ವರದಿ: ಎಂ. ಶಿವಮೂರ್ತಿ, ನಾಯಕನಹಟ್ಟಿ.
ನಾಯಕನಹಟ್ಟಿ: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ. ವರ್ಷಗಟ್ಟಲೆ ಸರಿಯಾದ ಮಳೆಯಿಲ್ಲದೆ ಬೆಳೆ ಇಲ್ಲ, ರೈತರು ಸಂಕಷ್ಟದಲ್ಲಿದ್ದಾರೆ, ಜಾನುವಾರುಗಳಿಗೆ ಮೇವು ಇಲ್ಲ. ಜನರು ಜೀವನೋಪಾಯಕ್ಕಾಗಿ ವಲಸೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊಳಕಾಲ್ಮೂರು ಕ್ಷೇತ್ರವನ್ನು ಮೊದಲ ಹಂತದಲ್ಲಿಯೇ ಬರಪೀಡಿತ ಪ್ರದೇಶವೆಂದು ಘೋಷಿಸಲು ಕ್ರಮ ಕೈಗೊಳ್ಳದಿರುವುದಕ್ಕೆ ಪ್ರಶ್ನೆ ಎತ್ತಿದ ಅವರು, ಹಾಲಿ ಕಾಂಗ್ರೆಸ್ ಶಾಸಕ ಎನ್.ವೈ. ಗೋಪಾಲಕೃಷ್ಣ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
“ಜನರ ಸಂಕಷ್ಟದ ಬಗ್ಗೆ ಸರ್ಕಾರದ ಮುಂದೆ ಧ್ವನಿ ಎತ್ತಬೇಕಾದ ಶಾಸಕರು ಏನು ಮಾಡುತ್ತಿದ್ದಾರೆ? ಕ್ಷೇತ್ರದ ಅಭಿವೃದ್ಧಿ ಎಲ್ಲಿದೆ? ಜನರ ಬದುಕು ಸಂಕಷ್ಟದಲ್ಲಿದ್ದರೂ ಜನಪ್ರತಿನಿಧಿಗಳ ಜವಾಬ್ದಾರಿ ಎಲ್ಲಿದೆ?” ಎಂದು ತಿಪ್ಪೇಸ್ವಾಮಿ ಪ್ರಶ್ನಿಸಿದರು.
ಮೊಳಕಾಲ್ಮೂರು ಮಾತ್ರವಲ್ಲದೆ ಕೂಡ್ಲಿಗಿ ಮತ್ತು ಸಂಡೂರು ಭಾಗಗಳಲ್ಲಿಯೂ ಬರ ಪರಿಸ್ಥಿತಿ ತೀವ್ರವಾಗಿದ್ದು, ಉದ್ಯೋಗ ಹಾಗೂ ಜೀವನೋಪಾಯಕ್ಕಾಗಿ ಜನರು ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.
“ಜನರು ವಲಸೆ ಹೋಗುತ್ತಿದ್ದಾರೆ. ರೈತರು ಸಂಕಷ್ಟದಲ್ಲಿದ್ದಾರೆ. ಧನ-ಕರುಗಳಿಗೆ ಮೇವು ಇಲ್ಲ. ಆದರೆ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಬದಲು ರಾಜಕೀಯವೇ ಹೆಚ್ಚಾಗಿದೆ” ಎಂದು ಅವರು ಕಿಡಿಕಾರಿದರು.
ಗೋಶಾಲೆ ಆರಂಭಿಸಿ ಜಾನುವಾರುಗಳಿಗೆ ಮೇವು ಒದಗಿಸಿ
ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ಜಾನುವಾರುಗಳ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಗೋಶಾಲೆಗಳನ್ನು ಆರಂಭಿಸಿ ಧನ-ಕರುಗಳಿಗೆ ಮೇವು ಒದಗಿಸಬೇಕು. ದೇವರೆತ್ತುಗಳು ಸೇರಿದಂತೆ ಜಾನುವಾರುಗಳ ರಕ್ಷಣೆಗೆ ಸರ್ಕಾರ ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ತಿಪ್ಪೇಸ್ವಾಮಿ ಒತ್ತಾಯಿಸಿದರು.
“ಶಾಸಕ ಎನ್ನುವ ಸ್ಥಾನ ಕೇವಲ ಅಧಿಕಾರದ ಕಿರೀಟವಲ್ಲ; ಜನರ ಸಂಕಷ್ಟಕ್ಕೆ ಸ್ಪಂದಿಸುವ ದೊಡ್ಡ ಜವಾಬ್ದಾರಿ” ಎಂದು ಅವರು ಹೇಳಿದರು.
ಬೇಡರೆಡ್ಡಿಹಳ್ಳಿ ಸಮಸ್ಯೆಗಳಿಗೂ ಸ್ಪಂದಿಸಲಿ
ಇದೇ ಸಂದರ್ಭದಲ್ಲಿ ಬೇಡರೆಡ್ಡಿಹಳ್ಳಿ ಗ್ರಾಮದ ಮೂಲಭೂತ ಸಮಸ್ಯೆಗಳನ್ನೂ ತಿಪ್ಪೇಸ್ವಾಮಿ ಪ್ರಸ್ತಾಪಿಸಿದರು. ಗ್ರಾಮದಲ್ಲಿ ಬೀದಿ ದೀಪಗಳ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳಿವೆ ಎಂದು ಅವರು ಹೇಳಿದರು.
ಗ್ರಾಮಸ್ಥರ ಸಮಸ್ಯೆಗಳನ್ನು ಮಾಧ್ಯಮದವರು ವರದಿ ಮಾಡಿ ಅಧಿಕಾರಿಗಳ ಗಮನಕ್ಕೆ ತಂದಿರುವ ಸಂದರ್ಭದಲ್ಲಿ, ಸಮಸ್ಯೆಗಳನ್ನು ಪರಿಹರಿಸುವ ಬದಲು ವರದಿ ಮಾಡಿದ ಪತ್ರಕರ್ತರ ವಿರುದ್ಧ ಹಿಂಬಾಲಕರ ಮೂಲಕ ಧಮ್ಕಿ ಹಾಕಿಸುವ ಪ್ರಯತ್ನ ನಡೆದಿದೆ ಎಂಬ ಆರೋಪ ಕೇಳಿಬರುತ್ತಿರುವುದು ಖಂಡನೀಯ ಎಂದು ತಿಪ್ಪೇಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
“ಗ್ರಾಮದ ಜನರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಸಮಸ್ಯೆಗಳನ್ನು ವರದಿ ಮಾಡಿದ ಮಾಧ್ಯಮದವರನ್ನು ಬೆದರಿಸುವುದು ಯಾವ ನ್ಯಾಯ? ಬೀದಿ ದೀಪ ಇಲ್ಲ, ಕುಡಿಯುವ ನೀರಿನ ಸಮಸ್ಯೆ ಇದೆ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಜನರ ಪರವಾಗಿ ಮಾಧ್ಯಮಗಳು ವರದಿ ಮಾಡಿದರೆ ಅವರಿಗೆ ಧಮ್ಕಿ ಹಾಕಿಸುವ ಪ್ರಯತ್ನ ನಡೆಯುವುದು ಪ್ರಜಾಪ್ರಭುತ್ವದಲ್ಲಿ ಸರಿಯೇ?” ಎಂದು ಅವರು ಪ್ರಶ್ನಿಸಿದರು.
ಜನರ ಸಮಸ್ಯೆಗಳನ್ನು ಸರ್ಕಾರ ಮತ್ತು ಅಧಿಕಾರಿಗಳ ಗಮನಕ್ಕೆ ತರುವುದು ಮಾಧ್ಯಮದವರ ಕರ್ತವ್ಯವಾಗಿದೆ. ಸಮಸ್ಯೆಗಳನ್ನು ಪರಿಹರಿಸುವ ಬದಲು ಮಾಧ್ಯಮದವರ ಮೇಲೆ ಒತ್ತಡ ಹೇರುವುದು ಅಥವಾ ಧಮ್ಕಿ ಹಾಕಿಸುವ ಸಂಸ್ಕೃತಿ ಖಂಡನೀಯ ಎಂದು ಅವರು ಹೇಳಿದರು.
“ಜನರ ಸಮಸ್ಯೆ ಕೇಳಿ ಪರಿಹಾರ ನೀಡಬೇಕಾದವರು ಯಾರು? ಅಧಿಕಾರಿಗಳನ್ನು ಪ್ರಶ್ನಿಸಬೇಕಾದವರು ಯಾರು? ಮಾಧ್ಯಮದವರ ಬಾಯಿ ಮುಚ್ಚಿಸಲು ಧಮ್ಕಿ ಹಾಕಿಸುವುದು ಯಾವ ನ್ಯಾಯ?” ಎಂದು ತಿಪ್ಪೇಸ್ವಾಮಿ ತೀವ್ರವಾಗಿ ಪ್ರಶ್ನಿಸಿದರು.
ಎರಡನೇ ಪಟ್ಟಿಯಲ್ಲಾದರೂ ಬರಪೀಡಿತ ಪ್ರದೇಶಗಳಾಗಿ ಘೋಷಿಸಿ
ಎರಡನೇ ಪಟ್ಟಿಯಲ್ಲಾದರೂ ಮೊಳಕಾಲ್ಮೂರು, ಕೂಡ್ಲಿಗಿ ಮತ್ತು ಸಂಡೂರು ಪ್ರದೇಶಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕು. ಬರದಿಂದ ಸಂಕಷ್ಟದಲ್ಲಿರುವ ಜನರಿಗೆ ಅಗತ್ಯ ನೆರವು ನೀಡಬೇಕು. ರೈತರಿಗೆ ಹಾಗೂ ಜಾನುವಾರುಗಳಿಗೆ ತುರ್ತು ಪರಿಹಾರ ಮತ್ತು ಮೇವು ಒದಗಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ರಾಜಕೀಯ ಆರೋಪ-ಪ್ರತ್ಯಾರೋಪಗಳಲ್ಲಿ ಸಮಯ ಕಳೆಯುವುದನ್ನು ಬಿಟ್ಟು ಕ್ಷೇತ್ರದ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಕೆಲಸವಾಗಬೇಕು ಎಂದು ಹಾಲಿ ಕಾಂಗ್ರೆಸ್ ಶಾಸಕರ ವಿರುದ್ಧ ತಿಪ್ಪೇಸ್ವಾಮಿ ವಾಗ್ದಾಳಿ ನಡೆಸಿದರು.
“ಮಾತುಗಳಿಂದ ಅಭಿವೃದ್ಧಿಯಾಗುವುದಿಲ್ಲ. ಆರೋಪಗಳಿಂದ ಬರಗಾಲ ಹೋಗುವುದಿಲ್ಲ. ಜನರನ್ನು ಬೆದರಿಸುವುದರಿಂದ ಸಮಸ್ಯೆಗಳು ಬಗೆಹರಿಯುವುದಿಲ್ಲ. ಜನರ ಬದುಕು ಉಳಿಸಲು ಕೆಲಸ ಮಾಡಬೇಕು.” ಎಂದು ಅವರು ಹೇಳಿದರು.
ಜನರ ಪ್ರಶ್ನೆ ಒಂದೇ: ಪರಿಹಾರ ಯಾವಾಗ?
ಬರಗಾಲದಿಂದ ತತ್ತರಿಸಿರುವ ಜನರ ಸಂಕಷ್ಟಕ್ಕೆ ಸರ್ಕಾರ ಯಾವಾಗ ಸ್ಪಂದಿಸುತ್ತದೆ? ಜಾನುವಾರುಗಳಿಗೆ ಮೇವು ಯಾವಾಗ ಸಿಗುತ್ತದೆ? ಗ್ರಾಮಗಳ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಯಾವಾಗ? ಜನರ ಪರವಾಗಿ ಧ್ವನಿ ಎತ್ತುವ ಮಾಧ್ಯಮದವರಿಗೆ ಧಮ್ಕಿ ಆರೋಪಗಳು ಯಾವಾಗ ನಿಲ್ಲುತ್ತವೆ? ಎಂಬ ಪ್ರಶ್ನೆಗಳು ಇದೀಗ ಕ್ಷೇತ್ರದ ಜನರಲ್ಲಿ ಮೂಡಿವೆ.
ಇನ್ನು ಮಾತಲ್ಲ… ಕೆಲಸ ಬೇಕು!ಭರವಸೆ ಅಲ್ಲ… ಪರಿಹಾರ ಬೇಕು!ರಾಜಕೀಯ ಅಲ್ಲ… ಜನರ ಬದುಕು ಮುಖ್ಯ!
About The Author
Discover more from JANADHWANI NEWS
Subscribe to get the latest posts sent to your email.