ಚಳ್ಳಕೆರೆ: ಹೈನುಗಾರಿಕೆ ಗ್ರಾಮೀಣ ಭಾಗದ ಜನರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಉತ್ತಮ ಮಾರ್ಗವಾಗಿದ್ದು, ನಿರುದ್ಯೋಗ ಸಮಸ್ಯೆ ನಿವಾರಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಹೇಳಿದರು.
ನಗರದ ಕುವೆಂಪು ಆಂಗ್ಲ ಮಾಧ್ಯಮ ಪ್ರೌಢಶಾಲೆ ಆವರಣದಲ್ಲಿ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಹೈನುಗಾರಿಕೆಯಿಂದ ಜೀವನೋಪಾಯ’ ವಿಷಯದ ಚಿತ್ರಕಲಾ ಸ್ಪರ್ಧೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೈನುಗಾರಿಕೆ ಯಾವುದೇ ಹಂತದಲ್ಲೂ ಲಾಭದಾಯಕ ಉದ್ಯಮವಾಗಿದ್ದು, ಗ್ರಾಮೀಣ ಜನರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾಗಿದೆ. ಪಶುಸಂಗೋಪನೆಯಿಂದ ದೊರೆಯುವ ಗೊಬ್ಬರವನ್ನು ಕೃಷಿಯಲ್ಲಿ ಬಳಸುವುದರಿಂದ ಉತ್ತಮ ಗುಣಮಟ್ಟದ ಹಾಗೂ ಪೌಷ್ಟಿಕ ಆಹಾರ ಉತ್ಪಾದನೆ ಸಾಧ್ಯವಾಗುತ್ತದೆ. ವಿದ್ಯಾವಂತರಿಗೆ ತಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ದೊರೆಯದ ಸಂದರ್ಭದಲ್ಲಿಯೂ ಹೈನುಗಾರಿಕೆಯನ್ನು ಕಸುಬಾಗಿ ಸ್ವೀಕರಿಸಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬಹುದು ಎಂದು ಹೇಳಿದರು.
ನಂದಿನಿ ಉತ್ಪನ್ನಗಳು ರಾಜ್ಯ ಮಾತ್ರವಲ್ಲದೆ ದೇಶ-ವಿದೇಶಗಳಲ್ಲಿಯೂ ಉತ್ತಮ ಹೆಸರು ಗಳಿಸಿದ್ದು, ಸಾವಿರಾರು ಜನರಿಗೆ ಉದ್ಯೋಗ ಹಾಗೂ ಲಕ್ಷಾಂತರ ರೈತರಿಗೆ ಆದಾಯದ ಮೂಲವಾಗಿದೆ. ಹಿಂದೆ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ನಂದಿನಿ ಉತ್ಪನ್ನಗಳು ಇದೀಗ ಗ್ರಾಮೀಣ ಪ್ರದೇಶಗಳಿಗೂ ತಲುಪುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಹೈನುಗಾರಿಕೆ ಹಾಗೂ ನಂದಿನಿ ಉತ್ಪನ್ನಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಚಿತ್ರಕಲಾ ಸ್ಪರ್ಧೆ ಆಯೋಜಿಸಿರುವುದು ಉತ್ತಮ ಪ್ರಯತ್ನವಾಗಿದೆ. ವಿದ್ಯಾರ್ಥಿಗಳು ಬಹುಮಾನ ಪಡೆಯುವುದನ್ನೇ ಗುರಿಯಾಗಿಸಿಕೊಳ್ಳದೆ, ತಮ್ಮಲ್ಲಿರುವ ಕೌಶಲ್ಯ ಮತ್ತು ಪ್ರತಿಭೆಯನ್ನು ನಿರಂತರವಾಗಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಹಾಲು ಒಕ್ಕೂಟದ ಚಿತ್ರದುರ್ಗ ಜಿಲ್ಲಾ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಮಾತನಾಡಿ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಂದಿನಿ ಉತ್ಪನ್ನಗಳ ಪರಿಚಯ ಮಾಡಿಸುವುದು, ಹೈನುಗಾರಿಕೆಯಿಂದ ರೈತರಿಗೆ ಆಗುವ ಪ್ರಯೋಜನಗಳ ಕುರಿತು ಅರಿವು ಮೂಡಿಸುವುದು ಹಾಗೂ ವಿದ್ಯಾರ್ಥಿಗಳ ಅನಿಸಿಕೆಗಳನ್ನು ಚಿತ್ರಗಳ ಮೂಲಕ ಅಭಿವ್ಯಕ್ತಿಗೊಳಿಸಲು ವೇದಿಕೆ ಕಲ್ಪಿಸುವುದು ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದ ಅನೇಕ ರೈತ ಕುಟುಂಬಗಳು ಇಂದು ಹೈನುಗಾರಿಕೆಯನ್ನು ಅವಲಂಬಿಸಿದ್ದು, ಹಲವರಿಗೆ ಇದು ಪ್ರಮುಖ ಜೀವನೋಪಾಯವಾಗಿದೆ. ಕರ್ನಾಟಕ ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ನಂದಿನಿ ಸಂಸ್ಥೆಯು ನೂರಾರು ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಚಳ್ಳಕೆರೆ, ಹಿರಿಯೂರು ಹಾಗೂ ಮೊಳಕಾಲ್ಮೂರು ಸೇರಿದಂತೆ ಬರಪೀಡಿತ ಪ್ರದೇಶಗಳಲ್ಲಿಯೂ ರೈತರು ಹೈನುಗಾರಿಕೆಯತ್ತ ಹೆಚ್ಚಿನ ಆಸಕ್ತಿ ತೋರುತ್ತಿರುವುದು ಗಮನಾರ್ಹವಾಗಿದೆ ಎಂದರು.
ಮಕ್ಕಳಲ್ಲಿ ಹಾಲಿನ ಮಹತ್ವ ಹಾಗೂ ಪೌಷ್ಟಿಕಾಂಶದ ಅರಿವು ಮೂಡಿಸುವ ಉದ್ದೇಶದಿಂದ ಸರ್ಕಾರ ಕ್ಷೀರಭಾಗ್ಯ ಯೋಜನೆಯಡಿ ಸರ್ಕಾರಿ ಶಾಲಾ ಮಕ್ಕಳಿಗೆ ಹಾಲು ವಿತರಿಸುತ್ತಿದೆ. ನಂದಿನಿ ಉತ್ಪನ್ನಗಳ ಬಳಕೆ ಹೆಚ್ಚಿದಂತೆ ಹೈನುಗಾರಿಕೆಯನ್ನು ಅವಲಂಬಿಸಿರುವ ರೈತರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ಚಿತ್ರಕಲಾ ಸ್ಪರ್ಧೆಯಲ್ಲಿ ಗ್ರಾಮಾಂತರ ಪ್ರೌಢಶಾಲೆ, ಪರಶುರಾಂಪುರದ ಈಶ್ವರಮ್ಮ ಜೆ. ಪ್ರಥಮ, ಆದರ್ಶ ಶಾಲೆಯ ದ್ರಾಕ್ಷಾಯಿಣಿ ಎಲ್. ದ್ವಿತೀಯ ಹಾಗೂ ಸಾಗರ್ ಎಂ.ಡಿ. ತೃತೀಯ ಸ್ಥಾನ ಪಡೆದು ಬಹುಮಾನ ಗಳಿಸಿದರು.
ಕಾರ್ಯಕ್ರಮದಲ್ಲಿ ಕುವೆಂಪು ಶಾಲೆಯ ಆಡಳಿತಾಧಿಕಾರಿ ತಿಪ್ಪೇಸ್ವಾಮಿ, ಪಾಲಯ್ಯ, ಹೆಗ್ಗೇರೆ ತಾಯಮ್ಮ, ಶಾಲಾ ಶಿಕ್ಷಕಿ ರೂಪಾ, ವೆಂಕಟೇಶ್, ಶ್ರೀನಿವಾಸಮೂರ್ತಿ, ಇಸಿಓ ತಿಪ್ಪೇಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







About The Author
Discover more from JANADHWANI NEWS
Subscribe to get the latest posts sent to your email.