August 19, 2026
IMG-20260819-WA0155



ನಾಯಕನಹಟ್ಟಿ: “ಎಲ್ಲೆಂದರಲ್ಲಿ ಕಸ ಚೆಲ್ಲಬಾರದು” ಎಂದು ಮಕ್ಕಳಿಗೆ ಸ್ವಚ್ಛತೆಯ ಪಾಠ ಹೇಳಲಾಗುತ್ತಿದೆ. ಆದರೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹೊರಭಾಗದಲ್ಲಿ ಕಸದ ರಾಶಿಗಳೇ ಕಾಣಿಸುತ್ತಿರುವುದು ವಿಪರ್ಯಾಸವಾಗಿದೆ. ಶಾಲೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡುವಲ್ಲಿ ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಯಕನಹಟ್ಟಿ ಪಟ್ಟಣದ ತೇರುಬೀದಿಗೆ ತೆರಳುವ ರಸ್ತೆಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದ ರಸ್ತೆ ಬದಿಯಲ್ಲಿ ಕಸ ಸಂಗ್ರಹವಾಗಿದ್ದು, ದುರ್ವಾಸನೆ ಬೀರುತ್ತಿದೆ. ಕಸದ ರಾಶಿಯಲ್ಲಿರುವ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ನಾಯಿಗಳು ಮತ್ತು ಬಿಡಾಡಿ ದನಗಳು ರಸ್ತೆಗೆ ಎಳೆದು ಹಾಕುತ್ತಿರುವುದರಿಂದ ರಸ್ತೆಯುದ್ದಕ್ಕೂ ಕಸ ಹರಡುತ್ತಿದೆ.
ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಆವರಣವನ್ನು ಸ್ವಚ್ಛವಾಗಿಡಲು ಪ್ರಯತ್ನಿಸುತ್ತಿದ್ದರೂ, ಶಾಲೆಯ ಹೊರಭಾಗದಲ್ಲಿ ಅಕ್ಕಪಕ್ಕದ ಮನೆಗಳು ಹಾಗೂ ಅಂಗಡಿಗಳವರು ಕಸ ತಂದು ಸುರಿಸುತ್ತಿದ್ದಾರೆ ಎನ್ನಲಾಗಿದೆ. ಗಾಳಿಗೆ ಹಾರುವ ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯಗಳು ಶಾಲೆಯ ಆವರಣದೊಳಗೂ ಸೇರುತ್ತಿವೆ.
ಶಾಲೆಯ ಪಕ್ಕದಲ್ಲೇ ಬಿಸಿಯೂಟದ ಕೊಠಡಿ ಇರುವುದರಿಂದ ಕಸದ ದುರ್ವಾಸನೆ ವಿದ್ಯಾರ್ಥಿಗಳು ಹಾಗೂ ಅಡುಗೆ ಸಿಬ್ಬಂದಿಗೆ ತೊಂದರೆ ಉಂಟುಮಾಡುತ್ತಿದೆ. ಚರಂಡಿಯಿಂದಲೂ ದುರ್ವಾಸನೆ ಬರುತ್ತಿದ್ದು, ಶಾಲಾ ಪರಿಸರದಲ್ಲಿ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
430ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ
ಶಾಲೆಯಲ್ಲಿ 430ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲಾ ಆವರಣ ಹಾಗೂ ಶೌಚಾಲಯಗಳಲ್ಲಿ ಸಮರ್ಪಕ ಸ್ವಚ್ಛತೆ ಇಲ್ಲದೆ ದುರ್ವಾಸನೆ ಬೀರುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯೋಪಾಧ್ಯಾಯಿನಿ ಇಂದಿರಮ್ಮ ಅವರು ಸುಮಾರು 15 ದಿನಗಳ ಹಿಂದೆ ವಯೋನಿವೃತ್ತಿ ಹೊಂದಿದ್ದಾರೆ. ಇದೀಗ ಬಡ್ತಿ ಪಡೆದು ಮುಖ್ಯೋಪಾಧ್ಯಾಯಿನಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವವರು ಶಾಲೆಯೊಳಗಿನ ಸ್ವಚ್ಛತೆಗೆ ಆದ್ಯತೆ ನೀಡಿ ಹಂತ ಹಂತವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಶಾಲೆಯ ಹೊರಭಾಗದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಸಮರ್ಪಕವಾಗಿ ಕಸ ತೆರವುಗೊಳಿಸದಿರುವುದು ಹಾಗೂ ಸಾರ್ವಜನಿಕರು ಶಾಲೆಯ ಮುಂಭಾಗದಲ್ಲೇ ಕಸ ಸುರಿಸುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಕಸದ ರಾಶಿಯಿಂದ ಸೊಳ್ಳೆಗಳು ಹಾಗೂ ರೋಗಕಾರಕ ಜೀವಾಣುಗಳು ಉತ್ಪತ್ತಿಯಾಗುವ ಸಾಧ್ಯತೆ ಇರುವುದರಿಂದ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ. ಮಕ್ಕಳು ಪ್ರತಿನಿತ್ಯ ಓಡಾಡುವ ಪ್ರದೇಶದಲ್ಲೇ ಕಸ ಸುರಿಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಾಲೆಯ ಮುಂದೆ ಕಸ ಸುರಿಯುವುದು ಯಾವ ನ್ಯಾಯ?
ಪಟ್ಟಣ ಪಂಚಾಯಿತಿ ಕಸ ತೆರವುಗೊಳಿಸದಿರುವುದು ಒಂದು ಸಮಸ್ಯೆಯಾದರೆ, ಅಕ್ಕಪಕ್ಕದ ಮನೆಗಳು ಹಾಗೂ ಅಂಗಡಿಗಳವರು ಶಾಲೆಯ ಮುಂದೆ ಕಸ ತಂದು ಸುರಿಸುತ್ತಿರುವುದು ಮತ್ತೊಂದು ಗಂಭೀರ ಸಮಸ್ಯೆಯಾಗಿದೆ. ಮಕ್ಕಳು ಓಡಾಡುವ ಪ್ರದೇಶ ಎಂಬ ಕನಿಷ್ಠ ಅರಿವಿಲ್ಲದೆ ಕಸ ಸುರಿಸುವುದು ಖಂಡನೀಯ ಎಂದು ಸಾರ್ವಜನಿಕರು ಹೇಳಿದ್ದಾರೆ.
ಶಾಲೆಗಳ ಸುತ್ತ ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಸೂಕ್ತ ಗಾತ್ರದ ಕಸದ ಬುಟ್ಟಿಗಳನ್ನು ಅಳವಡಿಸಬೇಕು. ನಿಯಮಿತವಾಗಿ ಕಸ ತೆರವುಗೊಳಿಸುವುದರ ಜೊತೆಗೆ ಶಾಲೆಯ ಮುಂದೆ ಕಸ ಸುರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಶಾಲೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಶಾಲೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಲು ಶಾಶ್ವತ ಕ್ರಮ ಕೈಗೊಳ್ಳಬೇಕು. ಮಕ್ಕಳಿಗೆ ಸ್ವಚ್ಛತೆಯ ಪಾಠ ಹೇಳುವ ಶಾಲೆಗಳ ಸುತ್ತಲಿನ ಪರಿಸರವೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು ಪಟ್ಟಣ ಪಂಚಾಯಿತಿಯ ಜವಾಬ್ದಾರಿಯಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading