ಹೊಸದುರ್ಗ, ಮೇ 30: ಇಂದಿನ ಕಷ್ಟವೇ ಮುಂದಿನ ಭವಿಷ್ಯಕ್ಕೆ ಭದ್ರ ಅಡಿಪಾಯವಾಗಿದ್ದು, ಓದುವ ವಯಸ್ಸಿನಲ್ಲಿ ಮನಸಿಟ್ಟು ಅಧ್ಯಯನ ಮಾಡಿದರೆ ಜೀವನ ಸುಖಮಯವಾಗುತ್ತದೆ. “ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಎಂದಿಗೂ ವ್ಯರ್ಥವಾಗಲಾರದು. ಅದು ಒಂದಲ್ಲ ಒಂದು ದಿನ ಫಲ ನೀಡುತ್ತದೆ” ಎಂದು ಸಚ್ಚಿದಾನಂದ ಸೇವಾ ಟ್ರಸ್ಟ್ ಅಧ್ಯಕ್ಷ ಬಸವರಾಜು ವಿದ್ಯಾರ್ಥಿಗಳಿಗೆ ಕರೆ ನೀಡಿದರು.



ಪಟ್ಟಣದ ಜಯದೇವ ಸಮುದಾಯ ಭವನದಲ್ಲಿ ಸಚ್ಚಿದಾನಂದ ಸೇವಾ ಟ್ರಸ್ಟ್ ವತಿಯಿಂದ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಸರ್ವ ಸಮುದಾಯದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ಪೋಷಕರ ತ್ಯಾಗವನ್ನು ಅರಿತು ಸಮಾಜಕ್ಕೆ ಕೊಡುಗೆ ನೀಡಬೇಕು. ವಿದ್ಯಾರ್ಥಿ ಜೀವನವನ್ನು ಸುಂದರಗೊಳಿಸುವಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಬೇಕೆಂಬ ಆಶಯದಿಂದ ಪೋಷಕರು ಅನೇಕ ಕಷ್ಟಗಳನ್ನು ಸಹಿಸಿಕೊಳ್ಳುತ್ತಾರೆ. ಅವರ ಪರಿಶ್ರಮ ಮತ್ತು ತ್ಯಾಗವನ್ನು ಯುವಜನತೆ ಗೌರವಿಸಬೇಕು ಎಂದು ಹೇಳಿದರು.
ಇಂದು ಅಮೂಲ್ಯ ರತ್ನಗಳಾದ ವಿದ್ಯಾರ್ಥಿಗಳನ್ನು ಗೌರವಿಸುವ ಅವಕಾಶ ದೊರೆತಿರುವುದು ಸಂತಸದ ಸಂಗತಿಯಾಗಿದೆ. ಭವಿಷ್ಯದ ಭಾರತವನ್ನು ಕಟ್ಟುವ ಶಕ್ತಿ ಯುವಜನತೆಯಲ್ಲಿದ್ದು, ಅವರು ಆತ್ಮವಿಶ್ವಾಸದಿಂದ ಬೆಳೆದು ಸಮಾಜದಲ್ಲಿ ಮಾದರಿಯಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ನಾಗಪ್ಪ ಕೊಳ್ಳಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸ್ಪಷ್ಟ ಗುರಿ, ಶಿಸ್ತು ಹಾಗೂ ನಿರಂತರ ಪರಿಶ್ರಮದ ಮೂಲಕ ಯಶಸ್ಸು ಸಾಧಿಸಬಹುದು ಎಂದು ಹೇಳಿದರು. ನಿವೃತ್ತ ಶಿಕ್ಷಕ ಮೈಲಾರಪ್ಪ ಕೂಡ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಉಚಿತ ತರಬೇತಿಯ ಮೂಲಕ ಸರ್ಕಾರಿ ಉದ್ಯೋಗಕ್ಕೆ ಯುವಕರನ್ನು ಸಜ್ಜುಗೊಳಿಸುವ ಗುರಿ
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ದೊರಕುವ ಉದ್ದೇಶದಿಂದ ಸಚ್ಚಿದಾನಂದ ಸೇವಾ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ. ಜಾತಿ-ಧರ್ಮ ಭೇದವಿಲ್ಲದೆ ಉಚಿತ ತರಬೇತಿ ನೀಡಲಾಗುತ್ತಿದ್ದು, ಹೊಸದುರ್ಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಉದ್ಯೋಗ ಪಡೆಯಬೇಕು ಎಂಬುದು ಟ್ರಸ್ಟ್‌ನ ಪ್ರಮುಖ ಗುರಿಯಾಗಿದೆ.
— ಬಸವರಾಜು
ಸಂಸ್ಥಾಪಕ ಅಧ್ಯಕ್ಷರು,
ಸಚ್ಚಿದಾನಂದ ಸೇವಾ ಟ್ರಸ್ಟ್
ವರದಿ: ನಾಗತಿಹಳ್ಳಿ ಮಂಜುನಾಥ್
About The Author
Discover more from JANADHWANI NEWS
Subscribe to get the latest posts sent to your email.