ನಾಯಕನಹಟ್ಟಿ: ಮಧ್ಯ ಕರ್ನಾಟಕದ ಐತಿಹಾಸಿಕ ಪುಣ್ಯಕ್ಷೇತ್ರ ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳು ನೆಲೆಸಿರುವ ನಾಯಕನಹಟ್ಟಿ ಕ್ಷೇತ್ರದಲ್ಲಿ ಪ್ರಮುಖ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಪಟ್ಟಣದಿಂದ ಮಲ್ಲೂರಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಡಾ. ವಾಸುದೇವ ಮೇಟಿ ಬಣದ ಹೋಬಳಿ ಅಧ್ಯಕ್ಷ ಡಾ. ನಾಗರಾಜ್ ಮೀಸೆ ಒತ್ತಾಯಿಸಿದ್ದಾರೆ.

ನಾಯಕನಹಟ್ಟಿ ಪಟ್ಟಣದಿಂದ ಮಲ್ಲೂರಹಳ್ಳಿ ರಸ್ತೆಯ ಅಗಲೀಕರಣಕ್ಕೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ಭೂಮಿಪೂಜೆ ನೆರವೇರಿಸಿ ಅನುದಾನ ಕಲ್ಪಿಸಿದ್ದರೂ, ರಸ್ತೆ ಕಾಮಗಾರಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಂಡಿಲ್ಲ ಎಂದು ಅವರು ಆರೋಪಿಸಿದರು.
ರಸ್ತೆಯ ಹಲವು ಭಾಗಗಳಲ್ಲಿ ಸೇತುವೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದೆ ಹಾಗೆಯೇ ಬಿಡಲಾಗಿದೆ. ಪಟ್ಟಣದ ಆಂಜನೇಯ ವಿದ್ಯಾಸಂಸ್ಥೆ ಮುಂಭಾಗದಲ್ಲಿ ಮೇಲುಸೇತುವೆ ನಿರ್ಮಾಣವಾಗದೆ ಇರುವುದರಿಂದ ರಸ್ತೆ ತಗ್ಗು-ಗುಂಡಿಗಳಿಂದ ಕೂಡಿದ್ದು, ವಾಹನ ಸವಾರರು ಹಾಗೂ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದರು.
ಈ ರಸ್ತೆಯ ಅವ್ಯವಸ್ಥೆಯಿಂದಾಗಿ ಸಂಚಾರ ಸಂದರ್ಭದಲ್ಲಿ ಅಪಘಾತಗಳು ಸಂಭವಿಸಿರುವ ನಿದರ್ಶನಗಳೂ ಇವೆ. ಸಮಸ್ಯೆ ಕುರಿತು ಹಲವು ಬಾರಿ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳಿಗೆ ಮನವಿ ಸಲ್ಲಿಸಿದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಡಾ. ನಾಗರಾಜ್ ಮೀಸೆ ದೂರಿದರು.
ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ಸಂಬಂಧಪಟ್ಟ ಅಧಿಕಾರಿಗಳಿಂದ ರಸ್ತೆ ಕಾಮಗಾರಿಯ ಕುರಿತು ಸಂಪೂರ್ಣ ಮಾಹಿತಿ ಪಡೆದು, ಬಾಕಿ ಉಳಿದಿರುವ ಸೇತುವೆ ಕಾಮಗಾರಿಗಳನ್ನು ಪೂರ್ಣಗೊಳಿಸುವುದರ ಜೊತೆಗೆ ರಸ್ತೆ ದುರಸ್ತಿ ಕಾರ್ಯವನ್ನು ತುರ್ತಾಗಿ ಕೈಗೊಳ್ಳಬೇಕು. ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
About The Author
Discover more from JANADHWANI NEWS
Subscribe to get the latest posts sent to your email.