ಹಿರಿಯೂರು, ಜೂ. 11: ಹಿರಿಯೂರಿನ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್ ಶಾಖೆಯ ನೂತನ ಕಟ್ಟಡವನ್ನು ಸುಮಾರು 97 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಮುಂದಿನ 9 ತಿಂಗಳೊಳಗೆ ವಿಶಾಲ ಹಾಗೂ ಸುಸಜ್ಜಿತ ಶಾಖೆ ಕಾರ್ಯಾರಂಭ ಮಾಡಲಿದೆ ಎಂದು ಚಿತ್ರದುರ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರು ಹಾಗೂ ಚಳ್ಳಕೆರೆ ಶಾಸಕರಾದ ರಘುಮೂರ್ತಿ ಹೇಳಿದರು.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಟಿಎಪಿಸಿಎಂಎಸ್ ಜಾಗದಲ್ಲಿ ನೂತನ ಬ್ಯಾಂಕ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಟ್ಟಡ ನಿರ್ಮಾಣದಲ್ಲಿ ಗುತ್ತಿಗೆದಾರರು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿಗೆ ಅವಕಾಶ ನೀಡಬಾರದು ಎಂದು ಸೂಚಿಸಿದರು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್ ವುಲ್ಲಾ ಶರೀಫ್ ಮಾತನಾಡಿ, ಡಿಸಿಸಿ ಬ್ಯಾಂಕ್ ತನ್ನದೇ ಆದ ಇತಿಹಾಸ ಹಾಗೂ ಸೇವಾ ಪರಂಪರೆ ಹೊಂದಿದ್ದು, ರೈತರು, ಕೃಷಿ ಕಾರ್ಮಿಕರು, ಹಾಲು ಉತ್ಪಾದಕರು, ಸಹಕಾರಿಗಳು ಹಾಗೂ ಸಹಕಾರ ಸಂಘಗಳ ಅಭಿವೃದ್ಧಿಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ ಎಂದರು.
ಸಂಪೂರ್ಣ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ನೂತನ ಶಾಖೆಯು ಮುಂದಿನ ದಿನಗಳಲ್ಲಿ ತಾಲೂಕಿನ ರೈತರು ಹಾಗೂ ವಿವಿಧ ಸಹಕಾರ ಸಂಘಗಳಿಗೆ ಇನ್ನಷ್ಟು ಪರಿಣಾಮಕಾರಿ ಬ್ಯಾಂಕಿಂಗ್ ಮತ್ತು ಸಾಲ ಸೌಲಭ್ಯಗಳನ್ನು ಒದಗಿಸಲು ನೆರವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಮಂಜುನಾಥ್, ನಿರ್ದೇಶಕರಾದ ಗಿರೀಶ್ ಹೊಳಲ್ಕೆರೆ, ನಿಶಾ ವಿಜಯಣ್ಣ, ಜಗನ್ನಾಥ್, ಮಂಜುನಾಥ್ ಮಾಳಿಗೆ, ಮಹಂತೇಶ್, ರಘುರಾಂ ರೆಡ್ಡಿ, ವಿನೋದಮ್ಮ, ಟಿಎಪಿಸಿಎಂಎಸ್ ಅಧ್ಯಕ್ಷ ಶ್ರವಣಗೆರೆ ಹನುಮಂತರಾಯಪ್ಪ, ರೈತ ಮುಖಂಡರಾದ ಕಸವನಹಳ್ಳಿ ರಮೇಶ್, ಆಲೂರು ಸಿದ್ಧರಾಮಣ್ಣ, ಎಚ್.ಆರ್. ತಿಮ್ಮಯ್ಯ, ಹಿರಿಯ ಪತ್ರಕರ್ತರಾದ ಆಲೂರು ಹನುಮಂತರಾಯಪ್ಪ, ಪಿ.ಆರ್. ಸತೀಶ್ ಬಾಬು, ಉಮಾಶಂಕರ್, ವಿವಿ ಪುರ ಸೊಸೈಟಿ ಕಾರ್ಯದರ್ಶಿ ರಂಗಸ್ವಾಮಿ, ಯಳನಾಡು ಸೊಸೈಟಿ ಕಾರ್ಯದರ್ಶಿ ರಂಗಸ್ವಾಮಿ, ಕಂದಿಕೆರೆ ಸುರೇಶ್ ಬಾಬು, ದಾದಪೀರ್, ಸಾದತ್ ಸೇರಿದಂತೆ ತಾಲೂಕಿನ ವಿವಿಧ ಸಹಕಾರ ಸಂಘಗಳ ಪದಾಧಿಕಾರಿಗಳು ಹಾಗೂ ಸಹಕಾರಿ ಮುಖಂಡರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.