ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾದ ಹಿರಿಯ ನಾಯಕ D. Sudhakar ಅವರ ಅಗಲಿಕೆ ನಿಜಕ್ಕೂ ಶಿಕ್ಷಣ ಪ್ರೇಮಿಗಳಿಗೆ ತುಂಬಲಾರದ ನಷ್ಟವಾಗಿದೆ.
1999-2000ರ ಭೀಕರ ಬರಗಾಲದ ಸಂದರ್ಭದಲ್ಲಿ ಚಳ್ಳಕೆರೆ ತಾಲ್ಲೂಕಿನ ಜನರು ಮತ್ತು ಜಾನುವಾರುಗಳು ನೀರು ಹಾಗೂ ಮೇವಿನ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾಗ, ಡಿ. ಸುಧಾಕರ್ ಅವರು ನೂರಾರು ಲಾರಿಗಳ ಮೂಲಕ ಮೇವು ಪೂರೈಕೆ ಮಾಡಿ, ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಒದಗಿಸಿ ಜನಸ್ನೇಹಿ ನಾಯಕನಾಗಿ ಹೊರಹೊಮ್ಮಿದರು.
ಶಿಕ್ಷಣದ ಮಹತ್ವವನ್ನು ಆಳವಾಗಿ ಅರಿತಿದ್ದ ಅವರು, ಚಳ್ಳಕೆರೆಯ ಹೆಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಣಕ ವಿಜ್ಞಾನ ವಿಭಾಗ ಆರಂಭಿಸಲು 23 ಗಣಕ ಯಂತ್ರಗಳನ್ನು ದೇಣಿಗೆಯಾಗಿ ನೀಡಿ 2001-2002ನೇ ಶೈಕ್ಷಣಿಕ ವರ್ಷದಿಂದ ಕೋರ್ಸ್ ಆರಂಭವಾಗಲು ಕಾರಣರಾದರು.
ಕಾಲೇಜಿನ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರ. ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಸಂಪೂರ್ಣ ನೆರವು ನೀಡಿದ ಪರಿಣಾಮ ಅದು “ಶ್ರೀ ಡಿ. ಸುಧಾಕರ್ ಕ್ರೀಡಾಂಗಣ”ವೆಂದು ಪ್ರಸಿದ್ಧಿಯಾಯಿತು. ಇಂದು ಅದು ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ಮತ್ತು ವಾಯುವಿಹಾರಿಗಳಿಗೆ ಚೈತನ್ಯದ ಕೇಂದ್ರವಾಗಿದೆ.
ಕಾಲೇಜಿನ ಸುತ್ತ ಒಂದು ಕಿಲೋಮೀಟರ್ ಉದ್ದದ ಕಲ್ಲಿನ ಕಾಂಪೌಂಡ್ ನಿರ್ಮಾಣದಲ್ಲಿಯೂ ಅವರು ಎನ್.ಎಸ್.ಎಸ್ ಹಾಗೂ ಸ್ಥಳೀಯರೊಂದಿಗೆ ಕೈಜೋಡಿಸಿ ಮಹತ್ವದ ಪಾತ್ರ ವಹಿಸಿದರು.
2003-2004ರಲ್ಲಿ ಚಳ್ಳಕೆರೆ ಶಾಸಕರಾಗಿದ್ದ ಸಂದರ್ಭದಲ್ಲಿ, ಕುವೆಂಪು ವಿಶ್ವವಿದ್ಯಾಲಯ ಶುಲ್ಕ ಹೆಚ್ಚಳದಿಂದ ಸಂಕಷ್ಟಕ್ಕೀಡಾದ ವಿದ್ಯಾರ್ಥಿಗಳ ಸುಮಾರು 2 ಲಕ್ಷ ರೂಪಾಯಿ ಶುಲ್ಕವನ್ನು ಸ್ವಂತ ಖರ್ಚಿನಲ್ಲಿ ಭರಿಸಿ ವಿದ್ಯಾರ್ಥಿ ಸ್ನೇಹಿ ನಾಯಕನಾಗಿ ಗುರುತಿಸಿಕೊಂಡರು.
“ಬರಪೀಡಿತ ಚಳ್ಳಕೆರೆ ತಾಲೂಕಿಗೆ ಶಾಶ್ವತ ಅಭಿವೃದ್ಧಿ ತರುವುದು ಶಿಕ್ಷಣದಿಂದ ಮಾತ್ರ ಸಾಧ್ಯ” ಎಂಬ ನಂಬಿಕೆಯಿಂದ ಅವರು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಪ್ರೋತ್ಸಾಹ ನೀಡಿದರು. ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಹಾಗೂ ನಾರಾಯಣಪುರದ ವಿದ್ಯಾಸಂಸ್ಥೆಗಳ ಮೂಲಕ ಅಕ್ಷರ ದಾಸೋಹ ಮುಂದುವರಿಸಿದರು.
ಹಿರಿಯೂರು ಕ್ಷೇತ್ರದ ಶಾಸಕರಾಗಿ, ಸಚಿವರಾಗಿ ಮತ್ತು ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲೂ ಶಿಕ್ಷಣ ಸೇವೆಗೆ ಆದ್ಯತೆ ನೀಡಿದರು. ವಾಣಿ ಮತ್ತು ವೇದಾ ಪ್ರಥಮ ದರ್ಜೆ ಕಾಲೇಜುಗಳ ಶೈಕ್ಷಣಿಕ ಹಾಗೂ ಭೌತಿಕ ಅಭಿವೃದ್ಧಿಗೆ ಶ್ರಮಿಸಿದರು.
ಪ್ರತಿ ವರ್ಷ ರಾಜ್ಯ ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ₹50 ಸಾವಿರದಿಂದ ₹1 ಲಕ್ಷವರೆಗೆ ಪ್ರೋತ್ಸಾಹಧನ ನೀಡುತ್ತಿದ್ದರು. ಸಹಾಯ ಕೋರಿ ಬಂದ ಅನೇಕ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿ ವರ್ಷಕ್ಕೆ ಕೋಟಿಗೂ ಅಧಿಕ ಮೊತ್ತವನ್ನು ಶಿಕ್ಷಣಕ್ಕಾಗಿ ವಿನಿಯೋಗಿಸುತ್ತಿದ್ದರು ಎಂಬುದು ಅತಿಶಯೋಕ್ತಿಯಲ್ಲ.
ಸಹಾಯ ಕೇಳಿ ಬಂದವರಿಗೆ ದಣಿವರಿಯದೆ ನೆರವಾಗುತ್ತಿದ್ದ ಅವರ ಸೇವಾಭಾವ, ಮದುವೆ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳಿಗೆ ನೀಡಿದ ಸಹಕಾರ ಜನಮನದಲ್ಲಿ ಸದಾ ಉಳಿಯಲಿದೆ.
ಜಾತಿ ಬಲವಿಲ್ಲದೆ ಕೇವಲ ವ್ಯಕ್ತಿತ್ವ, ಸಾಮರ್ಥ್ಯ ಮತ್ತು ಸೇವಾ ಮನೋಭಾವದಿಂದ ಜನಮನ ಗೆದ್ದ ಸ್ನೇಹಶೀಲ ರಾಜಕಾರಣಿಯಾಗಿದ್ದ ಡಿ. ಸುಧಾಕರ್ ಅವರ ಅಗಲಿಕೆ ಸಹೃದಯರಲ್ಲಿ ಅತೀವ ನೋವು ಮೂಡಿಸಿದೆ.
ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ.
— ಡಾ. ಸಿ. ಶಿವಲಿಂಗಪ್ಪ ಮೀರಾಸಾಬಿಹಳ್ಳಿ.