ಚಳ್ಳಕೆರೆ: ಗ್ರಾಮದ ಭವಿಷ್ಯವು ಶಾಲೆಯ ತರಗತಿ ಕೊಠಡಿಗಳಲ್ಲಿ ನಿರ್ಮಾಣವಾಗುತ್ತದೆ. ಉತ್ತಮ ಪ್ರಜೆಗಳನ್ನು ರೂಪಿಸುವ ಶಾಲೆಗಳಿಗೆ ಸರ್ಕಾರದ ಸೌಲಭ್ಯಗಳ ಜೊತೆಗೆ ಸಮುದಾಯದ ಸಹಕಾರವೂ ಅತ್ಯಂತ ಅಗತ್ಯ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಬಡ್ತಿ ಮುಖ್ಯ ಶಿಕ್ಷಕ ಮಾರುತೇಶ್ ಹೇಳಿದರು.
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಗ್ರಾಮದ ಸರ್ಕಾರಿ ಶಾಲೆಯಲ್ಲಿ ದಾನಿಗಳಿಂದ ಕೊಡುಗೆಯಾಗಿ ನೀಡಲಾದ ಅಗತ್ಯ ವಸ್ತುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿದರು. ಶಾಲೆಗೆ ಅಗತ್ಯವಿರುವ ವಸ್ತುಗಳನ್ನು ಗ್ರಾಮದ ಮುಖಂಡರು ಹಾಗೂ ಯುವಕರು ನೀಡುತ್ತಿರುವುದು ಶ್ಲಾಘನೀಯ. ಇಂತಹ ಸೇವಾ ಮನೋಭಾವದಿಂದ ಶಾಲೆಯ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಗೆ ಅಗತ್ಯವಿದ್ದ ಶನಿವಾರದ ಶಾಲಾ ಸಮವಸ್ತ್ರ ಹಾಗೂ ಡಯಾಸ್ ಅನ್ನು ದಾನಿಗಳು ಕೊಡುಗೆಯಾಗಿ ನೀಡಿದರು. ಸಮವಸ್ತ್ರವನ್ನು ಕೊಡುಗೆಯಾಗಿ ನೀಡಿದ ಶ್ರೀಮತಿ ಸುಜಾತ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಬಸವರಾಜ್ ದಂಪತಿಯನ್ನು, ಡಯಾಸ್ ಕೊಡುಗೆ ನೀಡಿದ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಕಲಾವಿದ ಶ್ರೀ ಹನುಮಂತಪ್ಪ ಪೂಜಾರ್ ಮತ್ತು ಶ್ರೀಮತಿ ಜಲಜಾಕ್ಷಿ–ಶ್ರೀ ಅಜ್ಜಣ್ಣ ದಂಪತಿಯನ್ನು ಶಾಲೆಯ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀ ರಾಜಣ್ಣ, ಶ್ರೀ ಪೂಜಾರಿ ಹನುಮಂತಪ್ಪ, ಶ್ರೀ ಬಸವರಾಜ್ ಸೇರಿದಂತೆ ಅಜ್ಜಣ್ಣ, ಸುಜಾತ, ಮಾರುತಿ ಯುವಕ ಸಂಘದ ಶ್ರೀ ವಿಷ್ಣುವರ್ಧನ, ಎಸ್‌ಡಿಎಂಸಿ ಉಪಾಧ್ಯಕ್ಷ ಶ್ರೀ ಸತೀಶ್, ಶಿಕ್ಷಕರಾದ ಕರಿಬಸಮ್ಮ, ಜಯಮ್ಮ, ಅಖಿಲೇಶ್, ಯರ್ರಯ್ಯ, ಮೇಘ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


About The Author
Discover more from JANADHWANI NEWS
Subscribe to get the latest posts sent to your email.