ಮೈಸೂರು: ಶ್ರೀ ಭಗೀರಥ ಮಹರ್ಷಿ ಅವರ ಜಯಂತೋತ್ಸವವನ್ನು ಏ.23ರಂದು ನಗರದಲ್ಲಿ ಜಿಲ್ಲಾಡಳಿತದೊಂದಿಗೆ ಜಿಲ್ಲಾ ಶ್ರೀ ಭಗೀರಥ ಜಯಂತೋತ್ಸವ ಸಮಿತಿಯ ಸಹಯೋಗದಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಶ್ರೀ ಭಗೀರಥ ಜಯಂತೋತ್ಸವದ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಟಿ.ಮೋಹನ್ ಕುಮಾರ್ ಹೇಳಿದರು.
ಅವರು ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಉಪ್ಪಾರ ಸಮಾಜದ ಮೂಲ ಕಸುಬಾದ ಉಪ್ಪು ತಯಾರಿಕೆಯನ್ನು ಬಿಂಬಿಸುವ ಉಪ್ಪಿನ ರಾಶಿ ಮತ್ತು ಗಂಗಾ ಕಳಸ ಪೂಜೆಯನ್ನು ಮಾಡಿ ಪುಷ್ಪಾರ್ಚನೆಯೊಂದಿಗೆ “ಶ್ರೀ ಭಗೀರಥ ಮಹರ್ಷಿ” ಅವರ ಭಾವಚಿತ್ರವನ್ನು ಭವ್ಯವಾಗಿ ಅಲಂಕೃತಗೊಂಡ ವಾಹನದಲ್ಲಿ ಪ್ರತಿಷ್ಠಾಪಿಸಿ ಸತ್ತಿಗೆ, ಸೂರಿಪಾನಿ, ಮಾರಿಕುಣಿತ, ಬೀಸು ಕಂಸಾಳೆ, ಡೊಳ್ಳು ವರಸೆ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ನಗರದ ಅರಮನೆ ಮುಂಭಾಗವಿರುವ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ಕೆ.ಆರ್.ವೃತ್ತ, ದೇವರಾಜ ಅರಸು ರಸ್ತೆ ಮಾರ್ಗವಾಗಿ ಹುಣಸೂರು ರಸ್ತೆಯಲ್ಲಿರುವ ಕರ್ನಾಟಕ ಕಲಾಮಂದಿರಕ್ಕೆ ಕರೆತರಲಾಗುವುದು. ಅಲ್ಲಿ ವೇದಿಕೆಯ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹೊಸದುರ್ಗದ ಭಗೀರಥ ಪೀಠದ
ಡಾ. ಶ್ರೀ ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿಗಳು ಹಾಗೂ ಮಳವಳ್ಳಿಯ ಅಯ್ಯನ ಸರಗೂರು ಮಠದ ಶ್ರೀ ಮಹದೇವಸ್ವಾಮಿಗಳು ವಹಿಸಲಿದ್ದು, ಸಚಿವರು, ಶಾಸಕರುಗಳು, ಸಂಸದರು, ವಿಧಾನ ಪರಿಷತ್ ಸದಸ್ಯರುಗಳು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರುಗಳು ಸೇರಿದಂತೆ ಹಲವು ಗಣ್ಯರುಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರರ ಸಂಘದ ಅಧ್ಯಕ್ಷ
ಎಂ.ರಾಮಚಂದ್ರು ಮಾತನಾಡಿ
ಸೂರ್ಯವಂಶ ಕ್ಷತ್ರಿಯರ ಅನುವಂಶಿಯರಾದ ಉಪ್ಪಾರ ಸಮಾಜದ ಆರಾಧ್ಯ ದೈವ ಶ್ರೀ ಭಗೀರಥ ಮಹರ್ಷಿಗಳು ಕಠಿಣ ತಪಸ್ಸಿನ ಮೂಲಕ ಶಿವನನ್ನು ಒಲಿಸಿಕೊಂಡು ದೇವಗಂಗೆಯನ್ನು ಧರೆಗೆ ಇಳಿಸಿ ಸಕಲ ಜೀವರಾಶಿಗಳನ್ನು ಉದ್ದರಿಸಿ ಪಾವನಗೊಳಿಸಿದ್ದಾರೆ. ಈ ಸಾಧನೆಯು ಭಗೀರಥ ಪ್ರಯತ್ನ ಎಂದು ಪ್ರಖ್ಯಾತಿ ಹೊಂದಿರುತ್ತದೆ. ಶ್ರೀ ಭಗೀರಥ ಮಹರ್ಷಿಯವರ ಜಯಂತಿಯನ್ನು ಸರ್ಕಾರದ ವತಿಯಿಂದ ರಾಜ್ಯಾದ್ಯಂತ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಆಚರಿಸಲಾಗುತ್ತಿದೆ. ಉಪ್ಪಾರ ಸಮುದಾಯದ ಸಂಘಟನೆಗಳು ಹಾಗೂ ಸರ್ವ ಕುಲಬಾಂಧವರು ನಾಡಿನೆಲ್ಲಡೆ ತಮ್ಮ ತಮ್ಮ ಗ್ರಾಮಗಳಲ್ಲಿ ವಿಶೇಷ ಸಾಮಾಜಿಕ ಹಾಗೂ ಶೈಕ್ಷಣಿಕ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಕರಳಾಪುರ ನಾಗರಾಜು ಮಾತನಾಡಿ
ಈ ಬಾರಿ ಜಿಲ್ಲಾಡಳಿತದೊಂದಿಗೆ ಮೈಸೂರು ಜಿಲ್ಲಾ ಶ್ರೀ ಭಗೀರಥ ಜಯಂತೋತ್ಸವ ಸಮಿತಿಯು ಕೈಜೋಡಿಸಿ ಜಿಲ್ಲಾಮಟ್ಟದಲ್ಲಿ ಶ್ರೀ ಭಗೀರಥ ಮಹರ್ಷಿಗಳ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಶ್ರೀ ಭಗೀರಥ ಜಯಂತೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಭಾಗದ ಉಪ್ಪಾರ ಸಮಾಜದ ಯಜಮಾನರುಗಳು, ಜನಪ್ರತಿನಿಧಿಗಳು, ಮುಖಂಡರುಗಳು, ಸಂಘಟನೆಗಳವರು, ಯುವಕರು, ಮಹಿಳೆಯರು, ನೌಕರರು, ವೃತ್ತಿಪರರು ಸೇರಿದಂತೆ ಸರ್ವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಶ್ರೀ ಭಗೀರಥ ಜಯಂತೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಕನಕನಗರ ಮಹದೇವ್, ಆರ್ಥಿಕ ಸಮಿತಿ ಅಧ್ಯಕ್ಷ
ಡಾ.ಎಂ.ಗೋವಿಂದರಾಜು, ಆಹಾರ ಸಮಿತಿ ಅಧ್ಯಕ್ಷ ಟಿ.ಆರ್.ಶಿವರಾಜು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.