ಚಳ್ಳಕೆರೆ, ಆ.1: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಚಳ್ಳಕೆರೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದೊಡ್ಡೇರಿ ಇವರ ಸಂಯುಕ್ತ ಆಶ್ರಯದಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ಆಯೋಜಿಸಲಾಯಿತು.



ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕಿ ನಾರಾಯಣಮ್ಮ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ರಾಜ್ಯಾದ್ಯಂತ ಪರಿಸರ ಸಂರಕ್ಷಣೆ ಕುರಿತು ಅನೇಕ ಜನಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ರಕ್ಷಣೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಗಿಡಗಳಿಂದ ಆಮ್ಲಜನಕ, ನೆರಳು ಹಾಗೂ ಹಣ್ಣು-ಹಂಪಲು ದೊರೆಯುತ್ತದೆ. ಶುದ್ಧ ಗಾಳಿ, ಶುದ್ಧ ವಾತಾವರಣ ಮತ್ತು ಆರೋಗ್ಯಕರ ಜೀವನಕ್ಕಾಗಿ ಪರಿಸರ ಸಂರಕ್ಷಣೆ ಅತ್ಯಗತ್ಯವಾಗಿದೆ. ಎಲ್ಲೆಂದರಲ್ಲಿ ಕಸ ಎಸೆಯದೆ ಕಸದ ತೊಟ್ಟಿಗೆ ಹಾಕಬೇಕು. ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಿ ಬಟ್ಟೆ ಹಾಗೂ ಕಾಗದದ ಕೈಚೀಲಗಳನ್ನು ಬಳಸಬೇಕು. ನೀರನ್ನು ಪೋಲು ಮಾಡದೆ ಬಾವಿ, ಕೆರೆ, ಕುಂಟೆ ಹಾಗೂ ನೀರಿನ ಟ್ಯಾಂಕ್‌ಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು. ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ಬೆಳೆಸಿದರೆ ಪರಿಸರ ಸಮತೋಲನ ಕಾಪಾಡಲು ಹಾಗೂ ಸಮಯಕ್ಕೆ ಸರಿಯಾಗಿ ಮಳೆಯಾಗಲು ಸಹಕಾರಿಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ನಾಗರಾಜ್ ಅವರು ಮಾತನಾಡಿ, ಪರಿಸರ ಸಂರಕ್ಷಣೆಯ ಮಹತ್ವವನ್ನು ಜನರಿಗೆ ತಲುಪಿಸುವಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸೇವೆ ಶ್ಲಾಘನೀಯವಾಗಿದೆ. ಶಾಲೆಯಲ್ಲಿ ನೆಡುವ ಗಿಡಗಳನ್ನು ಸಮರ್ಪಕವಾಗಿ ಸಂರಕ್ಷಿಸಲಾಗುವುದು ಎಂದು ಭರವಸೆ ನೀಡಿದರು.
ಬಳಿಕ ಶಾಲಾ ಆವರಣದಲ್ಲಿ ಗಿಡ ನೆಟ್ಟು ನೀರೆರೆಯುವ ಮೂಲಕ ಪರಿಸರ ಸಂರಕ್ಷಣೆಯ ಸಂಕಲ್ಪ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಕೃಷಿ ಮೇಲ್ವಿಚಾರಕರಾದ ರಾಜಪ್ಪ ಎಸ್., ಶಾಲೆಯ ಸಹಶಿಕ್ಷಕರು, ಸೇವಾ ಪ್ರತಿನಿಧಿಗಳು ಹಾಗೂ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.