಜನೆಯಾಗಿದೆ ಎಂದು ವಿವರಿಸಿದರು.
ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಯೋಜನೆಯನ್ನು ಶ್ಲಾಘಿಸಿ, ಸ್ವಾಮಿ ಜಪಾನಂದಜೀ ಅವರ ಮಾರ್ಗದರ್ಶನದಲ್ಲಿ ಇಂತಹ ಸಮಾಜಮುಖಿ ಯೋಜನೆಗಳು ಇನ್ನಷ್ಟು ವಿಸ್ತಾರವಾಗಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಕಲ್ಪಾಮೃತ ಫೌಂಡೇಷನ್ ಪದಾಧಿಕಾರಿಗಳು, ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.









About The Author
Discover more from JANADHWANI NEWS
Subscribe to get the latest posts sent to your email.