ಹಿರಿಯೂರು :
ತಾಲ್ಲೂಕಿನ ಬೀರೇನಹಳ್ಳಿ ಭಾಗದಲ್ಲಿ 4 ಮರಿಗಳೊಂದಿಗೆ ತಾಯಿ ಚಿರತೆ ಮತ್ತೆ ಕಾಣಿಸಿಕೊಂಡಿದ್ದು, ಸ್ಥಳೀಯ ಜನತೆಯಲ್ಲಿ ತೀವ್ರ ಆತಂಕ ಹಾಗೂ ಭೀತಿಯ ವಾತಾವರಣ ನಿರ್ಮಾಣವಾಗಿದೆ. ದಿನನಿತ್ಯದ ಕೃಷಿ ಚಟುವಟಿಕೆಗಳಿಗೆ ತೆರಳುವ ರೈತರು ಮತ್ತು ಸಾರ್ವಜನಿಕರು ಭಯದಿಂದಲೇ ದಿನ ದೂಡುವಂತಾಗಿದ್ದು, ಜನರ ಹಾಗೂ ಸಾಕುಪ್ರಾಣಿಗಳ ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕಿದೆ.
ಚಿರತೆ ಹಾಗೂ ಮರಿಗಳು ಆಗಾಗ್ಗೆ ಸಂಚರಿಸುತ್ತಿರುವ ಜಾಗಗಳನ್ನು ಗುರುತಿಸಿ, ಸೂಕ್ತ ಸ್ಥಳಗಳಲ್ಲಿ ತಕ್ಷಣವೇ ಬೋನುಗಳನ್ನು ಇಟ್ಟು ಅವುಗಳನ್ನು ಸುರಕ್ಷಿತವಾಗಿ ಸೆರೆಹಿಡಿಯಲು ‘ಪವರ್ ಫೋಕಸ್ ನ್ಯೂಸ್’ ವತಿಯಿಂದ ಅರಣ್ಯ ಇಲಾಖೆಗೆ ತುರ್ತು ಮನವಿ ಮಾಡಲಾಗುತ್ತಿದೆ. ಗ್ರಾಮಸ್ಥರಲ್ಲಿ ಧೈರ್ಯ ತುಂಬಲು ಮತ್ತು ಅನಾಹುತಗಳನ್ನು ತಪ್ಪಿಸಲು ಅರಣ್ಯ ಸಿಬ್ಬಂದಿಯಿಂದ ರಾತ್ರಿ ವೇಳೆ ನಿರಂತರ ಗಸ್ತು ವ್ಯವಸ್ಥೆಯನ್ನು ಕಲ್ಪಿಸಬೇಕಿದೆ.
ಮರಿಗಳೊಂದಿಗೆ ಇರುವ ತಾಯಿ ಚಿರತೆಯು ಹೆಚ್ಚು ಹಿಂಸಾತ್ಮಕವಾಗಿ ವರ್ತಿಸುವ ಸಾಧ್ಯತೆ ಇರುವುದರಿಂದ, ಕಾರ್ಯಾಚರಣೆಗೆ ನುರಿತ ತಂಡವನ್ನು ತಕ್ಷಣ ನಿಯೋಜಿಸುವುದು ಅತ್ಯಗತ್ಯವಾಗಿದೆ. ಇದೇ ವೇಳೆ ಸ್ಥಳೀಯ ಸಾರ್ವಜನಿಕರೂ ಸಹ ತಮ್ಮ ಸುರಕ್ಷತೆಗಾಗಿ ಸೂಕ್ತ ಎಚ್ಚರಿಕೆಯನ್ನು ವಹಿಸಬೇಕಿದೆ.
ಸಂಜೆ ಮತ್ತು ಮುಂಜಾನೆಯ ವೇಳೆಯಲ್ಲಿ ಒಂಟಿಯಾಗಿ ಓಡಾಡುವುದನ್ನು ತಪ್ಪಿಸುವುದರ ಜೊತೆಗೆ, ಸಣ್ಣ ಮಕ್ಕಳನ್ನು ಮನೆಯಿಂದ ಹೊರಗೆ ಒಂಟಿಯಾಗಿ ಬಿಡದೆ ಸಾಕುಪ್ರಾಣಿಗಳನ್ನು ಸುರಕ್ಷಿತ ಕೊಟ್ಟಿಗೆಗಳಲ್ಲಿ ಕಟ್ಟಿಹಾಕಬೇಕಿದೆ. ತೋಟ ಅಥವಾ ಹೊಲಗಳಿಗೆ ತೆರಳುವಾಗ ಗುಂಪಾಗಿ ಸಂಚರಿಸಿ, ಕೈಯಲ್ಲಿ ಟಾರ್ಚ್ ಹಾಗೂ ಶಬ್ದ ಮಾಡುವ ಉಪಕರಣಗಳನ್ನು ಬಳಸುವುದು ಸೂಕ್ತ.ಅರಣ್ಯ ಇಲಾಖೆಯು ಈ ಕೂಡಲೇ ಸ್ಪಂದಿಸಿ, ಚಿರತೆ ಹಾಗೂ ಮರಿಗಳನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಿ ಬೀರೇನಹಳ್ಳಿ ಗ್ರಾಮಸ್ಥರ ಆತಂಕವನ್ನು ದೂರಗೊಳಿಸಬೇಕು ಎಂಬುದಾಗಿ ಪವರ್ ಫೋಕಸ್ ನ್ಯೂಸ್ ಮುಖ್ಯಸ್ಥರಾದ ಅರ್ಜುನ್ ಬ್ಯಾಡರಹಳ್ಳಿರವರು ಬೀರೇನಹಳ್ಳಿ ಗ್ರಾಮಸ್ಥರ ಪರವಾಗಿ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.