August 27, 2026
IMG-20260827-WA0166

ಚಳ್ಳಕೆರೆ: ತಾಲೂಕಿನ ನನ್ನಿವಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಟ್ಟಿಗಳಿಂದ ನಗರದಲ್ಲಿರುವ ಶಾಲೆಗಳಿಗೆ ಪ್ರತಿದಿನ ಬರುವ ವಿದ್ಯಾರ್ಥಿಗಳು ಸೂಕ್ತ ಸಾರಿಗೆ ವ್ಯವಸ್ಥೆಯ ಕೊರತೆಯಿಂದ ಅಪಾಯಕಾರಿ ಪ್ರಯಾಣಕ್ಕೆ ಮುಂದಾಗುತ್ತಿದ್ದಾರೆ.
ಚಳ್ಳಕೆರೆ ತಾಲೂಕು ಕೇಂದ್ರದಿಂದ ಕೇವಲ ಹತ್ತು ಕಿಲೋಮೀಟರ್ ದೂರದಲ್ಲಿರುವ ನನ್ನಿವಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಮಾರು 34 ಹಟ್ಟಿಗಳಿಗೆ ಸಕಾಲಕ್ಕೆ ಸಾರಿಗೆ ಬಸ್ ವ್ಯವಸ್ಥೆಯೇ ಇಲ್ಲ ಎಂಬುದು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಪ್ರಮುಖ ಆರೋಪವಾಗಿದೆ.
ಈ ಪಂಚಾಯತಿ ವ್ಯಾಪ್ತಿಯ ಸಣ್ಣ ಸಣ್ಣ ಮಜಾರೆ ಗ್ರಾಮಗಳಂತಿರುವ ಹಟ್ಟಿಗಳಲ್ಲಿ ಒಂದರಿಂದ ಐದನೇ ತರಗತಿವರೆಗೆ ಮಾತ್ರ ಶಾಲೆಗಳಿವೆ. ಪ್ರೌಢಶಾಲಾ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ನನ್ನಿವಾಳ ಅಥವಾ ಚಳ್ಳಕೆರೆ ನಗರಕ್ಕೆ ಬರಬೇಕಾದ ಅನಿವಾರ್ಯತೆ ಇದೆ. ಬಹುತೇಕ ವಿದ್ಯಾರ್ಥಿಗಳು ಚಳ್ಳಕೆರೆ ನಗರದ ಶಾಲೆಗಳಲ್ಲಿ ದಾಖಲಾತಿ ಪಡೆದಿದ್ದಾರೆ.
ಆದರೆ ಶಾಲಾ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಲಗೇಜ್ ಆಟೋಗಳನ್ನೇ ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಒಬ್ಬ ವಿದ್ಯಾರ್ಥಿಗೆ ಹತ್ತು ರೂಪಾಯಿ ಪಡೆದು, 25 ರಿಂದ 30 ವಿದ್ಯಾರ್ಥಿಗಳನ್ನು ಲಗೇಜ್ ಆಟೋದಲ್ಲಿ ಕುರಿಗಳಂತೆ ತುಂಬಿಕೊಂಡು ಸಾಗಿಸಲಾಗುತ್ತಿದೆ ಎನ್ನಲಾಗಿದೆ. ಶಾಲೆಗೆ ಸಮಯಕ್ಕೆ ತಲುಪಬೇಕೆಂಬ ಅನಿವಾರ್ಯತೆಯಿಂದ ಕೆಲ ವಿದ್ಯಾರ್ಥಿಗಳು ಆಟೋದ ಮೇಲ್ಭಾಗದಲ್ಲಿಯೂ ಕುಳಿತು ಪ್ರಾಣ ಕೈಯಲ್ಲಿಡಿದು ಪ್ರಯಾಣಿಸುವ ದೃಶ್ಯಗಳು ಕಂಡುಬರುತ್ತಿವೆ.
ನನಸಾಗದ ನಗರ ಸಾರಿಗೆ ಕನಸು
ಚಿತ್ರದುರ್ಗ ಜಿಲ್ಲೆಯಲ್ಲಿ ಚಳ್ಳಕೆರೆ ತಾಲೂಕು ವೇಗವಾಗಿ ವಿಸ್ತಾರವಾಗುತ್ತಿದೆ. ನಗರದ 31 ವಾರ್ಡ್‌ಗಳಲ್ಲಿ 80 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ನನ್ನಿವಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ 34 ಹಟ್ಟಿಗಳು ಸೇರಿದಂತೆ ರಾಮಜೋಗಿಹಳ್ಳಿ, ಸೋಮಗುದ್ದು, ಸಾಣೀಕೆರೆ, ನಗರಂಗೆರೆ, ದೊಡ್ಡೇರಿ ಮತ್ತು ಬುಡ್ನಹಟ್ಟಿ ಸೇರಿದಂತೆ ವಿವಿಧ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ನೂರಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ನಗರ ಸಾರಿಗೆ ವ್ಯವಸ್ಥೆ ಅಗತ್ಯವಾಗಿದೆ ಎಂಬ ಬೇಡಿಕೆ ಸಾರ್ವಜನಿಕರು ಹಾಗೂ ಸಾಮಾಜಿಕ ಸಂಘಟನೆಗಳಿಂದ ನಿರಂತರವಾಗಿ ಕೇಳಿಬರುತ್ತಿದೆ.
ಆದರೆ ಹಲವು ವರ್ಷಗಳಿಂದ ಹೋರಾಟ ನಡೆದಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಸಾರಿಗೆ ಸೌಲಭ್ಯ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಚಳ್ಳಕೆರೆ ನಗರದಲ್ಲಿ ಬೃಹತ್ ಸಾರಿಗೆ ನಿಲ್ದಾಣ ಹಾಗೂ ಘಟಕ ಸ್ಥಾಪನೆಯಾಗಿದ್ದರೂ, ಸುತ್ತಮುತ್ತಲಿನ ಗ್ರಾಮಗಳಿಗೆ ಅಗತ್ಯವಿರುವಷ್ಟು ಬಸ್‌ಗಳ ವ್ಯವಸ್ಥೆಯಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇದರಿಂದ ನನ್ನಿವಾಳ ಭಾಗದ ಹಟ್ಟಿಗಳು ಸೇರಿದಂತೆ ದೇವರಮರಿಕುಂಟೆ, ನಗರಂಗೆರೆ, ದೊಡ್ಡೇರಿ, ರಂಗವ್ವನಹಳ್ಳಿ, ಬೊಮ್ಮಸಮುದ್ರ ಹಾಗೂ ಮೀರಾಸಾಬಿಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಜನರು ಲಗೇಜ್ ಆಟೋಗಳಲ್ಲಿ ಪ್ರಯಾಣಿಸುವ ಪರಿಸ್ಥಿತಿ ಮುಂದುವರಿದಿದೆ.
ತಗ್ಗುಗುಂಡಿಗಳಿರುವ ಗ್ರಾಮೀಣ ರಸ್ತೆಗಳಲ್ಲಿ ಈ ರೀತಿ ಜನರನ್ನು ತುಂಬಿಕೊಂಡು ಸಂಚರಿಸುವ ಆಟೋಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಈ ಹಿಂದೆ ಆಟೋಗಳು ಪಲ್ಟಿಯಾಗಿ ಅಪಘಾತಗಳು ಸಂಭವಿಸಿರುವ ಉದಾಹರಣೆಗಳೂ ಇವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ನಗರ ಸಾರಿಗೆ ವ್ಯವಸ್ಥೆಗೆ ಆಗ್ರಹ
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ರೈತ ಸಂಘದ ಚಳ್ಳಕೆರೆ ಉಪಾಧ್ಯಕ್ಷ ಕೆ.ಪಿ. ಭೂತಯ್ಯ, ನಗರಕ್ಕೆ ಸಾರಿಗೆ ನಿಲ್ದಾಣ ಬೇಕೆಂದು ನಿರಂತರ ಹೋರಾಟ ಮಾಡಿದ ಪರಿಣಾಮವಾಗಿ ಬೃಹತ್ ನಿಲ್ದಾಣ ನಿರ್ಮಾಣವಾಗಿದೆ. ಆದರೆ ಅಗತ್ಯ ಪ್ರಮಾಣದ ಬಸ್‌ಗಳ ಸೌಲಭ್ಯ ಇನ್ನೂ ದೊರೆತಿಲ್ಲ ಎಂದು ಹೇಳಿದ್ದಾರೆ.
ರೈತರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗ್ರಾಮಾಂತರ ಪ್ರದೇಶಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಹೋರಾಟ ಮಾಡಲಾಗಿದೆ. ಸಚಿವ ಟಿ. ರಘುಮೂರ್ತಿ ಅವರ ಸ್ಪಂದನೆಯಿಂದ ಕೆಲವು ಗ್ರಾಮಗಳಿಗೆ ಅನುಕೂಲವಾಗಿದೆ. ಆದರೆ ನನ್ನಿವಾಳ ಭಾಗದ ಹಟ್ಟಿಗಳು ಸೇರಿದಂತೆ ನಗರದ ಸುತ್ತಮುತ್ತಲಿನ ನೂರಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸಮಗ್ರ ನಗರ ಸಾರಿಗೆ ವ್ಯವಸ್ಥೆ ಜಾರಿಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದೇ ವೇಳೆ ರಾಜ್ಯ ಶಿಕ್ಷಣ ಪರಿಷತ್ ನಗರಂಗೆರೆ ಅಧ್ಯಕ್ಷ ಎಸ್. ರವಿಕುಮಾರ್, ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕೇವಲ ಜನಸಂಖ್ಯೆಯನ್ನು ಮಾತ್ರ ಮಾನದಂಡವಾಗಿಸಬಾರದು ಎಂದು ಆಗ್ರಹಿಸಿದ್ದಾರೆ.
ಗ್ರಾಮೀಣ ಪ್ರದೇಶದ ವಿಸ್ತೀರ್ಣ, ಜನರ ಸಂಚಾರದ ಸಮಸ್ಯೆ ಹಾಗೂ ವಿದ್ಯಾರ್ಥಿಗಳ ಶಿಕ್ಷಣದ ಅಗತ್ಯವನ್ನು ಪರಿಗಣಿಸಿ ಬಸ್ ವ್ಯವಸ್ಥೆ ಕಲ್ಪಿಸಬೇಕು. ವಿಶೇಷವಾಗಿ ಶಾಲಾ ಸಮಯಕ್ಕೆ ಸರಿಯಾಗಿ ಬೆಳಗ್ಗೆ ಹಾಗೂ ಸಂಜೆ ಶಾಲೆ ಬಿಡುವ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಮಹಿಳೆಯರ ಅನುಕೂಲಕ್ಕಾಗಿ ಶಕ್ತಿ ಯೋಜನೆ ಜಾರಿಗೊಳಿಸಿರುವ ರೀತಿಯಲ್ಲೇ, ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಸುರಕ್ಷಿತ ಪ್ರಯಾಣದ ದೃಷ್ಟಿಯಿಂದ ಕಸಬಾ ವ್ಯಾಪ್ತಿಯ ಹಳ್ಳಿಗಳಿಗೆ ಸೂಕ್ತ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಲಗೇಜ್ ಆಟೋಗಳಲ್ಲಿ ಪ್ರಾಣ ಕೈಯಲ್ಲಿಡಿದು ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿಗಳ ಸಮಸ್ಯೆಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಾರಿಗೆ ಇಲಾಖೆ ತಕ್ಷಣ ಸ್ಪಂದಿಸಿ, ಶಾಲಾ ಸಮಯಕ್ಕೆ ಅನುಗುಣವಾಗಿ ಬಸ್ ವ್ಯವಸ್ಥೆ ಕಲ್ಪಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading