ಚಿತ್ರದುರ್ಗಮೇ18:
ಮಾಹಿತಿಯ ಕೊರತೆಯಿಂದಾಗಿ ಸರ್ಕಾರದ ಸೌಲಭ್ಯಗಳು ಬುಡಕಟ್ಟು ಪರಿಶಿಷ್ಟ ಪಂಗಡದ ಜನರಿಗೆ ತಲುಪದೇ ಇರಬಾರದು. ಪ್ರತಿಯೊಂದು ಇಲಾಖೆಯೂ ಜವಾಬ್ದಾರಿಯಿಂದ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನದಡಿ ಜನ್ ಭಾಗೀದಾರಿ-ಸಬ್ಸೆ ಡೋರ್ ಸಬ್ಸೆ ಪೆಹ್ಲೆ ಅಭಿಯಾನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಹಾಗೂ ಬಿರ್ಸಾ ಮುಂಡಾ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡದ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿವೆ. ಇವುಗಳ ಪೂರ್ಣ ಮಾಹಿತಿ ಜನರಿಗೆ ಸಿಗುವಂತಾಗಲು ಇಲಾಖಾ ಮಟ್ಟದಲ್ಲಿ ವ್ಯಾಪಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ ಅವರು, ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ, ಯೋಜನೆಗಳನ್ನು ತಳಮಟ್ಟಕ್ಕೆ ತಲುಪಿಸಲು ಶ್ರಮಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ದಿವಾಕರ್ ಮಾತನಾಡಿ, ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ವತಿಯಿಂದ ಜಿಲ್ಲೆಯಲ್ಲಿ ಮೇ 18 ರಿಂದ ಮೇ 25 ರವರೆಗೆ “ಜನ್ ಭಾಗೀದಾರಿ- ಸಬ್ಸೆ ಡೋರ್, ಸಬ್ಸೆ ಪೆಹ್ಲೆ” ಎಂಬ ಐಇಸಿ ಅಭಿಯಾನ ಹಮ್ಮಿಕೊಂಡು ಬುಡಕಟ್ಟು ಸಮುದಾಯದ ಜನರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಪ್ರಯೋಜನಗಳನ್ನು ತಲುಪಿಸುವುದು ಮತ್ತು ಅದಕ್ಕೆ ಬೇಕಾಗುವ ಅಗತ್ಯ ದಾಖಲಾತಿಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳ ಸಮನ್ವಯದೊಂದಿಗೆ ಈ ಅಭಿಯಾನ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಗ್ರಾಮ ಮಟ್ಟದಲ್ಲಿ “Awereness and Benefit Saturation Camps” ಶಿಬಿರಗಳು, ಆರೋಗ್ಯ ತಪಾಸಣಾ ಶಿಬಿರಗಳು ಹಾಗೂ ಬುಡಕಟ್ಟು ಜನರಲ್ಲಿ ಕಂಡುಬರುವ ಸಿಕಲ್ ಸೆಲ್ ಅನೀಮಿಯಾ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಈ ಅವಧಿಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಇದರೊಂದಿಗೆ ಪ್ರಮುಖವಾಗಿ ಪ್ರಧಾನಮಂತ್ರಿ ಜನಮನ್ ಹಾಗೂ ಡಿಎ-ಜೆಜಿಯುಎ ಯೋಜನೆಗಳ ಕುರಿತು ಸಮುದಾಯದ ಜನರಲ್ಲಿ ವ್ಯಾಪಕ ಅರಿವು ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಳೆದ ಬಾರಿ ಈ ಕಾರ್ಯಕ್ರಮವನ್ನು 15 ದಿನಗಳ ಕಾಲ ಹಮ್ಮಿಕೊಳ್ಳಲಾಗಿತ್ತು. ಆದರೆ, ಈ ಬಾರಿ ಏಳು ದಿನಗಳಿಗೆ ಸೀಮಿತಗೊಳಿಸಲಾಗಿದೆ. ಈ ಅವಧಿಯಲ್ಲಿ ಪರಿಶಿಷ್ಟ ಪಂಗಡದ ಜನರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕಿದೆ. ಶಿಕ್ಷಣ, ಆರೋಗ್ಯ, ಪಶುಸಂಗೋಪನೆ, ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಅಡಿಯಲ್ಲಿ ಸಿಗುವ ಸೌಲಭ್ಯಗಳು ಮತ್ತು ಯೋಜನೆಗಳನ್ನು ಅರ್ಹರ ಮನೆಬಾಗಿಲಿಗೆ ತಲುಪಿಸುವ ಕೆಲಸವನ್ನು ವಿವಿಧ ಇಲಾಖೆ ಅಧಿಕಾರಿಗಳು ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ತಮ್ಮ ವ್ಯಾಪ್ತಿಯ ಯೋಜನೆಗಳ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕೇವಲ ಕಾರ್ಯಕ್ರಮಗಳನ್ನು ಮಾಡುವುದಷ್ಟೇ ಅಲ್ಲದೆ, ಪ್ರತಿ ಶಿಬಿರದ ಮಾಹಿತಿ, ಛಾಯಾಚಿತ್ರಗಳು ಹಾಗೂ ವೀಡಿಯೋಗಳನ್ನು ಆದಿ ಪ್ರಸರಣ ಪೋರ್ಟಲ್‍ನಲ್ಲಿ ಅಪ್ಲೋಡ್ ಮಾಡಬೇಕು. ಈ ಪ್ರಚಾರ ಕಾರ್ಯಕ್ರಮದ ಸಂಪೂರ್ಣ ವರದಿಯನ್ನು ಸಲ್ಲಿಸಬೇಕಾಗಿರುವುದರಿಂದ ತಾಲೂಕು ಮಟ್ಟದ ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿಗಳು, ಸಮಾಜ ಕಲ್ಯಾಣಾಧಿಕಾರಿಗಳು ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿಗಳು ಒಟ್ಟಾಗಿ ಈ ಏಳು ದಿನಗಳ ಪ್ರಚಾರ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ತಿಪ್ಪೇಸ್ವಾಮಿ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಎಂ.ಪಿ.ಪ್ರವೀಣ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ಗಿರೀಶ್, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಾದ ಶಿವರಾಜ್, ನಾಸೀರ್ ಉದ್ದೀನ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ದಿನೇಶ್, ಚನ್ನಬಸಪ್ಪ, ಗೋಪಾಲಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.