August 30, 2026
IMG-20260830-WA0420

ಹೊಸದುರ್ಗ: ಕವಿತೆಗಳು ಕೇವಲ ವೈಯಕ್ತಿಕ ಭಾವನೆಗಳ ಅಭಿವ್ಯಕ್ತಿಗೆ ಸೀಮಿತವಾಗದೆ, ಸಮಾಜದ ನೈಜ ಸಮಸ್ಯೆಗಳು, ಜನಸಾಮಾನ್ಯರ ಬದುಕಿನ ಸಂಕಷ್ಟಗಳು ಹಾಗೂ ಸಾಮಾಜಿಕ ವಾಸ್ತವಗಳಿಗೆ ಧ್ವನಿಯಾಗಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪಿ.ಎಲ್.ಲೋಕೇಶ್ವರಪ್ಪ ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ಸಾಹಿತಿ ಹಾಗೂ ಪತ್ರಕರ್ತ ನಾಗತಿಹಳ್ಳಿ ಮಂಜುನಾಥ್ ರವರ ಸ್ವರಚಿತ ಎರಡನೇ ಕವನ ಸಂಕಲನ ‘ಕಾದಿವೆ ಪುಷ್ಪಗಳು’ ಬಿಡುಗಡೆ ಸಮಾರಂಭದಲ್ಲಿ ಕೃತಿ ಜನಾರ್ಪಣೆಗೊಳಿಸಿ ಮಾತನಾಡಿದ ಅವರು, ಹೊಸದುರ್ಗದಲ್ಲಿ ಸಾಹಿತ್ಯಿಕ ವಾತಾವರಣ ನಿರ್ಮಾಣಗೊಳ್ಳಲು ಹಿಂದೆ ಅನೇಕ ಸಾಹಿತ್ಯಾಸಕ್ತರು ಶ್ರಮಿಸಿದ್ದಾರೆ. ಅದರ ಫಲವಾಗಿ ಇದೀಗ ಪುಸ್ತಕ ಬಿಡುಗಡೆ, ಕವಿಗೋಷ್ಠಿ ಹಾಗೂ ವಿವಿಧ ಸಾಹಿತ್ಯಿಕ ಚಟುವಟಿಕೆಗಳು ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.

‘ಕಾದಿವೆ ಪುಷ್ಪಗಳು’ ಸಂಕಲನದಲ್ಲಿ ಒಟ್ಟು 62 ಕವಿತೆಗಳಿದ್ದು, ಅವುಗಳಲ್ಲಿ ಸುಮಾರು 21–22 ಕವಿತೆಗಳು ಭಕ್ತಿ ಮತ್ತು ಆಧ್ಯಾತ್ಮಿಕ ಆಶಯವನ್ನು ಹೊಂದಿವೆ. ಅಲ್ಲಮಪ್ರಭು, ದುರ್ಗಾಂಬಿಕೆ, ಕೂಡಲಸಂಗಮ, ತೇರುಮಲ್ಲೇಶ್ವರ, ಯಲ್ಲಮ್ಮ ಸೇರಿದಂತೆ ವಿವಿಧ ದೈವಿಕ ನೆಲೆಗಳು ಕವಿತೆಗಳಲ್ಲಿ ಪ್ರತಿಫಲಿಸಿವೆ. ಇನ್ನೂ ಹಲವು ಕವಿತೆಗಳು ಪ್ರೇಮ, ಒಲವು, ಮಾನವೀಯ ಸಂಬಂಧ ಹಾಗೂ ಭಾವನೆಗಳನ್ನು ಕೇಂದ್ರವಾಗಿಟ್ಟುಕೊಂಡಿವೆ ಎಂದು ವಿವರಿಸಿದರು.

ಭಕ್ತಿ ಕಾವ್ಯದಲ್ಲಿ ಕೇವಲ ದೇವರ ವರ್ಣನೆಯಷ್ಟೇ ಮುಖ್ಯವಲ್ಲ; ಭಕ್ತಿ ಮತ್ತು ಭಾವಗಳ ಸಮನ್ವಯ ಅಗತ್ಯ. ಕನಕದಾಸರ ‘ತೊರೆದು ಜೀವಿಸಬಹುದೇ’ ಗೀತೆಯು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಅದೇ ರೀತಿ ಕನ್ನಡದ ಬೇಂದ್ರೆ, ಕುವೆಂಪು ಹಾಗೂ ಇಂಗ್ಲಿಷ್‌ನ ವರ್ಡ್ಸ್‌ವರ್ತ್ ಅವರ ಕಾವ್ಯ ಪರಂಪರೆಯಲ್ಲಿ ಪ್ರೇಮ ಮತ್ತು ಪ್ರಕೃತಿ ಭಾವನೆಗಳಿಗೆ ದೊರೆತ ಮಹತ್ವವನ್ನು ಇಂದಿನ ಕವಿಗಳು ಅಧ್ಯಯನ ಮಾಡಬೇಕು ಎಂದರು.

ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಸಂಕಷ್ಟ, ಅಸಮಾನತೆ ಸೇರಿದಂತೆ ಸಮಾಜ ಎದುರಿಸುತ್ತಿರುವ ಹಲವು ಸಮಸ್ಯೆಗಳ ನಡುವೆ ಕವಿಗಳು ಕೇವಲ ವೈಯಕ್ತಿಕ ಭಾವನೆಗಳಿಗೆ ಸೀಮಿತವಾಗದೆ, ಜನಸಾಮಾನ್ಯರ ಬದುಕಿನ ನೋವು-ನಲಿವುಗಳನ್ನು ಸಾಹಿತ್ಯದ ವಸ್ತುವಾಗಿಸಿಕೊಳ್ಳಬೇಕು. ಯಾವುದೇ ಘಟನೆ ಅಥವಾ ಅನುಭವ ಕವಿಯ ಮನಸ್ಸಿನಲ್ಲಿ ಮಥನಗೊಂಡು, ಭಾವನೆ ಹಾಗೂ ಚಿಂತನೆಯೊಂದಿಗೆ ಅಭಿವ್ಯಕ್ತಿಗೊಂಡಾಗ ಉತ್ತಮ ಕವಿತೆ ರೂಪುಗೊಳ್ಳುತ್ತದೆ ಎಂದು ಹೇಳಿದರು.

ಕವನ ಸಂಕಲನದ ವಿಮರ್ಶೆಯಲ್ಲಿ ಮಾತನಾಡಿದ ಸಾಹಿತ್ಯಾಸಕ್ತರು, ‘ಕಾದಿವೆ ಪುಷ್ಪಗಳು’ ಕೃತಿಯಲ್ಲಿ ಸಾಮಾಜಿಕ ವಾಸ್ತವಗಳನ್ನು ಕಾವ್ಯದ ಮೂಲಕ ಕಟ್ಟಿಕೊಡುವ ಪ್ರಯತ್ನ ಶ್ಲಾಘನೀಯವಾಗಿದೆ. ‘ನಮ್ಮ ಗೆಳೆಯರು’ ಕವಿತೆಯಲ್ಲಿ ಸ್ನೇಹಿತರ ವಿಭಿನ್ನ ಸ್ವಭಾವಗಳನ್ನು ಕಟ್ಟಿಕೊಡುವ ಪ್ರಯತ್ನವಿದ್ದು, ನೇರ ಹೇಳಿಕೆಗಳ ಬದಲಾಗಿ ಮತ್ತಷ್ಟು ಸೃಜನಶೀಲ ಹಾಗೂ ಕಲಾತ್ಮಕ ಅಭಿವ್ಯಕ್ತಿಯನ್ನು ಬಳಸಿದ್ದರೆ, ಕವಿತೆ ಇನ್ನಷ್ಟು ಪರಿಣಾಮಕಾರಿಯಾಗುತ್ತಿತ್ತು ಎಂದು ಸಲಹೆ ನೀಡಿದರು.

ಕವಿಯ ಅನುಭವಗಳು ಮನಸ್ಸಿನಲ್ಲಿ ಮಾಗಿ, ಬೆಂದು, ಭಾವನೆ ಹಾಗೂ ಚಿಂತನೆಯೊಂದಿಗೆ ರೂಪುಗೊಂಡಾಗ ಉತ್ತಮ ಕವಿತೆ ಹುಟ್ಟುತ್ತದೆ. ಕವಿಗಳು ಪ್ರಶಂಸೆಯಿಂದ ಹಿಗ್ಗದೆ, ವಿಮರ್ಶೆಯನ್ನು ಆತ್ಮಾವಲೋಕನಕ್ಕೆ ಬಳಸಿಕೊಳ್ಳಬೇಕು. ಕಾಲದ ಪರೀಕ್ಷೆಯಲ್ಲಿ ಗಟ್ಟಿಯಾದ ಸಾಹಿತ್ಯ ಮಾತ್ರ ಉಳಿಯುತ್ತದೆ. ಆದ್ದರಿಂದ ಹೊಸ ತಲೆಮಾರಿನ ಬರಹಗಾರರು ಸಮಾಜವನ್ನು ಆಳವಾಗಿ ಅಧ್ಯಯನ ಮಾಡಿ ಜವಾಬ್ದಾರಿಯುತ ಹಾಗೂ ಸೃಜನಶೀಲ ಸಾಹಿತ್ಯ ರಚಿಸಬೇಕು ಎಂದು ಸಲಹೆ ನೀಡಲಾಯಿತು.

ಸಾಹಿತಿ ಹಾಗೂ ಪತ್ರಕರ್ತ ನಾಗತಿಹಳ್ಳಿ ಮಂಜುನಾಥ್ ಮಾತನಾಡಿ, ಪತ್ರಿಕೋದ್ಯಮ ಮತ್ತು ಸಾಹಿತ್ಯವನ್ನು ಬದುಕಿನ ಎರಡು ಪ್ರಮುಖ ಆಯಾಮಗಳನ್ನಾಗಿ ಮಾಡಿಕೊಂಡು ಸಮಾಜದ ನೋವು-ನಲಿವು, ಜನಸಾಮಾನ್ಯರ ಬದುಕಿನ ತಲ್ಲಣಗಳು, ಸಾಮಾಜಿಕ ಸಮಸ್ಯೆಗಳು ಹಾಗೂ ನಾಡು-ನುಡಿಯ ವಿಚಾರಗಳನ್ನು ಬರಹಗಳ ಮೂಲಕ ದಾಖಲಿಸುತ್ತಾ ಬಂದಿರುವುದಾಗಿ ಹೇಳಿದರು.

1995ರಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿ, ವಿವಿಧ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಸೇವೆ ಸಲ್ಲಿಸಿದ್ದು, ಪತ್ರಿಕೋದ್ಯಮದ ಜವಾಬ್ದಾರಿಗಳ ನಡುವೆಯೂ ಕಾವ್ಯ, ಲೇಖನ, ವಿಮರ್ಶೆ ಹಾಗೂ ಅಂಕಣ ಬರಹಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಮತ್ತಷ್ಟು ಸೇವೆ ಸಲ್ಲಿಸಬೇಕೆಂಬ ಮನದಾಸೆ. ನಾಗತಿಹಳ್ಳಿ ಗ್ರಾಮದ ಮಣ್ಣಿನ ಸಂಸ್ಕಾರ, ತಂದೆ ಹಾಗೂ ಹಿರಿಯ ಪತ್ರಕರ್ತ ಎನ್.ಕೆ. ತಿಪ್ಪೇಸ್ವಾಮಿ, ತಾಯಿ ಮಂಜಮ್ಮ ಅವರ ಸೇವಾ ಮನೋಭಾವ ಮತ್ತು ಕುಟುಂಬದ ಹಿರಿಯರಾದ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಕರಿಯಪ್ಪ ಅವರ ಆದರ್ಶಗಳು ತಮ್ಮ ಬರವಣಿಗೆಯ ಮೇಲೆ ಪ್ರಭಾವ ಬೀರಿವೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಹಾಗೂ ನಾಗತಿಹಳ್ಳಿ ಮಂಜುನಾಥ್ ಅವರ ತಂದೆ ತಿಪ್ಪೇಸ್ವಾಮಿ ಮಾತನಾಡಿ, ಹಣ, ಆಸ್ತಿ-ಪಾಸ್ತಿ ಹಾಗೂ ಒಡವೆಗಳಿಗಿಂತ ಮಕ್ಕಳಿಗೆ ನೀಡುವ ಉತ್ತಮ ಶಿಕ್ಷಣವೇ ಜೀವನದ ಅತ್ಯಂತ ಶ್ರೇಷ್ಠ ಆಸ್ತಿ. ಶಿಕ್ಷಣದ ಮೂಲಕ ಮಕ್ಕಳು ಜ್ಞಾನ, ಸಂಸ್ಕಾರ ಹಾಗೂ ಆತ್ಮವಿಶ್ವಾಸ ಬೆಳೆಸಿಕೊಂಡು ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು. ತಮ್ಮ ಮಗ ಮಂಜುನಾಥ್ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಾಡುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಹಿರಿಯರು ಹಾಗೂ ಜ್ಞಾನಿಗಳ ಮಾರ್ಗದರ್ಶನ ಪಡೆದು ನಿರಂತರ ಓದು ಮತ್ತು ಅಧ್ಯಯನದ ಮೂಲಕ ಬರವಣಿಗೆಯನ್ನು ಮತ್ತಷ್ಟು ಪರಿಪೂರ್ಣಗೊಳಿಸಬೇಕು. ಬರವಣಿಗೆಯಲ್ಲಿನ ಲೋಪದೋಷಗಳನ್ನು ಗುರುತಿಸಿ ತಿದ್ದಿಕೊಳ್ಳುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ಹಾರೈಸಿದರು.

ಕೃತಿಯ ಮುದ್ರಣ ಕಾರ್ಯವನ್ನು ದೇವಿಗೆರೆ ಅಮ್ಮಯ್ಯ ಪಬ್ಲಿಕೇಷನ್‌ನ ಸದಾಶಿವ ಡಿ.ಓ. (ಸಂಕಲ್ಪ) ನಿರ್ವಹಿಸಿದ್ದಾರೆ. ಸಾಹಿತ್ಯ ಪಯಣದಲ್ಲಿ ಪ್ರೋತ್ಸಾಹ, ಸಲಹೆ ಹಾಗೂ ಸಹಕಾರ ನೀಡಿದ ಕುಟುಂಬದವರು, ಸ್ನೇಹಿತರು, ಸಹೋದ್ಯೋಗಿಗಳು, ಸಾಹಿತ್ಯಾಸಕ್ತರು ಹಾಗೂ ಪತ್ರಿಕಾ ಬಳಗದವರಿಗೆ ನಾಗತಿಹಳ್ಳಿ ಮಂಜುನಾಥ್ ಕೃತಜ್ಞತೆ ಸಲ್ಲಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಆರ್. ಶಾಂತಪ್ಪ ವಹಿಸಿದ್ದರು. ಮಾಜಿ ಅಧ್ಯಕ್ಷರಾದ ಪಿ.ಎಲ್. ಲೋಕೇಶ್ವರಪ್ಪ, ಮೆಂಗಸಂದ್ರ ಧನಂಜಯ್, ಬಾ. ಮೈಲಾರಪ್ಪ, ಹೆಗ್ಗೆರೆ ರಂಗಪ್ಪ, ಎಂ.ಬಿ.ತಿಪ್ಪೇಸ್ವಾಮಿ, ಪರಿಷತ್ತಿನ ಕಾರ್ಯದರ್ಶಿಗಳಾದ ರಮೇಶ್, ಕಲಾವಿದ ಚಂದ್ರು, ಶಿಕ್ಷಣ ಪ್ರೇಮಿ ಸಫಾರಿ ಶಿವಲಿಂಗಪ್ಪ, ಚಿಂತಕರಾದ ರಾಜು ಹೆಚ್. ಬುಳಸಾಗರ, ಹೆಚ್.ಎಸ್.ನವೀನ್ ಕುಮಾರ್ ಸೇರಿದಂತೆ ಸಾಹಿತ್ಯಾಸಕ್ತರು, ಪತ್ರಕರ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಕೋಟ್ ಹಾಕಿ.

ನನ್ನ ಮೊದಲ ಕವನ ಸಂಕಲನ ‘ಹೊನ್ನಾರ’ ಸಾಹಿತ್ಯಾಸಕ್ತರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಅದೇ ಪ್ರೋತ್ಸಾಹ ‘ಕಾದಿವೆ ಪುಷ್ಪಗಳು’ ಕೃತಿಗೆ ಸ್ಫೂರ್ತಿಯಾಗಿದೆ. ಸಂಕಲನದಲ್ಲಿರುವ ಹಲವು ಕವಿತೆಗಳು ತಮ್ಮ ಕಾಲೇಜು ದಿನಗಳಲ್ಲಿ ರಚಿಸಿದವುಗಳಾಗಿದ್ದು, ಕಾಲಾನುಭವದೊಂದಿಗೆ ಅವುಗಳನ್ನು ಮರುಪರಿಶೀಲಿಸಿ ಕೃತಿಯ ರೂಪ ನೀಡಲಾಗಿದೆ. ‘ಕಾದಿವೆ ಪುಷ್ಪಗಳು’ ಎಂಬ ಶೀರ್ಷಿಕೆಯ ಮೂಲಕ ಬದುಕಿನಲ್ಲಿ ಎಷ್ಟೇ ಸಂಕಷ್ಟಗಳು ಎದುರಾದರೂ ಹೊಸತನ, ಸೌಂದರ್ಯ ಹಾಗೂ ಭರವಸೆಯ ಹೂವುಗಳು ಅರಳುತ್ತಲೇ ಇರುತ್ತವೆ ಎಂಬ ಆಶಾವಾದವನ್ನು ವ್ಯಕ್ತಪಡಿಸಲಾಗಿದೆ. ಮಾನವ ಸಂಬಂಧಗಳ ಸೂಕ್ಷ್ಮತೆ, ಪ್ರಕೃತಿ ಸೌಂದರ್ಯ, ನಾಡು-ನುಡಿಯ ಮೇಲಿನ ಪ್ರೀತಿ ಹಾಗೂ ಬದುಕಿನ ಕುರಿತ ಚಿಂತನೆಗಳು ಕವನಗಳಲ್ಲಿ ಪ್ರತಿಫಲಿಸಿವೆ.

ನಾಗತಿಹಳ್ಳಿ ಮಂಜುನಾಥ್
ಸಾಹಿತಿ ಮತ್ತು ಪತ್ರಕರ್ತರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading