July 9, 2026
FB_IMG_1783603254909


ಚಿತ್ರದುರ್ಗಜುಲೈ09:
ಮತದಾರರ ಪಟ್ಟಿಯ ನಿಖರತೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಕಾರಾತ್ಮಕವಾಗಿ ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‍ಐಆರ್) ಸಂಬಂಧ ಮತದಾರರ ಗಣತಿ ನಮೂನೆಗಳ ವಿತರಿಸಿರುವ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಗಣತಿ ನಮೂನೆಗಳ ವಿತರಣೆಯ ಕಾರ್ಯವು ಪ್ರಗತಿಯಲ್ಲಿದ್ದು, ಈಗಾಗಲೇ ಶೇ.98 ರಷ್ಟು ಪ್ರಗತಿ ಸಾಧಿಸಲಾಗಿದೆ. ಬಾಕಿ ಉಳಿದಿರುವ ಶೇ.2ರಷ್ಟು ಪ್ರಕರಣಗಳಲ್ಲಿ ಮರಣ ಹೊಂದಿದವರು, ಸ್ಥಳಾಂತರಗೊಂಡವರು ಹಾಗೂ ಮನೆಗೆ ಬೀಗ ಹಾಕಿ ಬೇರೆಡೆ ವಾಸಿಸುತ್ತಿರುವವರ ವಿವರಗಳಿದ್ದು, ಇವುಗಳನ್ನು ಸರಿಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಜುಲೈ 08ರ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯ 14,40,534 ಮತದಾರರ ಪೈಕಿ ಈಗಾಗಲೇ 14,04,219 ಮತದಾರರರನ್ನು (ಶೇ.97.48) ಮ್ಯಾಪಿಂಗ್ ಮಾಡಲಾಗಿದೆ. 36,315 ಮತದಾರರ ಮ್ಯಾಪಿಂಗ್ ಬಾಕಿ ಉಳಿದಿದ್ದು, ಈ ಮತದಾರರ ವಿಳಾಸ ಪತ್ತೆಯಾಗುತ್ತಿಲ್ಲ. ಇವರು ಯಾರು ಮತ್ತು ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಪಟ್ಟಿಯಿಂದ ತೆಗೆದುಹಾಕಲು ಅಥವಾ ಸರಿಪಡಿಸಲು ರಾಜಕೀಯ ಪಕ್ಷಗಳು ನೇಮಕ ಮಾಡಿರುವ ಬೂತ್ ಮಟ್ಟದ ಏಜೆಂಟರುಗಳು ನಮಗೆ ಸಂಪೂರ್ಣ ಮಾಹಿತಿ ನೀಡಿ ಸಹಕರಿಸಬೇಕಿದೆ. ಮರಣ ಹೊಂದಿದವರ ಡೆತ್ ಸರ್ಟಿಫಿಕೇಟ್ ಲಭ್ಯವಿದ್ದರೆ ಅಂಥವರ ಹೆಸರನ್ನು ಪಟ್ಟಿಯಿಂದ ತೆಗೆಯಲು ಸುಲಭವಾಗುತ್ತದೆ ಎಂದು ಹೇಳಿದರು.
ವಿಶೇಷವಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮತದಾರರನ್ನು ಗುರುತಿಸುವಲ್ಲಿ ಸ್ಥಳೀಯ ವಾರ್ಡ್ ಸದಸ್ಯರು, ಮಾಜಿ ಕೌನ್ಸಿಲರ್‍ಗಳು ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರ ಪಾತ್ರ ದೊಡ್ಡದಾಗಿದೆ. ಪಕ್ಷಾತೀತವಾಗಿ ಇವರೆಲ್ಲರಿಗೂ ಸ್ಥಳೀಯ ಮತದಾರರ ಬಗ್ಗೆ ನಿಖರವಾದ ಮಾಹಿತಿ ಇರುತ್ತದೆ. ಆದ್ದರಿಂದ ತಕ್ಷಣವೇ ತಹಶೀಲ್ದಾರರ, ಇಒ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳ ನೇತೃತ್ವದಲ್ಲಿ ಸಭೆಗಳನ್ನು ಕರೆದು, ಮಹಜರು ಪ್ರಕ್ರಿಯೆಯ ಮೂಲಕ ನಿಖರ ಮಾಹಿತಿ ಪಡೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಜಿಲ್ಲೆಯಲ್ಲಿ ಅತ್ಯಂತ ಪಾರದರ್ಶಕ ಹಾಗೂ ದೋಷಮುಕ್ತ ಮತದಾರರ ಪಟ್ಟಿ ಸಿದ್ಧಪಡಿಸಲು ಎಲ್ಲಾ ರಾಜಕೀಯ ಪಕ್ಷಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಅತ್ಯಂತ ಯಶಸ್ವಿಯಾಗಿ ಸಾಗುತ್ತಿದ್ದು, ಗಣತಿ ನಮೂನೆಗಳ ವಿತರಣೆಯಲ್ಲಿ ಇಡೀ ರಾಜ್ಯದಲ್ಲೇ ನಮ್ಮ ಜಿಲ್ಲೆ ಮುಂಚೂಣಿಯಲ್ಲಿದೆ. ಯಾವುದೇ ಗೊಂದಲ, ವಿವಾದಗಳಿಗೆ ಆಸ್ಪದ ನೀಡದಂತೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಗಣತಿ ನಮೂನೆಗಳನ್ನು ಭರ್ತಿ ಮಾಡುವಾಗ ಸಾರ್ವಜನಿಕರಲ್ಲಿ ಉಂಟಾಗುವ ಗೊಂದಲಗಳ ತಪ್ಪಿಸಲು ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ. ಫಾರ್ಮ್‍ಗಳಲ್ಲಿನ ಮೊದಲ ಭಾಗ ಹಾಗೂ ಎರಡನೇ ಭಾಗಗಳನ್ನು ಭರ್ತಿ ಮಾಡುವಾಗ ಆಗುವ ಸಾಮಾನ್ಯ ತಪ್ಪುಗಳನ್ನು ತಪ್ಪಿಸಲು ಬಿಎಲ್‍ಒ ಮತ್ತು ಬಿಎಲ್‍ಎಗಳಿಗೆ ವಿಶೇಷ ತರಬೇತಿ ನೀಡಲಾಗಿದೆ ಎಂದು ತಿಳಿಸಿದ ಅವರು, ಎಸ್‍ಐಆರ್ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಪ್ರತಿ ದಿನ ಸಂಜೆ ಎಲ್ಲಾ ತಾಲೂಕುಗಳ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಚುನಾವಣಾ ತಹಶೀಲ್ದಾರ್ ಬೀಬೀ ಫಾತಿಮಾ, ಕಾಂಗ್ರೆಸ್ ಪಕ್ಷದ ಎಂ.ಕೆ.ತಾಜ್‍ಪೀರ್, ಡಿ.ಎನ್.ಮೈಲಾರಪ್ಪ, ಸಂಪತ್ ಕುಮಾರ್, ಬಿಜೆಪಿ ಪಕ್ಷದ ಟಿ.ಯಶವಂತ ಕುಮಾರ್, ಬಿಎಸ್‍ಪಿ ಪಕ್ಷದ ಪ್ರಕಾಶ್, ನಿಂಗರಾಜ್ ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading