ವರದಿ : ಎಂ ಶಿವಮೂರ್ತಿ ನಾಯಕನಹಟ್ಟಿ.
ನಾಯಕನಹಟ್ಟಿ: ರಾಜಕೀಯ ಭಿನ್ನಾಭಿಪ್ರಾಯಗಳಿಂದ ದೂರವಾಗಿದ್ದ ನಾಯಕನಹಟ್ಟಿ ಹೋಬಳಿಯ ವಾಲ್ಮೀಕಿ ನಾಯಕ ಸಮುದಾಯದ ಹಿರಿಯ ಮುಖಂಡರಾದ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಹಾಗೂ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ ಒಂದೇ ವೇದಿಕೆಯಲ್ಲಿ ಒಗ್ಗಟ್ಟಿನ ಸಂದೇಶ ಸಾರಿದ್ದು, ಸಮುದಾಯದಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.




ವಾಲ್ಮೀಕಿ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಬಸಪ್ಪ ನಾಯಕ, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮಾಜದ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಬೇಕು. ಮುಂದಿನ ವಾಲ್ಮೀಕಿ ಜಯಂತಿಯನ್ನು ಎಲ್ಲ ಮುಖಂಡರು ಹಾಗೂ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಆಚರಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಮಾತನಾಡಿ, ಹಿಂದಿನ ಭಿನ್ನಾಭಿಪ್ರಾಯಗಳಿಂದ ಸಮಾಜದಲ್ಲಿ ಒಡಕು ಮೂಡಿದೆ. ಇನ್ನು ಮುಂದೆ ಸಮಾಜ ವಿಭಜನೆಯಾಗಲು ಅವಕಾಶ ನೀಡಬಾರದು. ಎಲ್ಲ ಮುಖಂಡರನ್ನು ಒಂದೆಡೆ ಸೇರಿಸಿ ಚರ್ಚೆ ನಡೆಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ರಾಜಕೀಯಕ್ಕಿಂತ ಸಮಾಜದ ಹಿತ ಮುಖ್ಯವಾಗಿದ್ದು, ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ ಮಾತನಾಡಿ, ರಾಜಕೀಯ ವಿಚಾರಗಳಲ್ಲಿ ಬೇರೆ ಬೇರೆ ದಾರಿಯಲ್ಲಿ ಸಾಗಿದ್ದರೂ ಸಮಾಜದ ಅಭಿವೃದ್ಧಿಯ ವಿಚಾರದಲ್ಲಿ ನಮ್ಮ ನಡುವೆ ವಿರೋಧವಿಲ್ಲ. ಸಮುದಾಯ ಭವನ ನಿರ್ಮಾಣ, ವಾಲ್ಮೀಕಿ ಪುತ್ಥಳಿ ಸ್ಥಾಪನೆ ಸೇರಿದಂತೆ ಸಮಾಜದ ಅಭಿವೃದ್ಧಿಗೆ ಹಲವು ಕಾರ್ಯಗಳನ್ನು ಕೈಗೊಳ್ಳಲಾಗಿದೆ. ನಾಯಕನಹಟ್ಟಿ ಹೋಬಳಿಯ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ರಾಜಕೀಯವೇ ಬೇರೆ, ಸಮಾಜದ ಹಿತವೇ ಬೇರೆ. ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಿನಿಂದ ಮುನ್ನಡೆಯೋಣ ಎಂದರು.
ಸಭೆಯಲ್ಲಿ ಹಿರಿಯ ಮುಖಂಡರು ಹಾಗೂ ಸಮುದಾಯದ ಪದಾಧಿಕಾರಿಗಳು ಭಾಗವಹಿಸಿದ್ದರು. ಮುಖಂಡರ ಒಗ್ಗಟ್ಟಿನ ಮಾತುಗಳು ಮುಂಬರುವ ವಾಲ್ಮೀಕಿ ಜಯಂತಿಯನ್ನು ಒಗ್ಗಟ್ಟಿನಿಂದ ಆಚರಿಸುವ ನಿರೀಕ್ಷೆ ಮೂಡಿಸಿವೆ.
About The Author
Discover more from JANADHWANI NEWS
Subscribe to get the latest posts sent to your email.
