ಹೊಸದುರ್ಗ, ಮೇ 30: ಅನಿಕೇತನ ವಿಚಾರ ವೇದಿಕೆ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಹೊಸದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕ, ಕವಿ ಹಾಗೂ ಸಾಹಿತಿ ಎಂ.ಎಸ್. ರಮೇಶ್ ಅವರ ಎರಡು ಕೃತಿಗಳಾದ ‘ಸನ್ನದ್ಧರಾಗೋಣ’ (ಕವನ ಸಂಕಲನ) ಮತ್ತು ‘ಅಕ್ಷರಗಳಲ್ಲಿ ಅನಿಸಿಕೆಗಳು’ (ಲೇಖನ ಸಂಕಲನ) ಲೋಕಾರ್ಪಣೆ ಸಮಾರಂಭವು ಮೇ 31ರಂದು ಬೆಳಿಗ್ಗೆ 10.30ಕ್ಕೆ ಪಟ್ಟಣದ ಕನ್ನಡ ಭವನದಲ್ಲಿ ನಡೆಯಲಿದೆ.


ನಿವೃತ್ತ ಪ್ರಾಂಶುಪಾಲ ಪಿ.ಎಲ್. ಲೋಕೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಪರಮೇಶ್ವರಪ್ಪ ಕುದುರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹೆಚ್. ಬಿಲ್ಲಪ್ಪ ಕೃತಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.
‘ಸನ್ನದ್ಧರಾಗೋಣ’ ಕವನ ಸಂಕಲನ ಕುರಿತು ಚಿಕ್ಕಮಗಳೂರಿನ ಸಾಹಿತಿ ಡಾ. ಎಚ್.ಎಸ್. ಸತ್ಯನಾರಾಯಣ ಹಾಗೂ ‘ಅಕ್ಷರಗಳಲ್ಲಿ ಅನಿಸಿಕೆಗಳು’ ಕೃತಿಯ ಕುರಿತು ಚಿತ್ರದುರ್ಗದ ಸಾಹಿತಿ ನಿರಂಜನ ದೇವರಮನೆ ವಿಮರ್ಶಾತ್ಮಕವಾಗಿ ಮಾತನಾಡಲಿದ್ದಾರೆ. ಹೊಸದುರ್ಗದ ಕವಿಗಳಾದ ನಿಸಾರ್ ಅಹಮ್ಮದ್, ಧನಂಜಯ ಮೆಂಗಸಂದ್ರ ಹಾಗೂ ಕುಮಾರಿ ಎಂ.ಆರ್. ನಳಿನ ಕವನ ವಾಚನ ನಡೆಸಲಿದ್ದಾರೆ.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಸ್ವಾಮಿ, ತಾಲೂಕು ಅಧ್ಯಕ್ಷ ಎಂ.ಆರ್. ಶಾಂತಪ್ಪ, ಉಪಾಧ್ಯಕ್ಷ ನಾಗತಿಹಳ್ಳಿ ಮಂಜುನಾಥ್, ನಿಕಟಪೂರ್ವ ಅಧ್ಯಕ್ಷ ಬಿ.ಪಿ. ಓಂಕಾರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಮೋಸಿನ್, ಮುಖ್ಯ ಶಿಕ್ಷಕ ಸುರೇಶ್ ಯತ್ತಿನಮನಿ, ಹಿರಿಯ ಪತ್ರಕರ್ತ ಸಿ.ಜೆ. ರಾಜೀವ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಂ.ಪಿ. ನಾಗರಾಜ್ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಶಿಕ್ಷಕ, ಕವಿ, ಸಾಹಿತ್ಯಾಸಕ್ತ
ಹೊಸದುರ್ಗ ತಾಲೂಕಿನ ಮತ್ತೋಡು ಗ್ರಾಮದ ಎಂ.ಎಸ್. ರಮೇಶ್ ಅವರು ಶಿಕ್ಷಕರಾಗಿ ಹಾಗೂ ಕವಿಯಾಗಿ ಗುರುತಿಸಿಕೊಂಡಿದ್ದಾರೆ. ತಂದೆ ಶಿವಶಂಕರಾಚಾರ್ ಹಾಗೂ ತಾಯಿ ಯಶೋಧಮ್ಮ ಅವರ ಪುತ್ರರಾದ ರಮೇಶ್, ಪ್ರಸ್ತುತ ನಾಗತಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಚಿತ್ರಕಲೆ ಹಾಗೂ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಅವರು ಈ ಹಿಂದೆ ‘ಸೃಷ್ಟಿ–ದೃಷ್ಟಿ’ ಕವನ ಸಂಕಲನವನ್ನು ಪ್ರಕಟಿಸಿದ್ದು, ಇದೀಗ ‘ಸನ್ನದ್ಧರಾಗೋಣ’ ಹಾಗೂ ‘ಅಕ್ಷರಗಳಲ್ಲಿ ಅನಿಸಿಕೆಗಳು’ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡುತ್ತಿದ್ದಾರೆ. ಇವರ ಬರಹಗಳು ಮಯೂರ, ತುಷಾರ, ತರಂಗ ಹಾಗೂ ಸುಧಾ ಸೇರಿದಂತೆ ವಿವಿಧ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಜಿಲ್ಲಾ ಗಣಿತ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಅವರು ತಾಲೂಕು ಉತ್ತಮ ಶಿಕ್ಷಕ ಹಾಗೂ ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2024ರಲ್ಲಿ ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಪ್ರಥಮ ಬಹುಮಾನ ಪಡೆದಿರುವ ಅವರು ಅನೇಕ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವನ ವಾಚನದ ಮೂಲಕ ಮೆಚ್ಚುಗೆ ಗಳಿಸಿದ್ದಾರೆ.
ಪ್ರಸ್ತುತ ಹೊಸದುರ್ಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು ಈ ಹಿಂದೆ ಮತ್ತೋಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ರಮೇಶ್ ಅವರು ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.