July 24, 2026
IMG-20260724-WA0219


ಹೊಸದುರ್ಗ, ಜು.24: ತಾಲೂಕಿನ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ನಾಗತಿಹಳ್ಳಿಮಂಜುನಾಥ್ ಅವರ ಎರಡನೇ ಕವನ ಸಂಕಲನ ‘ಕಾದಿವೆ ಪುಷ್ಪಗಳು’ ಲೋಕಾರ್ಪಣೆಗೆ ಸಜ್ಜಾಗಿದೆ. ಒಟ್ಟು 62 ಕವಿತೆಗಳನ್ನೊಳಗೊಂಡ ಈ ಕೃತಿ ಈಗಾಗಲೇ ಮುದ್ರಣಗೊಂಡಿದ್ದು, ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ.
ಈ ಹಿಂದೆ 2023ರಲ್ಲಿ ನಾಗತಿಹಳ್ಳಿಮಂಜುನಾಥ್ ಅವರು ರಚಿಸಿದ ‘ಹೊನ್ನಾರ’ ಕೃತಿಗೆ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಶ್ರೀವಾಣಿ ನೀಡಿ ಲೋಕಾರ್ಪಣೆಗೊಳಿಸಿದ್ದರು. ಆ ಕೃತಿಗೆ ಸಾಹಿತ್ಯ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತು ಲೇಖಕರಿಗೆ ಜನಮನ್ನಣೆ ತಂದುಕೊಟ್ಟಿತ್ತು.
ನಾಗತಿಹಳ್ಳಿಮಂಜುನಾಥ್ ಅವರು ಕಳೆದ ಸುಮಾರು 25 ವರ್ಷಗಳಿಂದ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ತಾಲೂಕು ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಉಪಾಧ್ಯಕ್ಷರಾಗಿಯೂ ಹಾಗೂ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿಯೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಮಾಡದಕೆರೆ ಹೋಬಳಿಯ ದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗತಿಹಳ್ಳಿ ಗ್ರಾಮದವರಾದ ಅವರು, ಹಿರಿಯ ಪತ್ರಕರ್ತ ಎನ್.ಕೆ. ತಿಪ್ಪೇಸ್ವಾಮಿ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆ ಶ್ರೀಮತಿ ಮಂಜಮ್ಮ ಅವರ ಪುತ್ರರಾಗಿದ್ದು, ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಕರಿಯಪ್ಪ–ಈರಮ್ಮ ಅವರ ಮಮ್ಮೋಗರಾಗಿದ್ದಾರೆ.
‘ಕಾದಿವೆ ಪುಷ್ಪಗಳು’ ಕವನ ಸಂಕಲನಕ್ಕೆ ಹೊಸದುರ್ಗದ ಕವಿ ಹಾಗೂ ಉಪನ್ಯಾಸಕ ನಿಸಾರ್ ಅಹಮ್ಮದ್ ಮುನ್ನುಡಿ ಬರೆದಿದ್ದು, ದಾವಣಗೆರೆಯ ಪ್ರಗತಿಪರ ಚಿಂತಕ ರಾಜು ಹೆಚ್. ಬುಳಸಾಗರ ಆಶಯ ನುಡಿಗಳನ್ನು ಬರೆದಿದ್ದಾರೆ. ಲೇಖಕ ಸಂಕಲ್ಪ ಬೆನ್ನುಡಿ ಬರೆದಿದ್ದು, ಹೆಸರಾಂತ ಅಮ್ಮಯ್ಯ ಪಬ್ಲಿಕೇಷನ್ ಈ ಕೃತಿಯನ್ನು ಪ್ರಕಟಿಸಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading