ಪಾವಗಡ, ಜು.15: ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಪರಮಪೂಜ್ಯ ಸ್ವಾಮಿ ಜಪಾನಂದಜೀ ಅವರು ಬುಧವಾರ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿ ಸಂಸ್ಥೆಯ ವಿವಿಧ ಸೇವಾ ಚಟುವಟಿಕೆಗಳ ಕುರಿತು ವಿವರವಾದ ಮಾಹಿತಿ ನೀಡಿದರು.
ಈ ವೇಳೆ ಸಂಸ್ಥೆಯ ಆರೋಗ್ಯ, ನೇತ್ರ ಹಾಗೂ ಗ್ರಾಮೀಣ ಸೇವಾ ಕಾರ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಸಚಿವ ಯು.ಟಿ. ಖಾದರ್ ಅವರು, ಸುಮಾರು ಹನ್ನೆರಡು ವರ್ಷಗಳ ಹಿಂದೆ ತಾವು ಆರೋಗ್ಯ ಸಚಿವರಾಗಿದ್ದಾಗ ಪಾವಗಡಕ್ಕೆ ಭೇಟಿ ನೀಡಿದ್ದ ಸಂದರ್ಭವನ್ನು ಸ್ಮರಿಸಿದರು.
ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ, ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಶ್ರೀ ರಾಮಕೃಷ್ಣ ಹೃದ್ರೋಗ ಚಿಕಿತ್ಸಾ ಕೇಂದ್ರಗಳ ಸೇವಾ ಕಾರ್ಯವನ್ನು ಸಚಿವರು ಶ್ಲಾಘಿಸಿ, ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸಿದರು. ಅಲ್ಲದೆ, ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆಯಲ್ಲಿ ಶೀಘ್ರದಲ್ಲೇ ಆರಂಭಗೊಳ್ಳಲಿರುವ ಒಂದು ಕೋಟಿ ರೂ. ವೆಚ್ಚದ ನೂತನ ಯೋಜನೆ ಹಾಗೂ ಘಟಕಕ್ಕೆ ಚಾಲನೆ ನೀಡಲು ತಾವು ಆಗಮಿಸುವುದಾಗಿ ಭರವಸೆ ನೀಡಿದರು.
ಪಾವಗಡದಂತಹ ಹಿಂದುಳಿದ ಗ್ರಾಮೀಣ ಪ್ರದೇಶ ಹಾಗೂ ಆಂಧ್ರಪ್ರದೇಶ ಗಡಿ ಭಾಗದಲ್ಲಿ ಕಳೆದ 35 ವರ್ಷಗಳಿಂದ ನಿರಂತರವಾಗಿ ವಿವಿಧ ಆರೋಗ್ಯ ಮತ್ತು ಸಾಮಾಜಿಕ ಸೇವಾ ಯೋಜನೆಗಳನ್ನು ನಡೆಸುತ್ತಿರುವ ಸ್ವಾಮಿ ಜಪಾನಂದಜೀ ಅವರ ಕಾರ್ಯವನ್ನು ಸಚಿವರು ವಿಶೇಷವಾಗಿ ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಾಧನೆಗಳ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದ ಸಚಿವರು, ಇದುವರೆಗೆ 10 ಲಕ್ಷಕ್ಕೂ ಹೆಚ್ಚು ಹೊರರೋಗಿಗಳಿಗೆ ಚಿಕಿತ್ಸೆ, 52 ಸಾವಿರಕ್ಕೂ ಅಧಿಕ ನೇತ್ರ ಶಸ್ತ್ರಚಿಕಿತ್ಸೆಗಳು, 15,200 ಕ್ಷಯರೋಗಿಗಳ ಚಿಕಿತ್ಸೆ, 4,000 ಕುಷ್ಠರೋಗಿಗಳ ಸೇವೆ, ಸಾವಿರಾರು ಹೆಚ್‌ಐವಿ/ಏಡ್ಸ್ ಪೀಡಿತರಿಗೆ ನೆರವು, ಹಾಗೂ ಸಾವಿರಾರು ಮಕ್ಕಳಿಗೆ ಉಚಿತ ನೇತ್ರ ತಪಾಸಣೆ ಮತ್ತು ಕನ್ನಡಕ ವಿತರಣೆ ಸೇರಿದಂತೆ ಅನೇಕ ಜನಪರ ಸೇವೆಗಳನ್ನು ಸಂಸ್ಥೆ ಯಶಸ್ವಿಯಾಗಿ ನಡೆಸಿರುವುದನ್ನು ಉಲ್ಲೇಖಿಸಿದರು.
ಸಭೆಯ ಅಂತ್ಯದಲ್ಲಿ ಆರೋಗ್ಯ ಇಲಾಖೆಯ ಹೊಣೆಗಾರಿಕೆಯನ್ನು ಮತ್ತೊಮ್ಮೆ ವಹಿಸಿಕೊಂಡಿರುವ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ಸೇವಾಶ್ರಮ ಹಾಗೂ ಆಸ್ಪತ್ರೆಗಳ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಸದಸ್ಯರು ಹಾಗೂ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನ ಹಿರಿಯ ವಕೀಲರಾದ ಶ್ರೀ ಹೊನ್ನಪ್ಪ ಉಪಸ್ಥಿತರಿದ್ದರು.






About The Author
Discover more from JANADHWANI NEWS
Subscribe to get the latest posts sent to your email.