August 25, 2026
IMG-20260825-WA0341

ನನ್ನಿವಾಳ, ಆಗಸ್ಟ್ 25: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಸಬಲೀಕರಣ ಹಾಗೂ ಮಕ್ಕಳ ಗುಣಾತ್ಮಕ ಕಲಿಕೆಗೆ ಸರ್ಕಾರದ ಸೌಲಭ್ಯಗಳ ಜೊತೆಗೆ ದಾನಿಗಳ ನೆರವು ಕೂಡ ಅಗತ್ಯ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ನನ್ನಿವಾಳ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಮಾರುತೇಶ.ಆರ್ ತಿಳಿಸಿದರು.

ಬೆಂಗಳೂರಿನ ಸ್ನೇಹಿತರ ಬಳಗ ಹಾಗೂ ವಿವಿಧ ಟ್ರಸ್ಟ್‌ಗಳ ನೆರವಿನಿಂದ ನನ್ನಿವಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ, ಶಾಲಾ ಬ್ಯಾಗ್, ಸ್ಟೀಲ್ ವಾಟರ್ ಬಾಟಲ್, ಪೆನ್ನು, ಪೆನ್ಸಿಲ್ ಸೇರಿದಂತೆ ವಿವಿಧ ಲೇಖನ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಲಾಯಿತು. ಇದೇ ವೇಳೆ ತಾಲ್ಲೂಕಿನ ವಿವಿಧ ಶಾಲೆಗಳಿಗೂ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾರುತೇಶ.ಆರ್, “ವಿದ್ಯೆಯೇ ಜೀವನದ ನಿಜವಾದ ಸಂಪತ್ತು. ಹಣ, ಆಸ್ತಿ, ಅಧಿಕಾರ ಕಡಿಮೆಯಾಗಬಹುದು. ಆದರೆ ಗಳಿಸಿದ ಜ್ಞಾನವನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಪ್ರತಿಯೊಬ್ಬ ಮಗುವೂ ಉತ್ತಮ ಶಿಕ್ಷಣ ಪಡೆಯಬೇಕು ಎಂಬುದು ನಮ್ಮೆಲ್ಲರ ಆಶಯವಾಗಬೇಕು” ಎಂದರು.

ಮಕ್ಕಳಿಗೆ ವಿತರಿಸಲಾಗುತ್ತಿರುವ ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್ ಸೇರಿದಂತೆ ಶಿಕ್ಷಣ ಸಾಮಗ್ರಿಗಳು ಕೇವಲ ವಸ್ತುಗಳಲ್ಲ. ಅವು ಮಕ್ಕಳ ಕನಸುಗಳನ್ನು ಬರೆಯುವ ಸಾಧನಗಳು ಹಾಗೂ ಭವಿಷ್ಯ ರೂಪಿಸುವ ಸಹಾಯಕಗಳಾಗಿವೆ. ಒಂದು ಸಣ್ಣ ಪೆನ್ನಿನಿಂದ ಬರೆಯುವ ಅಕ್ಷರವೇ ಮುಂದೆ ವೈದ್ಯ, ಶಿಕ್ಷಕ, ವಿಜ್ಞಾನಿ, ಅಧಿಕಾರಿ ಅಥವಾ ಜವಾಬ್ದಾರಿಯುತ ಪ್ರಜೆಯ ಜೀವನದ ಆರಂಭವಾಗಬಹುದು ಎಂದು ಹೇಳಿದರು.

ಮಕ್ಕಳು ದೊರೆತಿರುವ ಸಾಮಗ್ರಿಗಳನ್ನು ಗೌರವದಿಂದ ಬಳಸಿ, ಪ್ರತಿದಿನ ಶಾಲೆಗೆ ಹಾಜರಾಗಿ, ಶಿಕ್ಷಕರ ಬೋಧನೆಯನ್ನು ಗಮನವಿಟ್ಟು ಕಲಿಯಬೇಕು. ಓದು ಕೇವಲ ಅಂಕಗಳಿಗಾಗಿ ಮಾತ್ರವಲ್ಲ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದಕ್ಕೂ ಅಗತ್ಯ ಎಂದು ತಿಳಿಸಿದರು.

ಮಕ್ಕಳ ಶಿಕ್ಷಣದಲ್ಲಿ ಶಿಕ್ಷಕರಷ್ಟೇ ಪೋಷಕರ ಪಾತ್ರವೂ ಮಹತ್ವದ್ದಾಗಿದೆ. ಮಕ್ಕಳನ್ನು ಪ್ರತಿದಿನ ಶಾಲೆಗೆ ಕಳುಹಿಸುವುದು, ಅವರ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸುವುದು, ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಹಾಗೂ ಮನೆಯಲ್ಲಿ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವುದು ಪೋಷಕರ ಕರ್ತವ್ಯವಾಗಿದೆ ಎಂದರು.

“ಮಕ್ಕಳಿಗೆ ಆಸ್ತಿ ಕೊಡುವುದಕ್ಕಿಂತ ಶಿಕ್ಷಣ ನೀಡುವುದು ಶ್ರೇಷ್ಠ. ವಿದ್ಯಾದಾನವು ಎಲ್ಲಾ ದಾನಗಳಿಗಿಂತ ಶ್ರೇಷ್ಠವಾದ ದಾನವಾಗಿದೆ. ಅನ್ನದಾನವು ಒಂದು ದಿನದ ಹಸಿವನ್ನು ನೀಗಿಸಬಹುದು, ಆದರೆ ವಿದ್ಯಾದಾನವು ಇಡೀ ಜೀವನಕ್ಕೆ ಬೆಳಕಾಗುತ್ತದೆ. ಒಬ್ಬ ಮಗುವಿನ ಶಿಕ್ಷಣಕ್ಕೆ ನೀಡುವ ಸಣ್ಣ ಸಹಾಯವೂ ಆ ಮಗುವಿನ ಭವಿಷ್ಯವನ್ನು ಬದಲಾಯಿಸಬಹುದು” ಎಂದು ಮಾರುತೇಶ.ಆರ್ ಹೇಳಿದರು.

ಮಕ್ಕಳು ತಮ್ಮ ಕೈಗೆ ಸಿಕ್ಕಿರುವ ನೋಟ್ ಪುಸ್ತಕದಲ್ಲಿ ಉತ್ತಮ ಅಕ್ಷರಗಳನ್ನು ಬರೆಯುವುದರ ಜೊತೆಗೆ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳನ್ನು ತುಂಬಿಕೊಂಡು, ಜ್ಞಾನದಿಂದ ಜೀವನವನ್ನು ಬೆಳಗಿಸಿಕೊಳ್ಳಬೇಕು. ಮುಂದೆ ತಾವು ಬೆಳೆದ ನಂತರ ಮತ್ತೊಬ್ಬ ಮಗುವಿನ ಶಿಕ್ಷಣಕ್ಕೆ ನೆರವಾಗುವ ಮನೋಭಾವ ಬೆಳೆಸಿಕೊಳ್ಳಬೇಕು. ಇಂದು ಪಡೆದ ಸಹಾಯವನ್ನು ನಾಳೆ ಮತ್ತೊಬ್ಬರಿಗೆ ಸಹಾಯ ಮಾಡುವ ಮೂಲಕ ಸಾರ್ಥಕಗೊಳಿಸಬೇಕು ಎಂದು ಕರೆ ನೀಡಿದರು.

“ಶಿಕ್ಷಣ ನಮ್ಮ ಹಕ್ಕು, ಜ್ಞಾನ ನಮ್ಮ ಶಕ್ತಿ, ದಾನ ನಮ್ಮ ಸಂಸ್ಕಾರ” ಎಂದು ಅವರು ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷೆ ರೇಖಾ ಮಾತನಾಡಿ, ಶಾಲೆಯ ಬೆಳವಣಿಗೆಗೆ ನಿರಂತರ ಸಹಕಾರ ನೀಡುತ್ತಿರುವ ಎಲ್ಲಾ ಸಹೃದಯಿಗಳು ಹಾಗೂ ಕೊಡುಗೈ ದಾನಿಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ದೇವೆಂದ್ರಪ್ಪ, ಸಿಆರ್‌ಪಿ ಈಶ್ವರಪ್ಪ, ಎಸ್‌ಡಿಎಂಸಿ ಉಪಾಧ್ಯಕ್ಷ ಸತೀಶ್, ಸದಸ್ಯರಾದ ಪವಿತ್ರ, ಆಶಾ, ನಾಗಮ್ಮ, ವಿರೇಶ್, ರಾಜಶೇಖರ್, ಮುಖಂಡರಾದ ರಾಜಣ್ಣ, ಶಿವಣ್ಣ, ಯುವಕರಾದ ಮಧುಸೂದನ ಸೇರಿದಂತೆ ಶಿಕ್ಷಕರಾದ ಕರಿಬಸಮ್ಮ, ಜಯಮ್ಮ, ಯರ್ರಯ್ಯ, ಅಮೇಘಶ, ಮೇಘ, ಉಮಾದೇವಿ, ಹನುಮಂತಪ್ಪ, ರಾಧಾ, ಕೊಂಡಂಡರಾಮಸ್ವಾಮಿ, ಮಂಜಣ್ಣ ಹಾಗೂ ಇತರರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading