April 19, 2026
IMG-20260419-WA0092.jpg

‘ವ್ಯಕ್ತಿ ಶುದ್ಧಿ’ಯಿಂದ ‘ಸಮಾಜ ಶುದ್ಧಿ’ ಸಾಧ್ಯವೆಂದು ಸಾರಿದ ಮಹಾಮಾನವತವಾದಿ ಬಸವಣ್ಣ!

✍️
ಡಿ.ಶಬ್ರಿನಾ ಮಹಮದ್ ಅಲಿ,ಚಳ್ಳಕೆರೆ

ಕುಣಿಯಲಾರದವರು ನೆಲ ಡೊಂಕು ಎನ್ನುವಂತೆ, ಇಂದು ನಾವು ನಮ್ಮನ್ನು ಬಿಟ್ಟು ಉಳಿದದ್ದೆಲ್ಲ ಅಂದರೆ,ಇಡೀ ಸಮಾಜವನ್ನೆ ಜರಿ ಜರಿದು,ದೂಷಿಸಿ ಮೂಗು ಮುರಿಯುತ್ತಾ ಆತ್ಮವಲೋಕನದಿಂದ ದೂರ ಉಳಿಯುತಿದ್ದೇವೆ. ಈ ಸಮಾಜ ಸರಿಯಿಲ್ಲ ಅನ್ನುವುದೊಂದೆ ನಮ್ಮ ವಿತಂಡವಾದ! ಹೌದು ಈ ಸಮಾಜ ಯಾರಿಂದ ಆಗಿದೆ ಒಮ್ಮೆ ಯೋಚಿಸಿ ನೋಡಿ, ನಮ್ಮಿಂದಲೇ ಅಲ್ಲವೇ? ಹಾಗಾದರೆ ಈ ಸಮಾಜ ಸರಿಯಿಲ್ಲವೆಂದರೆ ನಾವು ಸರಿಯಿಲ್ಲ ಎಂದು ಆಗುವುದಿಲ್ಲವೇ? ಅದಕಾಗಿಯೆ ಮಹಾಮಾನವತವಾದಿ ಬಸವಣ್ಣನವರು ‘ವ್ಯಕ್ತಿಶುದ್ದಿ’ಯಿಂದ ‘ಸಮಾಜಶುದ್ಧಿ’ ಸಾಧ್ಯ ಎಂಬುದನ್ನ ಅರಿತು ಅದರಂತೆ ಬದುಕಿ, ಮುಂದಿನ ಪೀಳಿಗೆಗೆ ಅದರ ಸಾರವನ್ನು ತಮ್ಮ ವಚನಗಳ ಮೂಲಕ ಅರುಹಿದ್ದಾರೆ. ಈಗ ನಾವು ನಮ್ಮ ಚಿತ್ತವನ್ನಜ ಆ ವಚನಗಳತ್ತ ಹರಿಸೋಣಾ.

ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟೆಯ ಕಟ್ಟಿ,
ಆಕಳ ಹಾಲನೆರೆದು, ಜೇನುತುಪ್ಪವ ಹೊಯ್ದರೆ,
ಸಿಹಿಯಾಗಬಲ್ಲುದೆ, ಕಹಿಯಹುದಲ್ಲದೆ?
ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು,
ಕೂಡಲಸಂಗಮದೇವಾ.

ಬಸವಣ್ಙವರ ಈ ವಚನ, ಒಂದು ಮಗುವಿನ ವ್ಯಕ್ತಿತ್ವವಿಕಸನ ಸಕರಾತ್ಮಕವಾಗಿ ರೂಪುಗೊಳ್ಳುವಲ್ಲಿ ಯಾವುದು ಮೂಲ ಆಗಿರಬೇಕು ಎಂಬುದನ್ನ ತಿಳಿಸುತ್ತದೆ. ಬೇವಿನ ಬೀಜ ಹಾಕಿ ಅದರ ಸುತ್ತ ಸಿಹಿಯಾದ ಬೆಲ್ಲದ ಕಟ್ಟೆ ಕಟ್ಟಿ,ಪೌಷ್ಠಿಕ ಆಕಳ ಹಾಲು ಬಿಟ್ಟು, ಸಿಹಿಯಾದ ಜೇನುತುಪ್ಪ ಹೊಯ್ದರೆ ಆ ಬೇವಿನ ಬೀಜದ ಕಹಿ ಸಿಹಿಯಾಗಲು ಸಾಧ್ಯವೇ? ಖಂಡಿತಾ ಇಲ್ಲ! ಹಾಗೆಯೇ ನಾವು ನಮ್ಮ ಮಕ್ಕಳಿಗೆ ಸನ್ನಡತೆಯ ಅಭ್ಯಾಸಗಳನ್ನ ಮಾಡಿಸಿ ಸತ್ ಚಿಂತನೆಗಳ ಪರಿಚಯ ಮಾಡಿಕೊಡಬೇಕು. ಮಾನವನ ಬದುಕಿಗೆ ಅಗತ್ಯವಾದ ಮಾನವೀಯತೆ,ಸಮಾನತೆ,ಸೌಹಾರ್ದತೆ,ಸಹೋದರತೆ ಇವುಗಳ ಅರಿವು ಮೂಡಿಸಬೇಕು. ಆಗ ಮಾತ್ರ ನಮ್ಮ ಮಕ್ಕಳು ಉತ್ತಮ ಸಮಾಜದ ಒಂದು ಭಾಗವಾಗಲು ಸಾಧ್ಯ ಎಂದು ಬಸವಣ್ಣನವರು ಈ ವಚನದಲ್ಲಿ ತಿಳಿಸಿದ್ದಾರೆ‌.

ಈ ಮೇಲಿನ ವಚನ ವ್ಯಕ್ತಿಶುದ್ಧಿ ಎಂಬ ಸಸಿಯ ಬೀಜವಾದರೆ, ಆ ಸಸಿಯ ಪಾಲನೆ ಪೋಷಣೆಗೆ ಮುಂದಿನ ವಚನಗಳು ನೀರು ಗೊಬ್ಬರವಿದ್ದಂತೆ!

೧)ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಮುನಿಯಬೇಡ
ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ
ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.

ಸಪ್ತಶೀಲಗಳು ಎಂದೇ ಪ್ರಸಿದ್ದವಾದ ಈ ವಚನ ವ್ಯಕ್ತಿಯನ್ನು ಶುದ್ಧಗೊಳಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಅಂತರಂಗ ಬಹಿರಂಗಶುದ್ಧಿಯ ಸಪ್ತಸೂತ್ರಗಳನ್ನು ವ್ಯಾಪಕವಾದ ರೀತಿಯಲ್ಲಿ ಹಿಡಿದಿಟ್ಟಿದೆ. ಕಾಯ, ಮಾತು, ಮನಸ್ಸು ಈ ಮೂರರ ಶುದ್ಧಿಯೂ ಅವಶ್ಯವಾಗಿ ಆಗಬೇಕು. ಜಾರಿ,ಲಿಂಗ ವರ್ಗ ವರ್ಣಗಳ ಹೆಸರಲಿ ಮತ್ತೊಬ್ಬರಿಗೆ ನೋವು ಉಙಟುವಮಾಡುವಂತಹ ನಕರಾತ್ಮಕ ಭಾವಗಳಿಂದ ನಾವು ದೂರ ಇರಬೇಕು. ಕಳವು,ಲಂಚ ಕೊಲೆ ಇವು ಕಾಯದೋಷಗಳು ; ಅಂದರೆ ದೇಹದಿಂದ ಘಟಿಸುವಂತಹವು. ‘ಹುಸಿ,’ ಕೋಪಿಸಿಕೊಳ್ಳು ವುದು – ಮಾತಿನ ದೋಷಗಳು. ಇನ್ನುಳಿದ ಮೂರು ಮನಸ್ಸಿನ ದೋಷಗಳು. ‘ಅನ್ಯರಿಗೆ ಅಸಹ್ಯಪಡಬೇಡ’ ಎಂಬ ಮಾತನ್ನು ಮುಖ್ಯವಾಗಿ ಗಮನಿಸಬೇಕು. ‘ತನ್ನ ಬಣ್ಣಿಸುವುದು’, ‘ಇದಿರ ಹಳಿಯುವುದು’ ಅಹಂಕಾರದ ಪರಮಾವಧಿಯಾಗಿದೆ. ತನಗೆ ಸೇರಿಕೆಯಲ್ಲದಿರುವುದನ್ನು ಕಂಡಾಗ ಸಹಿಸದೇ ಇರುವುದು, ಅಸಹ್ಯಪಟ್ಟುಕೊಳ್ಳುವುದನ್ನ ಮೊದಲು ಬಿಡಬೇಕು. ಎಲ್ಲವನ್ನು ಔದಾರ್ಯದಿಂದ ನೋಡುವಂತಹ ಶುದ್ಧಮನಸ್ಸಿನವರು ನಾವಾಗಬೇಕು ಎಂದು ಬಸವಣ್ಣನವರು ಈ ವಚನದಲ್ಲಿ ಹೇಳುವ ಮೂಲಕ ವ್ಯಕ್ತಿಶುದ್ಧಿಯ ಸುಲಭ ಮಾರ್ಗವನ್ನ ನಮಗೆ ದಯಪಾಲಿಸಿದ್ದಾರೆ.

೨)ನುಡಿದರೆ ಮುತ್ತಿನ ಹಾರದಂತಿರಬೇಕು ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು ನುಡಿದರೆ ಲಿಂಗಮೆಚ್ಚಿ ಅಹುದಹುದೆನಬೇಕು ನುಡಿಯೊಳಗಗಾಗಿ ನಡೆಯದಿದ್ದರೆ ಕೂಡಲ ಸಂಗಮ ದೇವನೆಂತೊಲಿವನಯ್ಯ

ಮನುಷ್ಯನ ಬಂಧಗಳು ನಿಂತಿರುವುದೇ ಆಡುವ ಮಾತುಗಳ ಮೇಲೆ! ಮಾತಿನಲ್ಲಿ ನಯ ವಿನಯ,ಪ್ರೀತಿ, ವಿಶ್ವಾಸ,ಕರುಣೆ,ಮಮತೆ ಕಾಳಜಿ ಈ ಎಲ್ಲವೂ ತುಂಬಿದ್ದರೆ ನಮ್ಮೊಟ್ಟಿಗಿರುವವರೊಂದಿಗೆ ನಮ್ಮ ಬಂಧ ಬಿಗಿಯಾಗಿರುತ್ತದೆ. ಅವುಗಳ ಹೊರತಾಗಿ ಆಡಿದ ಮಾತಿನಿಂದ ನಾವು ಏನನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದಲೆ ಬಸವಣ್ಣನವರು ನುಡಿದರೆ ಮುತ್ತಿನ ಹಾರದಂತಿರಬೇಕು
ಎಂದು ಹೇಳಿದ್ದಾರೆ. ಪ್ರತ್ಯೇಕವಾಗಿ ಕಂಡರೂ ಪ್ರಮಾಣಿಸು ನೋಡು ಎನ್ನುವಂತೆ ಸತ್ಯವನ್ನಷ್ಟೇ ನುಡಿಯಬೇಕು. ಊಹಾಪೋಹಾಗಳಿಗೆ ಅವಕಾಶ ಮಾಡಿಕೊಡಬಾರದು, ನಾವಾಡಿದ ಮಾತು ದೇವರೇ ಮೆಚ್ಚಿಕೊಳ್ಳಬೇಕು ಅಂದರೆ ಸತ್ಯದಿಂದ ಕೂಡಿರಬೇಕು ಎಂದು ಬಸವಣ್ಣನವರು ಮಾತಿಗೆ ಹೆಚ್ಚು ಒತ್ತುಕೊಟ್ಟಿದ್ದಾರೆ.

೩)ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ; ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದದೇವಾ

ಬಸವಣ್ಣನವರ ಆಲೋಚನೆಗಳೆ ಬೆಳಕಿನಂತೆ. ಅವರು ಇನ್ನೊಬ್ಬರನ್ನು ತಿದ್ದಲು ಹೋಗುವ ಮುನ್ನ ತನ್ನನ್ನು ತಾನು ತಿದ್ದಿಕೊಳ್ಳಬೇಕು ಎಂಬ ಆತ್ಮಾವಲೋಕನದ ಸಂದೇಶ ನೀಡಿದ್ದಾರೆ‌. ಅನ್ಯರ ತಪ್ಪುಗಳನ್ನು ಹುಡುಕುವುದಕ್ಕಿಂತ ಮೊದಲು ಸ್ವಂತ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು.
ತನು-ಮನದ ಶುದ್ಧಿ: ನಮ್ಮ ತನುವನ್ನು ಮತ್ತು ಮನಸ್ಸನ್ನು ಸಾತ್ವಿಕವಾಗಿ ಇಟ್ಟುಕೊಳ್ಳುವುದು ಮುಖ್ಯ.
ನಮಗೆ ನಾವೇ ಸರಿ ಇಲ್ಲದಿರುವಾಗ, ಇನ್ನೊಬ್ಬರ ದೋಷಗಳಿಗಾಗಿ ಎತ್ತಿಹಿಡಿಯುವವರನ್ನು ಕೂಡಲಸಂಗಮದೇವ ಮೆಚ್ಚುವುದಿಲ್ಲ ಎಂದು ಹೇಳುತ್ತಾ ಲೋಕವು ಡೊಂಕಾಗಿದ್ದರೆ, ಅದು ನಮ್ಮದೇ ಡೊಂಕಿನ ಪ್ರತಿಬಿಂಬವಾಗಿರುತ್ತದೆ,ಆದ್ದರಿಂದ ಮೊದಲು ನಮ್ಮನ್ನು ನಾವು ತಿದ್ದಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಬಸವಣ್ಣನವರ ಈ ಮೂರು ವಚನಗಳನ್ನು ನಾವು ಅರ್ಥ ಮಾಡಿಕೊಂಡು, ಜಾತಿ ಬೇಧ, ವರ್ಣಬೇಧ, ಲಿಂಗ ಬೇಧ, ವರ್ಗ ಬೇಧ ಮಾಡದೆ ಎಲ್ಲರನ್ನು ಸಮಾನತೆಯಿಂದ ಕಂಡು ಮಾನವೀಯತೆಯಿಂದ,ಸಹೋದರತೆಯಿಂದ ನಾವು ಬದುಕಿದರೆ ಸಾಕು ನಮ್ಮ ಸಮಾಜ ಶುದ್ಧಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ!

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading