ಚಿತ್ರದುರ್ಗಏ.27:
ಶುಚಿತ್ವ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಮಲೇರಿಯಾ ಮುಕ್ತ ಸಮಾಜ ನಿರ್ಮಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಮೀರಾಸಾಬಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಎಚ್.ಸಿ.ಗುರುಪ್ರಸಾದ್ ತಿಳಿಸಿದರು.
ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿಯಲ್ಲಿ ಸೋಮವಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮಲೇರಿಯಾ ಜ್ವರವು ಮುಖ್ಯವಾಗಿ ಹೆಣ್ಣು ಅನಾಫಿಲಿಸ್ ಸೊಳ್ಳೆ ಕಚ್ಚುವುದರಿಂದ ಹರಡುತ್ತದೆ. ಈ ಸೊಳ್ಳೆಗಳು ಕೆರೆ, ಕಟ್ಟೆ, ಬಾವಿ, ಕೃಷಿ ಹೊಂಡ ಹಾಗೂ ಚೆಕ್ ಡ್ಯಾಮ್‍ಗಳಂತಹ ನಿಂತ ನೀರಿನ ಮೂಲಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ವಿಪರೀತ ಚಳಿ, ತೀವ್ರ ಜ್ವರ ಮತ್ತು ಅತಿಯಾದ ಸುಸ್ತು ಈ ರೋಗದ ಪ್ರಮುಖ ಲಕ್ಷಣಗಳಾಗಿದ್ದು, ಇಂತಹ ಲಕ್ಷಣಗಳು ಕಂಡುಬಂದಲ್ಲಿ ವಿಳಂಬ ಮಾಡದೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದು ಗ್ರಾಮಸ್ಥರಿಗೆ ಆರೋಗ್ಯ ಶಿಕ್ಷಣ ನೀಡಿದರು.
ವೈಜ್ಞಾನಿಕ ಪರಿಹಾರಗಳನ್ನು ಬಿಟ್ಟು ಮೂಢನಂಬಿಕೆಗಳಿಗೆ ಜೋತು ಬೀಳಬಾರದು. ಮನೆಯ ಸುತ್ತಮುತ್ತ ಚರಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಮತ್ತು ಸೊಳ್ಳೆ ಪರದೆಗಳನ್ನು ಬಳಸುವುದು ಅತ್ಯಂತ ಅವಶ್ಯಕ. ಸ್ವಚ್ಛತೆಯೇ ಆರೋಗ್ಯದ ಮೂಲಮಂತ್ರವಾಗಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಸಿ.ಎನ್.ನವೀನ್ ಕುಮಾರ್, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಅರುಣ ಕುಮಾರಿ, ನಸಿರ್ಂಗ್ ಅಧಿಕಾರಿ ಬಿ.ಚಾಂದ್, ಆರೋಗ್ಯ ಸಿಬ್ಬಂದಿ ಪೂರ್ಣಸಾಗರ್, ಆಶಾ ಕಾರ್ಯಕರ್ತೆಯರಾದ ಸರೋಜಮ್ಮ, ರಾಧಮ್ಮ ಹಾಗೂ ಗ್ರಾಮದ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.