ದಾವಣಗೆರೆ, ಅಕ್ಟೋಬರ್ 19 ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯನ್ನು ಮಾದರಿ ನೀತಿ ಸಂಹಿತೆಯನ್ವಯ ಅತ್ಯಂತ ಪಾರದರ್ಶಕವಾಗಿ ನಡೆಸಬೇಕು. ನಿಯೋಜಿತ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿಯು ಯಾವುದೇ ಗೊಂದಲ ಮತ್ತು ಲೋಪಗಳಿಗೆ ಅವಕಾಶ ನೀಡದಂತೆ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದರು.
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಯ ಪೂರ್ವಸಿದ್ದತಾ ಸಭೆ ಹಾಗೂ ವಿಡಿಯೋ ಸಂವಾದದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಕ್ಟೋಬರ್ 23 ರಂದು ಬೆಳಿಗ್ಗೆ 8.00 ರಿಂದ ಸಂಜೆ 4.00 ರವರೆಗೆ ಮತದಾನ ನಡೆಯಲಿದೆ. ಅಕ್ಟೋಬರ್ 20 ಮತ್ತು 21 ರಂದು ಸರ್ಕಾರಿ ರಜೆ ಇರುವುದರಿಂದ ಜಿಲ್ಲೆಯ ಎಲ್ಲಾ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ತಮ್ಮ ಕೇಂದ್ರ ಸ್ಥಾನದಲ್ಲೇ ಹಾಜರಿರಬೇಕು ಎಂದು ಆದೇಶ ನೀಡಿದರು.
ಮತದಾರರ ಚೀಟಿ ಹಂಚುವ ಕಾರ್ಯವನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಬೇಕು. ವಿತರಿಸಲಾಗದೆ ಬಾಕಿ ಉಳಿಯುವ ಮತದಾರರ ಚೀಟಿಗಳನ್ನು ಚುನಾವಣೆಯ ದಿನದಂದೇ ಮತಗಟ್ಟೆ ಕೇಂದ್ರಗಳಲ್ಲಿ ವಿತರಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ” ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೇಖರ್ ಹೆಚ್.ಟಿ. ಅವರು ಮಾತನಾಡಿ, “ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಯು ಶಾಂತಿಯುತವಾಗಿ ನಡೆಯಲು ಅಗತ್ಯವಿರುವಷ್ಟು ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕ್ಷೇತ್ರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಡಿವೈಎಸ್ಪಿ ಶರಣಬಸವೇಶ್ವರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಧಾನ ಪರಿಷತ್ ಚುನಾವಣೆ: ಮದ್ಯ ಮಾರಾಟ ನಿಷೇಧ ಆದೇಶದಲ್ಲಿ ತಿದ್ದುಪಡಿ – ಜಿಲ್ಲಾಧಿಕಾರಿ ಆದೇಶ
ದಾವಣಗೆರೆ, ಅಕ್ಟೋಬರ್ 19 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆ-2026ರ ಹಿನ್ನೆಲೆಯಲ್ಲಿ ಈ ಹಿಂದೆ ಹೊರಡಿಸಲಾಗಿದ್ದ ಮದ್ಯ ಮಾರಾಟ ನಿಷೇಧ (ಶುಷ್ಕ ದಿನ) ಆದೇಶಕ್ಕೆ ಸಂಬಂಧಿಸಿದಂತೆ ದಾವಣಗೆರೆ ಮಹಾನಗರ ಪಾಲಿಕೆ, ದಾವಣಗೆರೆ ತಾಲ್ಲೂಕು , ಹರಿಹರ ತಾಲ್ಲೂಕು (ಹರಿಹರ ನಗರ ವ್ಯಾಪ್ತಿಯ ಕೆ.ಎಸ್.ಬಿ.ಸಿ.ಎಲ್ ಹೊರತುಪಡಿಸಿ) ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ ಅಕ್ಟೋಬರ್ 21 ರಂದು ಸಂಜೆ 6 ಗಂಟೆಯಿಂದ ಅಕ್ಟೋಬರ್ 23 ರ ಸಂಜೆ 7 ಗಂಟೆಯವರಿಗೆ ಮದ್ಯ ಮಾರಾಟ ಮತ್ತು ಸರಬರಾಜನ್ನು ನಿಷೇಧಿಸಿದೆ. ದಾವಣಗೆರೆ ನಗರ ವ್ಯಾಪ್ತಿಯ ಕೆ.ಎಸ್.ಬಿ.ಸಿ.ಎಲ್ (KSBCL) ಡಿಪೋ ಹೊರತುಪಡಿಸಿ ಆದೇಶ ಅನ್ವಯವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಜಿ.ಎಂ. ಗಂಗಾಧರಸ್ವಾಮಿ ಅವರು ಆದೇಶ ಹೊರಡಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆ: ಅಕ್ಟೋಬರ್ 23 ರಂದು ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ
ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಮತದಾನವು 2026ರ ಅಕ್ಟೋಬರ್ 23 ರ ಶುಕ್ರವಾರ ನಡೆಯಲಿರುವುದರಿಂದ, ಅರ್ಹಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಶುಕ್ರವಾರ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿ ಸರ್ಕಾರ ಆದೇಶಿಸಿದೆ
ಮತದಾರರು ಚುನಾವಣೆಯ ಮತದಾನದಲ್ಲಿ ಭಾಗವಹಿಸಲು ಪೂರ್ವಾನುಮತಿಯನ್ನು ಪಡೆಯುವ ಷರತ್ತಿಗೊಳಪಟ್ಟು, ರಜೆ ಮಂಜೂರು ಮಾಡಲು ಅಧಿಕಾರವುಳ್ಳ ಪ್ರಾಧಿಕಾರಿಗಳು ಈ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಬೇಕೆಂದು ಅದೇಶದಲ್ಲಿ ತಿಳಿಸಲಾಗಿದೆ.
About The Author
Discover more from JANADHWANI NEWS
Subscribe to get the latest posts sent to your email.
