ನಾಯಕನಹಟ್ಟಿ : ಮೊಳಕಾಲ್ಮೂರು ತಾಲ್ಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಕೈಬಿಟ್ಟಿರುವುದು ಅಧಿಕಾರಿಗಳ ವಿವೇಚನಾರಹಿತ ಕ್ರಮವಾಗಿದೆ ಎಂದು ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಮುಖಂಡ ಎನ್. ರಘುಮೂರ್ತಿ ಆರೋಪಿಸಿದರು.
ಮೊಳಕಾಲ್ಮೂರು ತಾಲ್ಲೂಕು ರಾಜ್ಯದಲ್ಲಿಯೇ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾಗಿದೆ. ಇಲ್ಲಿ ಸರಾಸರಿ ಮಳೆಯ ಪ್ರಮಾಣವೂ ಕಡಿಮೆಯಾಗಿದ್ದು, ರಾಜ್ಯದಲ್ಲೇ ಹೆಚ್ಚಿನ ಸಂಖ್ಯೆಯ ಬುಡಕಟ್ಟು ಕುಟುಂಬಗಳು ವಾಸಿಸುವ ತಾಲ್ಲೂಕು ಇದಾಗಿದೆ. ಜೊತೆಗೆ ತಾಲ್ಲೂಕಿನ ತಲಾದಾಯವೂ ಕಡಿಮೆ ಇದೆ. ಇಂತಹ ಪರಿಸ್ಥಿತಿಯಲ್ಲಿರುವ ತಾಲ್ಲೂಕನ್ನು ಅಧಿಕಾರಿಗಳು ಯಾವ ಅಂಕಿ-ಅಂಶಗಳ ಆಧಾರದ ಮೇಲೆ ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಕೈಬಿಟ್ಟಿದ್ದಾರೆ ಎಂಬುದು ಶೋಚನೀಯ ಸಂಗತಿ ಎಂದು ಅವರು ಹೇಳಿದರು.
ತಾಲ್ಲೂಕಿನಲ್ಲಿ ಬಿತ್ತನೆಯಾಗಿರುವ ಬಹುತೇಕ ಕೃಷಿ ಬೆಳೆಗಳು, ರೇಷ್ಮೆ ಹಾಗೂ ತೋಟಗಾರಿಕಾ ಬೆಳೆಗಳು ಮಳೆಯ ಕೊರತೆಯಿಂದ ಹಾನಿಗೊಳಗಾಗಿವೆ. ಇದರಿಂದ ರೈತರು ಹಾಗೂ ಸಾರ್ವಜನಿಕರ ಬದುಕು ದುಸ್ತರವಾಗಿದೆ. ಆಡಳಿತ ಪಕ್ಷ, ರಾಜಕಾರಣ ಅಥವಾ ಅಧಿಕಾರ ಏನೇ ಇರಲಿ, ಅವುಗಳನ್ನು ಮೀರಿ ಬರಗಾಲದ ಸಂದರ್ಭದಲ್ಲಿ ತಾಲ್ಲೂಕಿನ ಜನರಿಗೆ ಹಾಗೂ ಜಾನುವಾರುಗಳಿಗೆ ಅಗತ್ಯ ನೆರವು ಒದಗಿಸುವುದು ಸರ್ಕಾರ, ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಕರ್ತವ್ಯವಾಗಿದೆ ಎಂದು ರಘುಮೂರ್ತಿ ಹೇಳಿದರು.
ಮೊಳಕಾಲ್ಮೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಸರಿಸುಮಾರು 3,000ಕ್ಕೂ ಹೆಚ್ಚು ದೇವರ ಎತ್ತುಗಳು ಇದ್ದು, ಅವುಗಳಿಗೆ ಸಮರ್ಪಕವಾಗಿ ಮೇವು ದೊರೆಯುತ್ತಿಲ್ಲ. ಶೇಕಡಾ 80ರಷ್ಟು ಜನರಿಗೆ ಉದ್ಯೋಗದ ಕೊರತೆಯಿದೆ. ಕುಟುಂಬದ ಹಣವನ್ನು ಸಂಗ್ರಹಿಸಿ ಬೀಜ ಮತ್ತು ಗೊಬ್ಬರ ಖರೀದಿಸಿ ಜಮೀನಿನಲ್ಲಿ ಬಿತ್ತನೆ ಮಾಡಿದ್ದರೂ, ಮಳೆಯ ಅಭಾವದಿಂದ ಬೆಳೆಗಳು ಹಾಳಾಗಿವೆ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ವಿವರಿಸಿದರು.
ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಜನಜೀವನದ ದೃಷ್ಟಿಯಿಂದ ಹಿಂದುಳಿದಿರುವ ಮೊಳಕಾಲ್ಮೂರು ತಾಲ್ಲೂಕನ್ನು ತಕ್ಷಣ ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳನ್ನು ಅವರು ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳು ಈ ವಿಚಾರವನ್ನು ವೈಯಕ್ತಿಕವಾಗಿ ಗಮನಿಸಿ, ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತರು, ಕೂಲಿ ಕಾರ್ಮಿಕರು, ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಅಗತ್ಯ ನೆರವು ಒದಗಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಎನ್. ರಘುಮೂರ್ತಿ ಆಗ್ರಹಿಸಿದರು.
About The Author
Discover more from JANADHWANI NEWS
Subscribe to get the latest posts sent to your email.