ಚಳ್ಳಕೆರೆ: ನಗರದ ಸಮಸ್ಯೆಗಳ ಬಗ್ಗೆ ಗಮನಹರಿಸದೇ ನಗರಸಭೆಯ ಆದಾಯಕ್ಕೂ ಧಕ್ಕೆ ತರುವ ರೀತಿಯಲ್ಲಿ ಅಧಿಕಾರಿಗಳು ಹಾಗೂ ಸರ್ಕಾರ ನಡೆದುಕೊಳ್ಳುತ್ತಿವೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ನಗರಗೆರೆ ಮಹೇಶ್ ಗಂಭೀರ ಆರೋಪಿಸಿದರು.


ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಳ್ಳಕೆರೆ ತಾಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ನಗರದ ಕೈಮಗ್ಗ ಮತ್ತು ಉಣ್ಣೆ ಮಾರಾಟ ಕೇಂದ್ರವು ರೈತರು ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಪ್ರಮುಖ ಕೇಂದ್ರವಾಗಿದೆ ಎಂದರು. ಶಾಸಕರ ಹಾಗೂ ಸಂಸದರ ಅನುದಾನದಡಿ ಅಭಿವೃದ್ಧಿಗೊಂಡಿರುವ ಈ ಕೇಂದ್ರದಿಂದ ಸರ್ಕಾರಕ್ಕೆ ಸಮರ್ಪಕ ತೆರಿಗೆ ಆದಾಯ ಬಂದರೆ ನಗರಸಭೆಯ ಅಭಿವೃದ್ಧಿ ಕಾಮಗಾರಿಗಳಿಗೆ ನೆರವಾಗುತ್ತದೆ ಎಂದು ತಿಳಿಸಿದರು.
ಆದರೆ ಕೈಮಗ್ಗ ಮತ್ತು ಉಣ್ಣೆ ಮಾರಾಟ ಮಳಿಗೆಯ ಜಾಗದ ವಿಚಾರದಲ್ಲಿ ನಗರಸಭೆಗೆ ಬರಬೇಕಿದ್ದ ಆದಾಯವನ್ನು ಉದ್ದೇಶಪೂರ್ವಕವಾಗಿ ಕಡಿತಗೊಳಿಸಲಾಗಿದೆ ಎಂದು ಆರೋಪಿಸಿದರು. ಪ್ರಸ್ತುತ ಸರ್ಕಾರದ ಮಾರುಕಟ್ಟೆ ಮೌಲ್ಯ ಪ್ರಕಾರ ಆ ಜಾಗದ ಚದರ ಅಡಿ ಬೆಲೆ ₹15 ಸಾವಿರವಿದ್ದು, ಒಟ್ಟು ಮೌಲ್ಯ ಸುಮಾರು ₹79 ಲಕ್ಷ ಆಗುತ್ತದೆ. ಉಣ್ಣೆ ಮತ್ತು ಕೈಮಗ್ಗ ಮಂಡಳಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಕಟ್ಟಡವನ್ನು ಭೋಗ್ಯಕ್ಕೆ ನೀಡುವಂತೆ ಕೋರಿದ್ದರು. ಈ ಕುರಿತು ಜಿಲ್ಲಾಧಿಕಾರಿಗಳು ನಗರಸಭೆ ಕಾಯ್ದೆ ಪ್ರಕಾರ ಭೋಗ್ಯಕ್ಕೆ ನೀಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದರೂ, ನಂತರ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ವಿಚಾರ ಚರ್ಚೆಗೆ ಬಂದು ₹79 ಲಕ್ಷ ಮೌಲ್ಯದ ಜಾಗಕ್ಕೆ ಕೇವಲ ಶೇಕಡಾ 10ರಷ್ಟು ಹಣವನ್ನು ಮಾತ್ರ ಪಾವತಿಸುವಂತೆ ಆದೇಶ ಹೊರಡಿಸಲಾಗಿದೆ ಎಂದು ದೂರಿದರು.
ಸರ್ಕಾರದ ಈ ಆದೇಶದಿಂದ ನಗರಸಭೆಗೆ ಕೇವಲ ₹7 ರಿಂದ ₹8 ಲಕ್ಷ ಮಾತ್ರ ಆದಾಯ ಬರಲಿದ್ದು, ನಗರಸಭೆಗೆ ಬರಬೇಕಿದ್ದ ಸಂಪೂರ್ಣ ಆದಾಯ ತಪ್ಪುವಂತಾಗಿದೆ ಎಂದು ಹೇಳಿದರು. ಸರ್ಕಾರದ ಈ ನಿಲುವು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದಂತಿದ್ದು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಇದನ್ನು ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ಸರ್ಕಾರ ತನ್ನ ಆದೇಶವನ್ನು ಹಿಂಪಡೆದು ನಗರಸಭೆಗೆ ಬರಬೇಕಾದ ₹79 ಲಕ್ಷ ಸಂಪೂರ್ಣವಾಗಿ ಬರುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಪಕ್ಷದ ಎಸ್ಸಿ-ಎಸ್ಟಿ ಘಟಕದ ರಾಜ್ಯ ಕಾರ್ಯದರ್ಶಿ ಮಾರುತಿ ಮಾತನಾಡಿ, ನಗರದ ಬಳ್ಳಾರಿ ರಸ್ತೆಯ ರಾಜಕಾಲುವೆಗೆ ನಿಯಮ ಉಲ್ಲಂಘಿಸಿ ಬ್ರಿಡ್ಜ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ರಾಜಕಾಲುವೆಗಳ ನಿರ್ಮಾಣದ ಉದ್ದೇಶ ಚರಂಡಿಗಳ ತ್ಯಾಜ್ಯ ನೀರು ಸರಾಗವಾಗಿ ಹರಿದು ಹೋಗುವುದಾಗಿದ್ದರೂ, ಕೆಲವೆಡೆ ಬ್ರಿಡ್ಜ್ ನಿರ್ಮಿಸಿ ಖಾಸಗಿ ಲೇಔಟ್‌ಗಳಿಗೆ ಲಾಭ ಮಾಡಿಕೊಡುವ ಕೆಲಸವನ್ನು ನಗರಸಭೆ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ದೂರಿದರು.
2021ರಲ್ಲಿ ನಗರಂಗೆರೆ ಕೆರೆಗೆ ಕಲುಷಿತ ನೀರು ಹರಿಸದಂತೆ ನ್ಯಾಯಾಲಯ ಆದೇಶ ನೀಡಿದ್ದರೂ, ನಗರಸಭೆ ಹಾಗೂ ಜಿಲ್ಲಾಡಳಿತ ಕೇವಲ ಭರವಸೆ ನೀಡುವುದರಲ್ಲೇ ಕಾಲಹರಣ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಮತ್ತೆ ಕಲುಷಿತ ನೀರನ್ನು ಕೆರೆಗೆ ಹರಿಸಿದರೆ ಸ್ಥಳೀಯ ಜನರು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಗರಸಭೆ ಆಡಳಿತ ಸಂಪೂರ್ಣ ಹದಗೆಟ್ಟಿದ್ದು, ಅಧಿಕಾರಿಗಳು ಹಾಗೂ ಸರ್ಕಾರದ ಕಣ್ಣಾಮುಚ್ಚಾಲೆಯಿಂದ ಪ್ರಭಾವಿಗಳ ಬಲದಿಂದ ನಗರಸಭೆಗೆ ಬರಬೇಕಾದ ತೆರಿಗೆ ಆದಾಯವನ್ನೇ ತಪ್ಪಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ಜಬಿವುಲ್ಲಾ, ಶ್ರೀನಿವಾಸ್, ವಿನಯ್, ಮಣಿಕಂಠ, ಬಾಲರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.