October 25, 2026
IMG-20261025-WA0236

ವರದಿ : ಎಂ ಶಿವಮೂರ್ತಿ, ನಾಯಕನಹಟ್ಟಿ.
ನಾಯಕನಹಟ್ಟಿ: ಮಧ್ಯ ಕರ್ನಾಟಕದ ಆರಾಧ್ಯದೈವ, “ಮಾಡಿದಷ್ಟು ನೀಡು ಭಿಕ್ಷೆ” ಎಂಬ ತತ್ವವನ್ನು ನಾಡಿಗೆ ಸಾರಿದ ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳು ಜೀವಂತ ಸಮಾಧಿಯಾಗಿರುವ ಹೊರಮಠಕ್ಕೆ ತೆರಳುವ ಮಾರ್ಗದಲ್ಲಿನ ಗೋಪುರದ ಕೆಳಗೆ ಮಳೆ ಬಂದಾಗ ನೀರು ನಿಂತು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.

ಪಟ್ಟಣದಲ್ಲಿ ಹೊರಮಠಕ್ಕೆ ತೆರಳುವ ಮಾರ್ಗದಲ್ಲಿರುವ ಗೋಪುರದ ಕೆಳಭಾಗದಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗಲು ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ಬಂದಾಗ ನೀರು ಸಂಗ್ರಹವಾಗುತ್ತದೆ. ಇದರಿಂದ ಪಾದಚಾರಿಗಳು, ವಾಹನ ಸವಾರರು ಹಾಗೂ ಭಕ್ತರು ಸಂಚರಿಸಲು ತೊಂದರೆಯಾಗುತ್ತಿದೆ. ವಿಶೇಷವಾಗಿ ಪ್ರತಿ ಸೋಮವಾರ ಒಳಮಠದಿಂದ ಹೊರಮಠಕ್ಕೆ ನಡೆಯುವ ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳ ಪಲ್ಲಕ್ಕಿ ಉತ್ಸವಕ್ಕೂ ನೀರು ಅಡ್ಡಿಯಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿ ಸೋಮವಾರ ನಡೆಯುವ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇಂತಹ ಸಂದರ್ಭದಲ್ಲಿ ಗೋಪುರದ ಕೆಳಗೆ ನೀರು ನಿಂತರೆ ಉತ್ಸವದ ಸಂಚಾರಕ್ಕೂ ತೊಂದರೆಯಾಗುವುದರ ಜೊತೆಗೆ ಭಕ್ತರು ಮತ್ತು ವಾಹನ ಸವಾರರು ಸಮಸ್ಯೆ ಎದುರಿಸಬೇಕಾಗುತ್ತದೆ.

ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಬದಲು ಪಟ್ಟಣ ಪಂಚಾಯಿತಿ ಅಧಿಕಾರಿಗಳು ದೇವಸ್ಥಾನದ ಆಡಳಿತ ಮಂಡಳಿಯತ್ತ, ದೇವಸ್ಥಾನದವರು ಪಟ್ಟಣ ಪಂಚಾಯಿತಿಯತ್ತ ಜವಾಬ್ದಾರಿ ವರ್ಗಾಯಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ. ಸಂಬಂಧಪಟ್ಟವರು ಪರಸ್ಪರ ಆರೋಪಿಸುವುದನ್ನು ಬಿಟ್ಟು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂಬುದು ಭಕ್ತರ ಒತ್ತಾಯವಾಗಿದೆ.

ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳ ಕ್ಷೇತ್ರಕ್ಕೆ ನಿತ್ಯವೂ ಭಕ್ತರು ಭೇಟಿ ನೀಡುವುದರಿಂದ ಗೋಪುರದ ಕೆಳಗೆ ನೀರು ನಿಲ್ಲದಂತೆ ಒಳಚರಂಡಿ ಅಥವಾ ಮಳೆನೀರು ಹರಿದುಹೋಗುವ ವ್ಯವಸ್ಥೆ ಕಲ್ಪಿಸಬೇಕು. ಪಟ್ಟಣ ಪಂಚಾಯಿತಿ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸಮನ್ವಯದಿಂದ ಕಾರ್ಯನಿರ್ವಹಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading