April 20, 2026
IMG-20260420-WA0182.jpg

ಮೊಳಕಾಲ್ಮುರು: ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸರ್ವೆ ಇಲಾಖೆಯು ರಾಜ್ಯದ ಜನರ ಪಾಲಿಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸದೆ ‘ಸತ್ತು ಹೋಗಿದೆಯೆ’ ಎಂದು ಬಿಜೆಪಿ ಮುಖಂಡ ಪ್ರಭಾಕರ ಮ್ಯಾಸನಾಯಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಮಾತ್ರವೇ 10,834 ಅರ್ಜಿಗಳು ಬಾಕಿ ಉಳಿದಿದ್ದು, ಈ ಪೈಕಿ ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲ್ಲೂಕುಗಳಲ್ಲಿ 3,389 ಅರ್ಜಿಗಳು ಇನ್ನೂ ಸರ್ವೆಯಾಗದೆ ಉಳಿದಿವೆ. ಈ ಅರ್ಜಿಗಳ ವಿಲೇವಾರಿ ಮುಂದಿನ ಎರಡು ವರ್ಷಗಳಲ್ಲಿಯೂ ಆಗುವ ಲಕ್ಷಣ ಕಾಣಿಸುತ್ತಿಲ್ಲ ಎಂದು ಅವರು ಆರೋಪಿಸಿದರು.
ರೈತರು ಸರ್ವೆ ಸಮಸ್ಯೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಅವರ ನೋವು ಹೇಳತೀರದಂತಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಈ ಸಮಸ್ಯೆಯನ್ನು ಕಂಡೂ ಕಾಣದಂತೆ ನಿರ್ಲಕ್ಷ್ಯ ತೋರಿಸುತ್ತಿದೆ ಎಂದು ಪ್ರಭಾಕರ ಟೀಕಿಸಿದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಕೆಲವು ಸುಧಾರಣೆಗಳನ್ನು ತಂದಿದ್ದರೂ, ಸರ್ವೆ ಇಲಾಖೆಯ ಗಂಭೀರ ಸಮಸ್ಯೆಗಳ ಕಡೆ ಗಮನ ಹರಿಸದಿರುವುದು ಏಕೆ ಎಂದು ಪ್ರಶ್ನಿಸಿದರು.
ಪೋಡಿ, ದುರಸ್ತಿ, ಹದ್ದುಬಸ್ತು, 11 ಇ ಸೇರಿದಂತೆ ವಿವಿಧ ಸೇವೆಗಳ ಅರ್ಜಿಗಳು ದೊಡ್ಡ ಪ್ರಮಾಣದಲ್ಲಿ ಬಾಕಿ ಉಳಿದಿದ್ದು, ಸರ್ವೆ ಇಲಾಖೆ ಜನರ ನಂಬಿಕೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಇದೇ ವೇಳೆ, ಚಿತ್ರದುರ್ಗ ಜಿಲ್ಲಾಡಳಿತ ಕಾಂಗ್ರೆಸ್ ಪಕ್ಷದ ಏಜೆಂಟರಂತೆ ವರ್ತಿಸುತ್ತಿದೆ ಎಂದು ವ್ಯಂಗ್ಯವಾಡಿದ ಅವರು, ಗ್ರಾಮ ಆಡಳಿತ ಅಧಿಕಾರಿಗಳು ‘ಖಾತೆ ಆಂದೋಲನ’ ಹೆಸರಿನಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಪೌತಿ ಖಾತೆ ಹೆಸರಿನಲ್ಲಿ ತಪ್ಪು ಖಾತೆಗಳು ಮಾಡಲಾಗುತ್ತಿದ್ದು, ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೇ ಖಾತೆ ಮಾಡುತ್ತಿರುವುದು ಕಂಡು ಬಂದಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಸಮಗ್ರ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳಿಗೆ ನೀಡಿರುವ ಖಾತೆ ಮಾಡುವ ಅಧಿಕಾರವನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು ಎಂದು ಪ್ರಭಾಕರ ಮ್ಯಾಸನಾಯಕ ಆಗ್ರಹಿಸಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading