September 20, 2026
FB_IMG_1789912491196

ಚಿತ್ರದುರ್ಗ ಸೆ.20:
ಮುಂಬರುವ ನವೆಂಬರ್ ತಿಂಗಳ ಅಂತ್ಯದ ವೇಳೆಗೆ 17.5 ಟಿಎಂಸಿ ನೀರನ್ನು ತುಂಗಾ ನದಿಯಿಂದ ಎತ್ತಿ(ಲಿಫ್ಟ್ ಮಾಡಿ), ಭದ್ರಾ ಮೇಲ್ದಂಡೆ ಯೋಜನೆಗೆ ಶಾಶ್ವತ ಪರಿಹಾರ ಒದಗಿಸುವ ಸಂಕಲ್ಪವನ್ನು ಹೊಂದಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ತಿಳಿಸಿದರು.
ಹಿರಿಯೂರು ತಾಲ್ಲೂಕಿನ ಆದಿರಾಳು, ಕೋವೇರಹಟ್ಟಿ ಮೊದಲಾದ ಕಡೆ ಭಾನುವಾರ ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಪ್ರಾಯೋಗಿಕವಾಗಿ ನೀರು ಹರಿಯುತ್ತಿರುವ ಕೆರೆಗಳನ್ನು ವೀಕ್ಷಣೆ ಮಾಡಿದ ಸಚಿವರು, ಆದಿರಾಳು ಗ್ರಾಮದ ಗೋಕಟ್ಟೆ ಬಳಿ ಭದ್ರಾ ನೀರಿಗೆ ಗಂಗಾಪೂಜೆ ನೆರವೇರಿ, ಬಾಗಿನ ಅರ್ಪಿಸಿದ ನಂತರ ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ತುಂಗಾನದಿಯಿAದ ನೀರು ಎತ್ತಲು ತೊಡುಕಾಗಿದ್ದ, ಅರಣ್ಯ ಇಲಾಖೆಯ ಅನುಮತಿ, ವಿದ್ಯುತ್ ಸಮಸ್ಯೆಗೆ ಪರಿಹಾರ ಒದಗಿಸಲಾಗಿದೆ. ಸಾಕಷ್ಟು ಕಷ್ಟಕರವಾದ ಸನ್ನಿವೇಶಗಳು ಮತ್ತು ಆರ್ಥಿಕ ಸವಾಲುಗಳ ನಡುವೆಯೂ ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಗತಗೊಳಿಸಲು ಬದ್ಧವಾಗಿದೆ. ಗುತ್ತಿಗೆದಾರರ ಬಾಕಿ ಪಾವತಿಸಿದ್ದು, ಕಾಮಗಾರಿಗೆ ವೇಗ ದೊರಕಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ವತಃ ಮುಂದೆ ನಿಂತು ಯೋಜನೆಗೆ ಅಡ್ಡಿಯಾಗಿದ್ದ ಎಲ್ಲಾ ಸಮಸ್ಯೆ ಬಗೆಹರಿಸಿದ್ದಾರೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸವಿದೆ. ತುಂಗಾದಿAದ 17.5 ಟಿಎಂಸಿ ಅಡಿ ನೀರು ಬಂದರೆ ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು, ದಾವಣಗೆರೆ ಜಿಲ್ಲೆಗಳಿಗೆ ನೀರು ಹರಿಸಲು ತೊಂದರೆ ಆಗದು. ಯೋಜನೆ ಎಸ್.ನಿಜಲಿಂಗಪ್ಪನವರ ಕನಸು. ಸಾಕಷ್ಟು ಜನರ ಹೋರಾಟದ ಫಲವಾಗಿ ಯೋಜನೆ ಪ್ರಮುಖ ಘಟ್ಟಕ್ಕೆ ತಲುಪಿದೆ. ನಮ್ಮ ಅವಧಿಯಲ್ಲಿಯೇ ಮೇಕೆದಾಟು, ಎತ್ತಿನಹೊಳೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ. ಭದ್ರಾದಿಂದ ಪಾವಗಡ, ಶಿರಾ, ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಿಗೆ, ಎತ್ತಿನಹೊಳೆಯಿಂದ ಕೋಲಾರಕ್ಕೆ ನೀರು ಕೊಡುತ್ತೇವೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ರೈತರ ಸಹಕಾರಕ್ಕೆ ಮನವಿ:
ಬೇರೆ ಜಿಲ್ಲೆಯ ರೈತರ ವಿರೋಧದ ನಡುವೆಯು ಭದ್ರಾದಿಂದ ಚಿತ್ರದುರ್ಗ ಶಾಖಾ ಕಾಲುವೆಗೆ 3 ಟಿಎಂಸಿ ಅಡಿ ನೀರನ್ನು ಪ್ರಾಯೋಗಿಕವಾಗಿ ಹರಿಸಲು ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ. ಸರ್ಕಾರ ತನ್ನ ‘100 ದಿನಗಳ ಕಾರ್ಯಕ್ರಮ’ ದಲ್ಲಿ ಎತ್ತಿನಹೊಳೆ ಹಾಗೂ ಭದ್ರಾ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಯೋಜನೆಯ ಲಾಭ ಹಂತ ಹಂತವಾಗಿ ಎಲ್ಲರಿಗೂ ಸಿಗಲಿದೆ. ಕಷ್ಟಪಟ್ಟು ಅನುಷ್ಠಾನಗೊಳಿಸುತ್ತಿರುವ ಈ ಯೋಜನೆಯ ಕಾಮಗಾರಿಗಳ ನಡುವೆ ಗಲಾಟೆ, ಜಗಳ ಅಥವಾ ಗೊಂದಲಗಳನ್ನು ಮಾಡಿಕೊಳ್ಳಬಾರದು. ಯಾವುದೇ ಕಾರಣಕ್ಕೂ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಶ್ರಮವಹಿಸಿ ಕಾರ್ಯನಿರ್ವಹಿಸುವಾಗ ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಸಾರ್ವಜನಿಕರಲ್ಲಿ ಮತ್ತು ರೈತರಲ್ಲಿ ತಾಳ್ಮೆಯಿಂದ ಸಹಕರಿಸುವಂತೆ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು.
ಹಿರಿಯೂರಿಗೆ ಕ್ಷೇತ್ರಕ್ಕೆ ರೂ. 500 ಕೋಟಿ:
ಹಿರಿಯೂರು ತಾಲ್ಲೂಕಿನ ಅಭಿವೃದ್ಧಿಗೆ ಮುಖ್ಯಮಂತ್ರಿಗಳು 500 ಕೋಟಿ ಅನುದಾನ ಬಿಡುಗಡೆ ಮಾಡಲು ಒಪ್ಪಿದ್ದಾರೆ. ಸೆ.24ರ ಕಾರ್ಯಕ್ರಮದ ತರುವಾಯ ಹಿರಿಯೂರಿನಲ್ಲಿ ಬೃಹತ್ ಸಾರ್ವಜನಿಕ ಸಮಾರಂಭ ಏರ್ಪಡಿಸಿ, ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಪ್ರಸ್ತುತ ಗುರುತ್ವಾಕರ್ಷಣೆಯ ಬಲದಿಂದ ನೀರು ಸರಾಗವಾಗಿ ಹರಿಯುವ ಮೊದಲ ಹಂತದ ಕೆರೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಉಳಿದ ಕೆರೆಗಳಿಗೂ ಕಾಲುವೆಗಳ ಮೂಲಕ ನೀರು ತಲುಪಿಸಲು ಯೋಜನೆ ರೂಪಿಸಲಾಗುವುದು. ದಿವಂಗತ ಸಚಿವ ಡಿ.ಸುಧಾಕರ್ ಆಶಯದಂತೆ ಹಿರಿಯೂರು ತಾಲ್ಲೂಕನ್ನು ಅಭಿವದ್ಧಿ ಮಾಡಲಾಗುವುದು ಎಂದು ತಿಳಿಸಿದರು.
ಭದ್ರೆ ಕಂಡು ಭಾವುಕರಾದ ಮಹಿಳೆಯರು:
ಸ್ಥಳೀಯ ಮಹಿಳೆಯರು ಬಾಗಿನ ಸಮರ್ಪಣೆ ವೇಳೆ ಆನಂದಭಾಷ್ಪ ಸುರಿಸಿ, ತಮಗೆ ಒಡವೆ-ವಸ್ತ್ರಗಳಿಗಿಂತ ಈ ಜೀವಜಲವೇ ದೊಡ್ಡ ವರವೆಂದು ಹರಸಿದಾಗ ಸಚಿವರು ಭಾವುಕರಾಗಿ ಕೆಲಕಾಲ ಮಾತು ಮರೆತರು. ನಿಮ್ಮ ಈ ಖುಷಿ ನೋಡಿ ನನಗೆ ಅದಕ್ಕಿಂತ ಹೆಚ್ಚಿನ ಸಂತೋಷವಾಗಿದೆ. ಈ ಖುಷಿಯನ್ನು ಎಲ್ಲರ ಮೊಗದಲ್ಲಿ ನೋಡುವ ಹಂಬಲ ನನ್ನದು ಎಂದು ಸಚಿವ ಎನ್. ಚಲುವರಾಯಸ್ವಾಮಿ ಭಾವುಕರಾದರು.
ರೈತರನ್ನು ಸಂತೈಸಿ, ಕೆರೆಗಳಿಗೆ ನೀರು ನೀಡಲು ಸೂಚನೆ:
ಮಾರ್ಗಮಧ್ಯೆ ಎಲ್ಲಪುರನಹಳ್ಳಿ ಹಾಗೂ ಐಮಂಗಲ ಭಾಗದ ಗ್ರಾಮಸ್ಥರು ತಮ್ಮೂರಿನ ಕೆರೆಗಳಿಗೂ ತುರ್ತಾಗಿ ನೀರು ಹರಿಸಬೇಕೆಂದು ಸಚಿವ ಎನ್.ಚಲುವರಾಯಸ್ವಾಮಿ ಅವರ ವಾಹನ ತಡೆದು ಬೇಡಿಕೆ ಇಟ್ಟರು.
ಗ್ರಾಮಸ್ಥರನ್ನು ಆತ್ಮೀಯವಾಗಿ ಸಮಾಧಾನಪಡಿಸಿದ ಸಚಿವರು, ಕೆರೆಗಳೇ ಈ ನೆಲದ ರೈತರ ನಿಜವಾದ ಜೀವಾಳವಾಗಿದ್ದು, ಯಾವುದೇ ಆರ್ಥಿಕ ಅಥವಾ ತಾಂತ್ರಿಕ ಹೊಡೆತ ಎದುರಾದರೂ ಲೆಕ್ಕಿಸದೆ ಪ್ರತಿಯೊಂದು ಕೆರೆಗೂ ನೀರು ಮುಟ್ಟಿಸುವ ಹೊಣೆಗಾರಿಕೆಯನ್ನು ಸರ್ಕಾರ ನಿಭಾಯಿಸಲಿದೆ ಎಂಬ ಭರವಸೆ ನೀಡಿದರು.
13 ದಿನಕ್ಕೆ ಕೇವಲ 0.6 ಟಿಎಂಸಿ:
ಈ ವೇಳೆ ಮಾತನಾಡಿದ ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಚಿತ್ರದುರ್ಗ ಶಾಖಾ ಕಾಲುವೆಯ ಮೂಲಕ ಭದ್ರಾ ನೀರು ಹರಿಸಲು ಆರಂಭಿಸಿ 13 ದಿನಗಳಾಗಿದ್ದು, ಕೇವಲ 0.6 ಟಿಎಂಸಿ ಅಡಿ ನೀರು ಹರಿದು ಬಂದಿದೆ. ಇನ್ನೂ 2.4 ಟಿಎಂಸಿ ಅಡಿ ನೀರು ಬರಬೇಕಿದೆ. ರೈತರು ಆತಂಕ ಪಡುವುದು ಬೇಡ. ಹಿರಿಯೂರು ತಾಲ್ಲೂಕಿನ 32 ಕೆರೆಗಳಿಗೆ ನೀರು ಹರಿಸಲಾಗುತ್ತದೆ. ಭದ್ರಾ ಮೇಲ್ದಂಡೆ ಕಾಮಗಾರಿಗೆ ಇನ್ನೂ ರೂ.4,600 ಕೋಟಿ ಹಣ ಬೇಕಿದೆ. ರೂ.21,500 ಕೋಟಿ ಅಂದಾಜು ವೆಚ್ಚದ ಕಾಮಗಾರಿಯಲ್ಲಿ ರೂ.12,500 ಕೋಟಿ ಕೆಲಸ ಪೂರ್ಣಗೊಂಡಿದೆ. ರೈತರು ತಾಳ್ಮೆ ಕಳೆದುಕೊಂಡು ನಾಲೆ ಒಡೆಯುವಂತಹ ಕೆಲಸಕ್ಕೆ ಮುಂದಾಗಿರುವುದು ಬೇಸರ ತಂದಿದೆ. ಸರ್ಕಾರ ನಿರ್ಮಿಸಿರುವ ಆಸ್ತಿಗಳನ್ನು ವಿವೇಚನ ರಹಿತವಾಗಿ ಹಾಳು ಮಾಡುವುದು ತಪ್ಪು, ಮುಂದೆ ಯಾರಾದರು ಇಂತಹ ಕಿಡಿಗೇಡಿ ಕೆಲಸಕ್ಕೆ ಕೈ ಹಾಕಿದರೆ, ಮುಲಾಜು ತೋರದೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಸಚಿವ ಟಿ.ರಘುಮೂರ್ತಿ ನೀಡಿದರು.
ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಹೆಚ್.ಸಿ.ರಮೇಂದ್ರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಜಿಲ್ಲಾಧಿಕಾರಿ ಎಸ್.ರಮ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ರವಿಶಂಕರ್, ಅಧೀಕ್ಷಕ ಇಂಜಿನಿಯರ್ ಹರೀಶ್, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್ ಪೀರ್, ಮುಖಂಡ ಸುಹಾಸ್ ಸುಧಾಕರ್ ಸೇರಿದಂತೆ ಇತರರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading