July 14, 2026
FB_IMG_1784038966476


ಮಧುಗಿರಿ :
ಬ್ರಹ್ಮನಿಂದ ಸೃಷ್ಟಿಯಾದ ಅಶ್ವಿನಿದೇವತೆಗಳಿಂದ ಆರಂಭಗೊಂಡ ಆಯುರ್ವೇದ ಚಿಕಿತ್ಸಾ ಪದ್ಧತಿ ಭಾರತೀಯ ಭವ್ಯ ಇತಿಹಾಸ ಪರಂಪರೆಯಲ್ಲಿ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದ್ದು, ಈ ಭಾಗದ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಂತಹ “ಆಯುರ್ವೇದ ಆಸ್ಪತ್ರೆ”ಯನ್ನು ಡಾ.ಜಯರಾಂರವರಿಂದ ಮಧುಗಿರಿಯಲ್ಲಿ ಆರಂಭಿಸಲಾಗಿದೆ ಎಂಬುದಾಗಿ ಪಾವಗಡ ರಾಮಕೃಷ್ಣಾಶ್ರಮ ಹಾಗೂ ಶ್ರೀಶಾರದಾದೇವಿ ಕಣ್ಣಿನಆಸ್ಪತ್ರೆ ಮತ್ತು ಸಂಶೋಧನಾಕೇಂದ್ರದ ಅಧ್ಯಕ್ಷರಾದ ಶ್ರೀಶ್ರೀಶ್ರೀ ಜಪಾನಂದಸ್ವಾಮೀಜಿ ಹೇಳಿದರು.
ನಗರದ ತುಮಕೂರು ಗೇಟ್ ಹತ್ತಿರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ “ಶ್ರೀರಾಘವೇಂದ್ರ ಆಯುರ್ವೇದ ಆಸ್ಪತ್ರೆ”ಯ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ, ಅವರು ಮಾತನಾಡಿದರು.
ಈ ಗ್ರಾಮೀಣ ಪ್ರದೇಶದಲ್ಲಿ ಜನರಿಗಾಗಿ ಶಾಲಾ-ಕಾಲೇಜುಗಳು, ನರ್ಸಿಂಗ್ ಕಾಲೇಜು, ಆಸ್ಪತ್ರೆ ಸೇರಿದಂತೆ ವಿವಿಧ ಸಮೂಹ-ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ತಾಲ್ಲೂಕಿನಲ್ಲಿಯೇ ಮನೆಮಾತಾಗಿರುವ ಶ್ರೀಯುತ ಡಾ.ಜಯರಾಂರವರು ಆಸ್ಪತ್ರೆಗೆ ಬರುವ ರೋಗಿಗಳಿಗೆ ಕಡಿಮೆ ಧರದಲ್ಲಿ ಉತ್ತಮ ಚಿಕಿತ್ಸೆಯನ್ನು ನೀಡುವ ಮೂಲಕ ಜನಸ್ನೇಹಿ ವೈದ್ಯರಾಗಿ ಹೆಸರು ಮಾಡಿದ್ದಾರೆ, ಇವರು ಇದೀಗ ಆಯುರ್ವೇದ ಆಸ್ಪತ್ರೆಯನ್ನು ಪ್ರಾರಂಭಿಸುವ ಮೂಲಕ ಹೊಸಗೆಜ್ಜೆ ಇಟ್ಟಿದ್ದಾರೆ,
ಅಲ್ಲದೆ ಮಧುಗಿರಿಯಲ್ಲಿ ಪ್ರಾರಂಭವಾಗುತ್ತಿರುವ ಈ ಆಯುರ್ವೇದ ಆಸ್ಪತ್ರೆಯು ತುಮಕೂರು ಜಿಲ್ಲೆಯಲ್ಲಿಯೇ 2ನೇ ಆಯುರ್ವೇದ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ, ಶ್ರೀಯುತ ಜಯರಾಂರವರು ಮಧುಗಿರಿಯಲ್ಲಿ ಇಂಗ್ಲೀಷ್ ಔಷಧಿಯ ಜೊತೆಗೆ ಆಯುರ್ವೇದ ಚಿಕಿತ್ಸೆಯೂ ಸಿಗುವಂತಹ ವ್ಯವಸ್ಥೆ ಕಲ್ಪಿಸಿದ್ದು, ಇದರಿಂದ ಲಕ್ಷಾಂತತರ ಜನರಿಗೆ ಅನುಕೂಲವಾಗಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂಬುದಾಗಿ ಸ್ವಾಮೀಜಿ ಹೇಳಿದರು.
ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುವ ವೈದ್ಯರು ಕೇವಲ ಹಣಕ್ಕಾಗಿ ಕೆಲಸ ಮಾಡದೇ ಹೃದಯವಂತರಾಗಿರಬೇಕು, ಆಗ ಮಾತ್ರ ಆಸ್ಪತ್ರೆಗಳು ಬಹುಬೇಗ ಹೆಸರು ಮಾಡುತ್ತವೆ, ಅಂತಹ ಹೃದಯವಂತಿಕೆಯನ್ನು ಹೊಂದಿರುವ ಶ್ರೀಯುತ ಡಾ.ಜಯರಾಂರವರ ಸೇವೆ ಸಾರ್ವಜನಿಕರಿಗೆ ಇನ್ನು ಮುಂದೆ ಆಯುರ್ವೇದ ಚಿಕಿತ್ಸೆಯ ಮೂಲಕವೂ ಸಹ ಸಿಗಲಿದ್ದು, ಡಾ.ಜಯರಾಂರವರ ಸಮಾಜಮುಖಿ ಸೇವೆಗೆ ಸದಾ ನಮ್ಮ ಬೆಂಬಲ ಇರುತ್ತದೆ ಎಂಬುದಾಗಿ ಅವರು ಹೇಳಿದರು.
ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಕೆ.ಎನ್.ರಾಜಣ್ಣರವರು ಮಾತನಾಡಿ, ಮಧುಗಿರಿಯಲ್ಲಿ ಆಯುರ್ವೇದ ಆಸ್ಪತ್ರೆ ಆರಂಭವಾಗಿರುವುದು ನಿಜಕ್ಕೂ ಸಂತಸದ ವಿಚಾರವಾಗಿದ್ದು, ಈ ಶ್ರೀರಾಘವೇಂದ್ರ ಆಯುರ್ವೇದ ಆಸ್ಪತ್ರೆಯು ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನಮ್ಮ ತಾಲ್ಲೂಕಿನ ಜನರಿಗೆ ನೀಡುವ ಮೂಲಕ ಜನಸ್ನೇಹಿ ಸೇವೆಯನ್ನು ಜನರಿಗೆ ನೀಡುವಂತಾಗಬೇಕು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂಬುದಾಗಿ ಹೇಳಿದರು.
ಹುಲಿಕಲ್ ನಟರಾಜ್ ಮಾತನಾಡಿ, ಇಂದಿನ ಆಧುನಿಕ ಜಗತ್ತಿನಲ್ಲಿ ಹಣ, ಆಸ್ತಿ, ಅಂತಸ್ತು, ಸೇರಿದಂತೆ ಸಕಲ ಸೌಲಭ್ಯಗಳಿದ್ದರೂ ಆರೋಗ್ಯ ಇಲ್ಲದಿದ್ದರೆ, ಎಲ್ಲಾ ಸಂಪತ್ತು ಶೂನ್ಯವಾಗಿ ಬಿಡುತ್ತದೆ, ಆದ್ದರಿಂದ ಸಮಾಜದ ಪ್ರತಿಯೊಬ್ಬರೂ ನಿಮ್ಮ ಆರೋಗ್ಯದ ಕಡೆ ಹೆಚ್ಚು ಗಮನವನ್ನು ಕೊಡಬೇಕು, ಉತ್ತಮವಾದ ಆಲೋಚನೆ ಹಾಗೂ ಉತ್ತಮವಾದ ಆಹಾರವನ್ನು ಸೇವನೆ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬುದಾಗಿ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಆಯುರ್ವೇದ ಶಿಕ್ಷಣ ಸಂಸ್ಥೆ ನಿರ್ದೇಶಕರಾದ ಪ್ರೋ.ಪ್ರಸನ್ನನರಸಿಂಹರಾವ್ ಮಾತನಾಡಿ, ಔಷಧೀಯ ಗುಣಗಳಿರುವ ಕಾಡಿನ ಗಿಡಮೂಲಿಕೆಗಳನ್ನು ಬಳಸಿಕೊಂಡು ರೋಗಿಗಳಿಗೆ ನೀಡುವ ಆಯುರ್ವೇದ ಚಿಕಿತ್ಸೆಯು ಇಂದಿನ ದಿನಗಳಲ್ಲಿ ಹೆಚ್ಚುಹೆಚ್ಚು ಬಳಕೆಗೆ ಬರುತ್ತಿದ್ದು, ಇಂತಹ ಆಯುರ್ವೇದ ಆಸ್ಪತ್ರೆಯನ್ನು ಈ ಗ್ರಾಮೀಣ ಪ್ರದೇಶದಲ್ಲಿ ಪ್ರಾರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಜನರು ವಿದೇಶಗಳಿಂದ ಸಹ ಬರುವಂತಾಗಲಿ ಎಂದರು.
ಜಿ.ಪಂ.ಮಾಜಿ ಅಧ್ಯಕ್ಷ ಬಿ.ಎಸ್.ರಘುನಾಥ್ ಮಾತನಾಡಿ, ಹಲವಾರು ವರ್ಷಗಳಿಂದ ಮಧುಗಿರಿಯಲ್ಲಿ ನೂರಾರು ರೋಗಿಗಳಿಗೆ ಉತ್ತಮ ವೈದ್ಯಕೀಯಚಿಕಿತ್ಸೆ ನೀಡುತ್ತಾ ಬಂದಿರುವ ಡಾ.ಜಯರಾಂರವರು ವೈದ್ಯರಾಗಿ ಅಷ್ಟೇಅಲ್ಲ ಸಮಾಜಸೇವೆಯಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ, ಇವರ ರಾಘವೇಂದ್ರ ಸಮೂಹವಿದ್ಯಾಸಂಸ್ಥೆಗಳು ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದ್ದು, ಇದೀಗ ಇವರ ಸೇವೆ ಆಯುರ್ವೇದ ಕ್ಷೇತ್ರಕ್ಕೂ ಕಾಲಿಟ್ಟಿದೆ ಎಂಬುದಾಗಿ ಹೇಳಿದರು.
ಹಾಸನದ ಆಯುರ್ವೇದ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಶೈಲಜಾ ಮಾತನಾಡಿ, ಆಯುರ್ವೇದ ಚಿಕಿತ್ಸೆಯಿಂದಲೂ ಸಹ ಹಲವಾರು ಕಾಯಿಲೆಗಳನ್ನು ಗುಣಪಡಿಸಿಕೊಂಡ ಲಕ್ಷಂತರ ಉದಾಹರಣೆಗಳು ನಮ್ಮ ದಾಖಲೆಯಲ್ಲಿವೆ, ದಿನದಿಂದ ದಿನಕ್ಕೆ ಹೆಚ್ಚು ಬಳಕೆಗೆ ಬರುತ್ತಿರುವ ಆಯುರ್ವೇದ ಚಿಕಿತ್ಸೆಯು ಜನರ ಮನೆ, ಮನಗಳಲ್ಲಿ ನೆಲೆಸಲಿ, ಮಧುಗಿರಿಯಲ್ಲಿ ಆರಂಭವಾಗಿರುವ ಆಯುರ್ವೇದ ಆಸ್ಪತ್ರೆಯು ಬಹುಬೇಗ ಹೆಸರಾಂತ ಆಸ್ಪತ್ರೆಯಾಗಿ ಬೆಳೆಯಲಿ ಎಂಬುದಾಗಿ ಹೇಳಿದರು.
ಪಾವಗಡದ ಖಾಸಗಿ ಆಸ್ಪತ್ರೆಯ ತಜ್ಞವೈದ್ಯರಾದ ಡಾ.ವೆಂಕಟರರಾಮಯ್ಯ ಮಾತನಾಡಿ, ಸಾಮಾಜಿಕ ಕಳಕಳಿ ಹೊಂದಿರುವ ಮಧುಗಿರಿಯ ಹೆಸರಾಂತ ವೈದ್ಯರಾದ ಶ್ರೀಯುತ ಜಯರಾಂರವರು ಜನಾನುರಾಗಿ ವೈದ್ಯರಾಗಿದ್ದು, ಇವರ ನೇತೃತ್ವದಲ್ಲಿ ಆರಂಭವಾಗುತ್ತಿರುವ ಮಧುಗಿರಿ ಆಯುರ್ವೇದ ಆಸ್ಪತ್ರೆಯು ಬಹುಬೇಗ ಜನಮೆಚ್ಚುಗೆಯನ್ನು ಗಳಿಸುವ ಮೂಲಕ ವಿವಿಧ ರಾಜ್ಯಗಳಿಂದ ಚಿಕಿತ್ಸೆಗಾಗಿ ಜನರನ್ನು ತನ್ನತ್ತ ಸೆಳೆಯುವಂತಾಗಲಿ ಎಂಬುದಾಗಿ ಶುಭಹಾರೈಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪ ಮಾತನಾಡಿ, ಮಧುಗಿರಿಯ ಹೆಸರಾಂತ ವೈದ್ಯರಾದ ಡಾ.ಜಯರಾಂರವರು ಸಮಾಜದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳ ಮೂಲಕ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಇದೀಗ ತುಮಕೂರು ಜಿಲ್ಲೆಗೆ 2ನೇ ಆಯುರ್ವೇದ ಆಸ್ಪತ್ರೆಯನ್ನ ಪ್ರಾರಂಭಿಸಿದ್ದಾರೆ, ಈ ಆಯುರ್ವೇದ ಆಸ್ಪತ್ರೆ ಯಶಸ್ವಿಯಾಗಿ ಕಾರ್ಯನಿರ್ವಹಿಸಲಿ ಎಂಬುದಾಗಿ ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ.ಜಯರಾಂರವರು ಮಾತನಾಡಿ, ಸಮಾಜದ ಶ್ರೇಯೋಭಿವೃದ್ಧಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಬಹುಮುಖ್ಯ ಪಾತ್ರ ವಹಿಸಲಿದ್ದು, ಈ ಎರಡು ಕ್ಷೇತ್ರಗಳು ಸಮಾಜವನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುತ್ತದೆ, ಈ ನಿಟ್ಟಿನಲ್ಲಿ ಶ್ರೀರಾಘವೇಂದ್ರ ಸಮೂಹ ವಿದ್ಯಾಸಂಸ್ಥೆಗಳು ಹಾಗೂ ಆಸ್ಪತ್ರೆಗಳನ್ನು ಪ್ರಾರಂಭಿಸುವ ಮೂಲಕ ಸಮಾಜದ ಜನರ ಸುರಕ್ಷತೆ ಕಾಪಾಡಲಾಗುತ್ತಿದ್ದು, ಇದೀಗ ಆರಂಭವಾದ ಶ್ರೀರಾಘವೇಂದ್ರ ಆಯುರ್ವೇದಆಸ್ಪತ್ರೆ ಯಶಸ್ವಿಯಾಗಲು ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ಅಗತ್ಯವಾಗಿದೆ ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿವಿಧ ಗಣ್ಯರುಗಳನ್ನು ಶಾಲು ಹೊದಿಸಿ, ಸನ್ಮಾನಿಸಿ, ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಾ.ಜಯರಾಂರವರ ಪತ್ನಿ ಶ್ರೀಮತಿ ವಿಮಲಾಜಯರಾಂ, ಮಕ್ಕಳಾದ ಡಾ.ಜೆ.ರಾಘವೇಂದ್ರಬಾಬು, ಡಾ.ಜೆ.ರಂಜಿತಾ, ಡಾ.ಶಾಲಿನಿ ರಾಘವೇಂದ್ರಬಾಬು, ಕುಮಾರಿ ಸಾನ್ವಿ, ಚಿ.ಅಗಸ್ತ್ಯ, ಕುಮಾರಿ ಶ್ಲೋಕ, ಧಾರ್ಮಿಕ ಮುಖಂಡ ಎಂ.ಜಿ.ಶ್ರೀನಿವಾಸ್ ಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಕೃಷ್ಟಾರೆಡ್ಡಿ, ಬಿಜೆಪಿ ಮುಖಂಡರಾದ ಪಾಂಡುರಂಗರೆಡ್ಡಿ, ಚೇತನ ವಿದ್ಯಾಸಂಸ್ಥೆ ತುಂಗೋಟಿ ರಾಮಣ್ಣ, ಹಿರಿಯ ವಕೀಲರಾದ ರಾಮಕೃಷ್ಣ, ಮಾಜಿಪುರಸಭಾ ಅಧ್ಯಕ್ಷರಾದ ನಂಜುಂಡರಾಜು, ಸಹಕಾರಿ ಧುರೀಣ ಗಂಗಣ್ಣಿ, ಸಂಸ್ಥೆಯ ಆಡಳಿತಾಧಿಕಾರಿ ಗುರುಪ್ರಸಾದ್ ಭಟ್, ಶ್ರೀಮತಿ ಲಕ್ಷ್ಮೀ ಭಟ್ ಸೇರಿದಂತೆ ಶ್ರೀರಾಘವೇಂದ್ರ ಸಮೂಹ ವಿದ್ಯಾಸಂಸ್ಥೆಗಳು ಹಾಗೂ ಆಸ್ಪತ್ರೆಗಳ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ಆರಂಭದಲ್ಲಿ ಸಹಶಿಕ್ಷಕಿ ಶ್ರೀಮತಿ ಸುಜಾತ ಪ್ರಾರ್ಥಿಸಿದರು. ಆಸ್ಪತ್ರೆಯ ತಜ್ಞವೈದ್ಯರಾದ ಡಾ.ಉಲ್ಲಾಸ್ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ಕೊನೆಯಲ್ಲಿ ಸಹಶಿಕ್ಷಕಿ ಶ್ರೀಮತಿ ರಾಧಾ ವಂದಿಸಿದರು. ಜುಪಿಟರ್ ಶಾಲೆಯ ಮುಖ್ಯಶಿಕ್ಷಕ ಶ್ರೀನಾಥ್ ಹಾಗೂ ಬಿ.ಎಲ್.ಮಾರುತಿ ಕಾರ್ಯಕ್ರಮ ನಿರೂಪಣೆ ಮಾಡಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading