ಚಿತ್ರದುರ್ಗಜೂ.11:
ಭದ್ರಾ ಮೇಲ್ದಂಡೆ ಯೋಜನೆಯಡಿ ಜಿಲ್ಲೆಯ ಯಾವುದೇ ಭಾಗಗಳು ಬಿಟ್ಟು ಹೋಗದಂತೆ, ಸಂಪೂರ್ಣ ಜಿಲ್ಲೆಯಲ್ಲಿ ಸೂಕ್ಷ್ಮ ನೀರಾವರಿ ಯೋಜನೆ ಅನುಷ್ಠಾನ ಮಾಡುವಂತೆ, ಶನಿವಾರ ಬೆಂಗಳೂರಿನಲ್ಲಿ ನಡೆಯಲ್ಲಿರುವ ಮುಖ್ಯಮಂತ್ರಿಗಳ ಸಭೆಯಲ್ಲಿ, ಜಿಲ್ಲೆಯ ರೈತರ ಪರವಾಗಿ ಮನವಿ ಮಾಡುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ, ಗುರುವಾರ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನದ ಕುರಿತಂತೆ ಹೊಳಲ್ಕೆರೆ ಭಾಗದ ರೈತರ ಸಮಸ್ಯೆಗಳ ಕುರಿತು ಸಭೆ ನಡೆಸಿ ಅವರು ಮಾತನಾಡಿದರು.
ಪ್ರತಿ ತಾಲ್ಲೂಕುವಾರು ಸೂಕ್ಷ್ಮ ಹಾಗೂ ಹನಿ ನೀರಾವರಿ ಯೋಜನೆಯಡಿ ಕೈಬಿಟ್ಟ ಪ್ರದೇಶ ಮತ್ತು ಕೆರೆ ತುಂಬಿಸುವ ಯೋಜನೆಯಡಿ ಒಳಪಡೆದ ಕೆರೆಗಳ ವಿವರಗಳನ್ನು ಅಧಿಕಾರಿಗಳು ನೀಡಿದರೆ, ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರ ಗಮನಕ್ಕೆ ತರುತ್ತೇನೆ. ಲಭ್ಯವಿರುವ ನೀರಿನ ಹಂಚಿಕೆ ಹಾಗೂ ಹೆಚ್ಚುವರಿ ನೀರಿನ ಬೇಡಿಕೆ ಆಧರಿಸಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಚಿತ್ರದುರ್ಗ ಜಿಲ್ಲೆಯ ಎಲ್ಲಾ ಭಾಗಗಳಿಗೂ ನೀರು ಲಭ್ಯವಾದರೆ, ಜಿಲ್ಲೆಯ ರೈತರ ಶೇ.90 ರಷ್ಟು ಸಮಸ್ಯೆಗಳು ಇತ್ಯರ್ಥವಾಗಲಿವೆ. ಅಂರ್ತಜಲ ಬಳಕೆಯ ಮೇಲಿನ ಒತ್ತಡವು ಕಡಿಮೆಯಾಗಿಲಿದೆ. ಇದರೊಂದಿಗೆ ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ರಾಜ್ಯಾದ್ಯಂತ ಒಣಭೂಮಿ ಹಾಗೂ ನೀರಾವರಿ ವ್ಯಾಪ್ತಿಗೆ ಒಳಪಡದ ಪ್ರದೇಶಗಳನ್ನು ಗುರುತಿಸಿ, ನೀರಾವರಿ ವ್ಯಾಪ್ತಿಗೆ ತರಲು ಸರ್ಕಾರ ತಜ್ಞರ ಸಮತಿ ರಚಿಸಿದೆ. ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಿಂದ ವಂಚಿತವಾಗಿರುವ ಓಣಭೂಮಿ ವಿಸ್ತೀರ್ಣ ಹಾಗೂ ಕೆರೆಗಳ ಕುರಿತು ತಾಲ್ಲೂಕುವಾರು ಮಾಹಿತಿ ಸಂಗ್ರಹಿಸಿ ತಜ್ಞರ ಸಮಿತಿ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಭದ್ರಾ ಮೇಲ್ದಂಡೆ ಯೋಜನೆ ಅಧೀಕ್ಷಕ ಇಂಜಿನಿಯರ್ ಹರೀಶ್ ಹೇಳಿದರು.
ಹೊಳಲ್ಕರೆ ತಾಲ್ಲೂಕಿನ ಸುಮಾರು 51,261 ಹೆಕ್ಟೇರ್ ಪ್ರದೇಶವು ಒಣಭೂಮಿಯಾಗಿದೆ. 25 ಕೆರೆಗಳು ತುಂಬಿಸುವುದು ಬಾಕಿ ಉಳಿದಿವೆ ಈ ಭಾಗಕ್ಕೆ ಸೂಕ್ಷ್ಮ ನೀರಾವರಿ ಕಲ್ಪಿಸಲು ಹೆಚ್ಚುವರಿಯಾಗಿ 5.1 ಟಿ.ಎಂ.ಸಿ ನೀರು ಬೇಕಾಗುತ್ತದೆ.
ಇದೇ ಮಾದರಿಯಲ್ಲಿ ಚಿತ್ರದುರ್ಗ ತಾಲ್ಲೂಕಿನಲ್ಲಿ 32,200 ಹೆಕ್ಟೇರ್ ಪ್ರದೇಶ ಹಾಗೂ 13 ಕೆರೆ, ಚಳ್ಳಕೆರೆ ತಾಲ್ಲೂಕಿನಲ್ಲಿ 50,000 ಹೆಕ್ಟೇರ್ ಪ್ರದೇಶ, ಮೊಳಕಾಲ್ಮೂರು ತಾಲ್ಲೂಕಿನಲ್ಲಿ 40,000 ಹೆಕ್ಟೇರ್ ಪ್ರದೇಶ ಹಾಗೂ 25 ಕೆರೆ, ಹಿರಿಯೂರು ತಾಲ್ಲೂಕಿನಲ್ಲಿ 22,000 ಹೆಕ್ಟೇರ್ ಪ್ರದೇಶ 15 ಕೆರೆ, ಹೊಸದುರ್ಗ ತಾಲ್ಲೂಕಿನಲ್ಲಿ 30,954 ಹೆಕ್ಟೇರ್ ಪ್ರದೇಶ ಹಾಗೂ 10 ಕೆರೆ ತುಂಬಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಒಟ್ಟಾರೆ ಜಿಲ್ಲೆಯಲ್ಲಿ 2,26,415 ಹಕ್ಟೇರ್ ಓಣ ಭೂಮಿಯನ್ನು ಸೂಕ್ಷ್ಮ ನೀರಾವರಿ ಯೋಜನೆಗೆ ಒಳಪಡಿಸಲು ಹಾಗೂ 88 ಕೆರೆ ತುಂಬಿಸಲು 21.73 ಟಿ.ಎಂ.ಸಿ ನೀರಿನ ಅಗತ್ಯವಿದೆ ಎಂದು ಅಧೀಕ್ಷಕ ಇಂಜಿನಿಯರ್ ಹರೀಶ್ ಮಾಹಿತಿ ನೀಡಿದರು.
ಚಿತ್ರದುರ್ಗ ಜಿಲ್ಲೆಯಾದ್ಯಂತ ನೀರಾವರಿ ಸೌಲಭ್ಯ ಕಲ್ಪಿಸಲು 1997 ರಿಂದಲೂ ಹೋರಾಟ ನಡೆಸಲಾಗುತ್ತಿದೆ. ಆರಂಭದಲ್ಲಿ 70 ಟಿ.ಎಂ.ಸಿ ನೀರಿನ ಹಂಚಿಕೆ ಬೇಡಿಕೆ ಇಡಲಾಗಿತ್ತು. ಆದರೆ ಜಿಲ್ಲೆಗೆ ಲಭಿಸಿದ 29.91 ಟಿ.ಎಂ.ಸಿ ನೀರಿನಗೆ ಒಪ್ಪಿ, ಯೋಜನೆ ಜಾರಿಗೆ ಸೂಚಿಸಲಾಯಿತು. ಇಂದಿಗೂ ಯೋಜನೆ ಪೂರ್ಣಗೊಂಡಿಲ್ಲ. ಕೆಲಸ ಮುಗಿದು ಹೊಳಲ್ಕೆರೆ ತಾಲ್ಲೂಕಿಗೆ ನೀರು ಹರಿಯಲು 6 ತಿಂಗಳ ಹಿಡಿಯಬಹದು. ಸರ್ಕಾರ ಯಾವುದೇ ತಾರತಮ್ಯ ತೊರದೇ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಿಗೂ ಶೇ.100 ರಷ್ಟು ನೀರು ತಲುಪಿಸಿ ನೀರಾವರಿ ಯೋಜನೆ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ರೈತ ಮುಖಂಡ ಸಿದ್ದವೀರಪ್ಪ ಸಭೆಯಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಪಾಲಕ ಇಂಜಿಯರ್ ಹರ್ಷ, ಸಹಾಯಕ ಇಂಜಿನಿಯರ್ ನಾಗರಾಜ್ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.