August 26, 2026
IMG-20260826-WA0249


ವರದಿ: ಪಿ.ಟಿ.ಸಿದ್ಧೇಶ್ ಲಕ್ಕಿಹಳ್ಳಿ
ಹೊಸದುರ್ಗ: ಪತ್ರಿಕೋದ್ಯಮ ಮತ್ತು ಸಾಹಿತ್ಯ ಪರಸ್ಪರ ಪೂರಕ ಕ್ಷೇತ್ರಗಳು ಎಂಬುದನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿರುವ ಹಿರಿಯ ಪತ್ರಕರ್ತ, ಕವಿ ಹಾಗೂ ಸಾಹಿತಿ ನಾಗತಿಹಳ್ಳಿ ಮಂಜುನಾಥ್ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ. ಸುಮಾರು ಮೂರು ದಶಕಗಳಿಗೂ ಅಧಿಕ ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಾ, ಸಮಾಜಮುಖಿ ಚಿಂತನೆಗಳನ್ನು ಕವನ, ಲೇಖನ ಹಾಗೂ ಅಂಕಣಗಳ ಮೂಲಕ ಓದುಗರಿಗೆ ತಲುಪಿಸುತ್ತಿರುವ ಅವರು, ಇದೀಗ ತಮ್ಮ ಎರಡನೇ ಕವನ ಸಂಕಲನ “ಕಾದಿವೆ ಪುಷ್ಪಗಳು” ಬಿಡುಗಡೆಗೆ ಸಿದ್ಧತೆ ನಡೆಸಿದ್ದಾರೆ.
ಮೂಲತಃ ಹೊಸದುರ್ಗ ತಾಲೂಕಿನ ನಾಗತಿಹಳ್ಳಿ ಗ್ರಾಮದ ಗೌರವಾನ್ವಿತ ಕುಟುಂಬದವರಾದ ಮಂಜುನಾಥ್, ಸಾಹಿತ್ಯ ಮತ್ತು ಪತ್ರಿಕೋದ್ಯಮವನ್ನು ಸಮಾಜ ಪರಿವರ್ತನೆಯ ಸಾಧನವಾಗಿಸಿಕೊಂಡಿದ್ದಾರೆ. ಹಿರಿಯ ಪತ್ರಕರ್ತ ಎನ್.ಕೆ. ತಿಪ್ಪೇಸ್ವಾಮಿ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆ ಮಂಜಮ್ಮ ಅವರ ಜೇಷ್ಠ ಪುತ್ರರಾಗಿರುವ ಇವರು, ಸ್ವಾತಂತ್ರ‍್ಯ ಹೋರಾಟಗಾರ ದಿವಂಗತ ಕರಿಯಪ್ಪ ಅವರ ಮೊಮ್ಮಗ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಕುಟುಂಬದಿAದ ಬಂದ ಸೇವಾ ಮನೋಭಾವವೇ ಅವರ ವ್ಯಕ್ತಿತ್ವದ ಪ್ರಮುಖ ಆಧಾರವಾಗಿದೆ.
೧೯೯೫ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿರುವ ಮಂಜುನಾಥ್, ಹೊಸದುರ್ಗ ಬಿಂಬ, ನೀಲಮಣಿ, ಗೊರವಿನಕಲ್ಲು ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಹೊಸದುರ್ಗ ತಾಲೂಕು ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಾಜದ ಸಮಸ್ಯೆಗಳನ್ನು ಜನರ ಮುಂದಿಡುವ ಜೊತೆಗೆ ಸಾಹಿತ್ಯದ ಮೂಲಕ ಮೌಲ್ಯಗಳನ್ನು ಬಿತ್ತುವ ಕಾರ್ಯವನ್ನು ಸಮಾನಾಂತರವಾಗಿ ಮುಂದುವರಿಸಿಕೊAಡು ಬಂದಿದ್ದಾರೆ.
ಅವರ ಸಾಹಿತ್ಯಯಾನದಲ್ಲಿ ಈಗಾಗಲೇ “ಹೊನ್ನಾರ” ಕವನ ಸಂಕಲನ ಉತ್ತಮ ಮೆಚ್ಚುಗೆ ಪಡೆದಿದ್ದು, ಇದೀಗ “ಕಾದಿವೆ ಪುಷ್ಪಗಳು” ಕವನ ಸಂಕಲನ ಬಿಡುಗಡೆಗೆ ಸಜ್ಜಾಗಿದೆ. ನೂರಾರು ಕವನಗಳು, ಲೇಖನಗಳು, ವಿಮರ್ಶೆಗಳು, ಅಂಕಣ ಬರಹಗಳು ರಾಜ್ಯದ ಪ್ರಮುಖ ಪತ್ರಿಕೆಗಳು ಹಾಗೂ ವಿಶೇಷಾಂಕಗಳಲ್ಲಿ ಪ್ರಕಟಗೊಂಡಿದ್ದು, ಚಿಂತನೆಗೆ ಹಚ್ಚುವ ಬರಹಗಾರರಾಗಿ ಅವರು ಗುರುತಿಸಿಕೊಂಡಿದ್ದಾರೆ. ಚಿತ್ರದುರ್ಗ ಆಕಾಶವಾಣಿಯಲ್ಲೂ ಕವನ ವಾಚನ ಮಾಡುವ ಮೂಲಕ ತಮ್ಮ ಸಾಹಿತ್ಯ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಂಘಟನಾ ಕ್ಷೇತ್ರದಲ್ಲೂ ಮಂಜುನಾಥ್ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ತಾಲೂಕು ಚುಟುಕು ಸಾಹಿತ್ಯ ಪರಿಷತ್, ಮಕ್ಕಳ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿರುವ ಅವರು, ಪ್ರಸ್ತುತ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಉಪಾಧ್ಯಕ್ಷರಾಗಿ ಹಾಗೂ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಜ್ಯ ಮತ್ತು ಜಿಲ್ಲಾ ಮಟ್ಟದ ಅನೇಕ ಕವಿಗೋಷ್ಠಿಗಳು, ಸಾಹಿತ್ಯ ಸಮ್ಮೇಳನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಅವರು, ತಮ್ಮ ಕವನಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಮೈಸೂರು, ಚಿತ್ರದುರ್ಗ, ಹೊಸದುರ್ಗ ಸೇರಿದಂತೆ ಹಲವೆಡೆ ನಡೆದ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಅವರ ಕಾವ್ಯವಾಚನ ಗಮನ ಸೆಳೆದಿದೆ.
ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅವರಿಗೆ ರಾಜೀವ್ ಗಾಂಧಿ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ವಿಕಾಸ ರತ್ನ, ಕರ್ನಾಟಕ ಭೂಷಣ, ಜವಾಹರಲಾಲ್ ನೆಹರು ರಾಷ್ಟ್ರೀಯ ಪ್ರಶಸ್ತಿ, ಕನ್ನಡ ಗಾರುಡಿಗ, ಕನ್ನಡ ರತ್ನ, ಸಾಹಿತ್ಯ ಸೇವಾ ರತ್ನ, ಕನ್ನಡ ಸೇವಾ ರತ್ನ, ವಿಶ್ವ ಕನ್ನಡ ಸೌಹಾರ್ದ ಮಾಧ್ಯಮ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅರ್ಹತಾ ಪತ್ರ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ. ೨೦೨೫ರಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಗಣನೀಯ ಸೇವೆಗಾಗಿ ಹೊಸದುರ್ಗ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯೂ ದೊರೆತಿದೆ.
ಸರಳತೆ, ಸಜ್ಜನಿಕೆ, ದೈವಭಕ್ತಿ ಹಾಗೂ ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ನಾಗತಿಹಳ್ಳಿ ಮಂಜುನಾಥ್ ಅವರು, ನಾಡು-ನುಡಿ-ನೆಲ-ಜಲದ ಸಂರಕ್ಷಣೆಗೆ ತಮ್ಮ ಬರವಣಿಗೆಯ ಮೂಲಕ ನಿರಂತರ ಧ್ವನಿಯಾಗಿದ್ದಾರೆ. ಸಮಾಜಮುಖಿ ಪತ್ರಿಕೋದ್ಯಮ ಮತ್ತು ಮೌಲ್ಯಾಧಾರಿತ ಸಾಹಿತ್ಯದ ಮೂಲಕ ಹೊಸ ಪೀಳಿಗೆಗೆ ಪ್ರೇರಣೆಯಾಗಿರುವ ಅವರ ಸಾಹಿತ್ಯ ಪಯಣ ಇನ್ನಷ್ಟು ಸಮೃದ್ಧವಾಗಲಿ ಎಂಬುದು ಸಾಹಿತ್ಯಾಭಿಮಾನಿಗಳ ಆಶಯವಾಗಿದೆ.”

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading