August 24, 2026
IMG-20260824-WA0620

ವರದಿ : ಎಂ.ಶಿವಮೂರ್ತಿ ನಾಯಕನಹಟ್ಟಿ.
ನಾಯಕನಹಟ್ಟಿ: ಮಧ್ಯ ಕರ್ನಾಟಕದ ಆರಾಧ್ಯ ದೈವ, “ಮಾಡಿದಷ್ಟು ನೀಡು ಭಿಕ್ಷೆ” ಎಂಬ ತತ್ವವನ್ನು ನಾಡಿಗೆ ಸಾರಿದ ಶರಣ ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳ ಪುಣ್ಯಕ್ಷೇತ್ರಕ್ಕೆ ಕಂಪ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಬಾಬು ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು.

ಶ್ರಾವಣ ಮಾಸದ ಹಿನ್ನೆಲೆಯಲ್ಲಿ ನಾಯಕನಹಟ್ಟಿಗೆ ಆಗಮಿಸಿದ ಅವರು ಒಳಮಠ ಹಾಗೂ ಹೊರಮಠ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಸ್ವಾಮಿಯ ಆಶೀರ್ವಾದ ಪಡೆದರು. ಬಳಿಕ ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಬಾಬು, ಹಲವು ವರ್ಷಗಳಿಂದ ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳ ದರ್ಶನ ಪಡೆಯಬೇಕೆಂಬ ಹಂಬಲವಿತ್ತು. ಆದರೆ ಸಮಯ ಕೂಡಿ ಬಂದಿರಲಿಲ್ಲ. ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಭಾಗದ ಮುಖಂಡರು ಭೇಟಿ ನೀಡಿದಾಗ ನಾಯಕನಹಟ್ಟಿಗೆ ಬರುವ ಇಚ್ಛೆ ವ್ಯಕ್ತಪಡಿಸಿದ್ದೆ. ಶ್ರಾವಣ ಮಾಸದಲ್ಲಿ ದೇವಸ್ಥಾನಕ್ಕೆ ಬಂದು ದರ್ಶನ ಪಡೆಯುವಂತೆ ಮುಖಂಡರು ಸಲಹೆ ನೀಡಿದ್ದರು. ಅದರಂತೆ ಇಂದು ದೇವರ ಅಪ್ಪಣೆಯಾಗಿ ಇಲ್ಲಿಗೆ ಬಂದು ದರ್ಶನ ಪಡೆದಿದ್ದೇನೆ ಎಂದರು.

ರಾಜಕೀಯ ಉದ್ದೇಶದಿಂದ ಬಂದಿಲ್ಲ.

ದೇವಸ್ಥಾನಕ್ಕೆ ಭೇಟಿ ರಾಜಕೀಯ ಉದ್ದೇಶದಿಂದಲೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮ ಮಾವ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಮೊಳಕಾಲ್ಮೂರು ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಈ ಕ್ಷೇತ್ರಕ್ಕೆ ಬಂದು ದರ್ಶನ ಪಡೆಯಬೇಕೆಂಬ ಆಸೆ ಇತ್ತು. ಆದರೆ ಆಗ ಸಾಧ್ಯವಾಗಿರಲಿಲ್ಲ. ಇದೀಗ ಅವಕಾಶ ದೊರೆತ ಹಿನ್ನೆಲೆಯಲ್ಲಿ ಬಂದು ಸ್ವಾಮಿಯ ದರ್ಶನ ಪಡೆದಿದ್ದೇನೆ ಎಂದರು.

2028ರ ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರೇಶ್ ಬಾಬು, “ನಾನು ನನ್ನ ಸ್ವಕ್ಷೇತ್ರವಾದ ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲೇ ಸ್ಪರ್ಧಿಸುತ್ತೇನೆ. ಮೊಳಕಾಲ್ಮೂರು ಕ್ಷೇತ್ರದಲ್ಲಿ ಅಭ್ಯರ್ಥಿಯಾಗುವ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ” ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಸಂಘಟನೆಗೆ ಶೇ.100ರಷ್ಟು ತೊಡಗಿಸಿಕೊಳ್ಳುತ್ತೇನೆ.

ಮೊಳಕಾಲ್ಮೂರು ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಶ್ರಮಿಸುವುದಾಗಿ ತಿಳಿಸಿದ ಅವರು, ಭಾರತೀಯ ಜನತಾ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಅಗತ್ಯವಿದೆ. ಪಕ್ಷದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿ ಸಂಘಟನೆಯನ್ನು ಶಕ್ತಿಯುತಗೊಳಿಸುವ ಕೆಲಸ ಮಾಡಲಾಗುವುದು. ರಾಷ್ಟ್ರ ನಾಯಕರು ಯಾರಿಗೆ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇವೆ ಎಂದರು.

“ಕ್ಷೇತ್ರದ ಕಾರ್ಯಕರ್ತರ ಒತ್ತಾಯದ ಮೇರೆಗೆ ಇಲ್ಲಿಗೆ ಬಂದಿದ್ದೇನೆ. ಅವರ ಭಾವನೆಗಳಿಗೆ ಸ್ಪಂದಿಸಿ ಪಕ್ಷದ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತೇನೆ. ಪಕ್ಷ ಸಂಘಟನೆಯಲ್ಲಿ ಶೇ.100ರಷ್ಟು ತೊಡಗಿಸಿಕೊಳ್ಳುತ್ತೇನೆ. ಅಭಿಮಾನಿಗಳು ಎಲ್ಲಿಗೆ ಕರೆದರೂ ಅಲ್ಲಿಗೆ ತೆರಳಿ ಪಕ್ಷ ಸಂಘಟನೆಗೆ ಕೈಜೋಡಿಸುತ್ತೇನೆ” ಎಂದು ಹೇಳಿದರು.

ಶ್ರೀರಾಮುಲು ಕೊಡುಗೆಯನ್ನು ಸ್ಮರಿಸಿದ ಸುರೇಶ್ ಬಾಬು.

ಮೊಳಕಾಲ್ಮೂರು ಕ್ಷೇತ್ರದೊಂದಿಗೆ ತಮ್ಮ ಮಾವ ಬಿ. ಶ್ರೀರಾಮುಲು ಅವರಿಗೆ ವಿಶೇಷ ನಂಟಿದೆ. ಅವರು ಈ ಕ್ಷೇತ್ರದ ಶಾಸಕರಾಗಿ ಹಾಗೂ ಸಚಿವರಾಗಿ ಕೆಲಸ ಮಾಡಿದ್ದು, ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಇಂದಿಗೂ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಅವರ ಮೇಲಿನ ಪ್ರೀತಿ ಮತ್ತು ಅಭಿಮಾನ ಕಡಿಮೆಯಾಗಿಲ್ಲ ಎಂದು ಸುರೇಶ್ ಬಾಬು ಹೇಳಿದರು.

“ಬೆಳಗ್ಗಿನಿಂದಲೇ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಉತ್ಸಾಹವನ್ನು ಗಮನಿಸಿದ್ದೇನೆ. ಹಲವು ವರ್ಷಗಳ ಹಿಂದಿನ ಅದೇ ಪ್ರೀತಿ ಇಂದಿಗೂ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರಲು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಬೇಕು” ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಪಾಪೇಶ್ ನಾಯಕ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಓ. ಮಂಜುನಾಥ್, ಪಟ್ಟಣ ಪಂಚಾಯಿತಿ ಸದಸ್ಯ ಎನ್. ಮಹಾಂತಣ್ಣ, ಡಿ.ಎಚ್. ಪರಮೇಶ್ವರಪ್ಪ, ದಾಸರ ಮುತ್ತೈನಹಳ್ಳಿ ಬಿಒಆರ್. ಓಬಣ್ಣ, ಚೌಳಕೆರೆ ಬಸಣ್ಣ, ಬಿ.ಟಿ. ತಿಪ್ಪೇಸ್ವಾಮಿ, ಮಲ್ಲೂರಹಳ್ಳಿ ಮಲ್ಲಯ್ಯ, ಪರ್ವತಯ್ಯ, ಓಬಣ್ಣ ಚನ್ನಬಸಯ್ಯನಹಟ್ಟಿ, ಪ್ರಹ್ಲಾದ್ ಎನ್ ಚನ್ನಬಸಯ್ಯನಹಟ್ಟಿ, ಗುಂತಕೋಲಮ್ಮನಹಳ್ಳಿ ಜೆಸಿಬಿ ಎನ್. ತಿಪ್ಪೇಸ್ವಾಮಿ, ಅಬ್ಬೇನಹಳ್ಳಿ ಎಂ.ಎಸ್. ಪ್ರಕಾಶ್, ಬಿ. ಶಂಕರಸ್ವಾಮಿ, ಶೇಖರಗೌಡ, ಪಡ್ಲ ಬೋರಯ್ಯ, ತೂರೆಕೋಲಮ್ಮನಹಳ್ಳಿ ಮಂಜಣ್ಣ, ಶಂಭಣ್ಣ, ಎಂ.ಎಸ್. ರವೀಂದ್ರ, ದೊಡ್ಡ ಉಳ್ಳಾರ್ತಿ ಚಂದ್ರಣ್ಣ, ಹೆಚ್.ವಿ. ಪ್ರಕಾಶ್, ಬಿ.ಟಿ. ಪಾಲಯ್ಯ, ತಿಪ್ಪೇಸ್ವಾಮಿ, ಅಂಜನಪ್ಪ, ಎಸ್‌ಟಿ ಮೋರ್ಚಾ ಮಂಡಲ ಅಧ್ಯಕ್ಷ ನಾಗರಾಜ್, ನಗರ ಘಟಕ ಅಧ್ಯಕ್ಷ ಜಾಗನೂರಹಟ್ಟಿ ನಾಗರಾಜ್, ಬೋಸೆರಂಗಪ್ಪ, ಜಿ.ಓ. ಓಬಳೇಶ್, ವಿಷ್ಣು, ಮಲೇಬೋರಯ್ಯನಹಟ್ಟಿ ತಿಪ್ಪೇಸ್ವಾಮಿ, ತ್ರಿಶೂಲ್, ನಿರಂಜನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading