ಚಳ್ಳಕೆರೆ: ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಜೈ ಭೀಮ್ ಶ್ರೀ ಯುವ ವಿನಾಯಕ ಸಂಘದ ಸಹಯೋಗದಲ್ಲಿ 23ನೇ ವರ್ಷದ ಅದಿಯೋಗಿ ಶಿವಶಕ್ತಿ ಮಂಟಪದ ಗೌರಿ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಗ್ರಾಮದ ಶ್ರೀ ದುರ್ಗಾಂಬಿಕ ದೇವಸ್ಥಾನದ ಆವರಣದಲ್ಲಿ ಶ್ರೀ ಗೌರಿ ಹಾಗೂ ಶಿವನ ನಾಗಸ್ವರೂಪಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪ್ರತಿದಿನ ಸಂಜೆ ಯುವಕ-ಯುವತಿಯರು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಕುಟುಂಬಗಳ ವತಿಯಿಂದ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು.
ಉತ್ಸವದ ಕೊನೆಯ ದಿನ ಗ್ರಾಮದ ಸಮುದಾಯದವರು ಹಾಗೂ ಭಕ್ತಾದಿಗಳಿಗಾಗಿ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಸುಮಾರು 10 ಅಡಿ ಎತ್ತರದ, ಏಳು ಹೆಡೆ ಸರ್ಪದ ಮೇಲೆ ಆಸೀನರಾಗಿರುವ ಶಿವಸ್ವರೂಪಿ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಿಜೆ ಸಂಗೀತದೊಂದಿಗೆ ನಡೆದ ಮೆರವಣಿಗೆಯಲ್ಲಿ ನೂರಾರು ಯುವಕ-ಯುವತಿಯರು, ಹಿರಿಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡು ಸಂಭ್ರಮಿಸಿದರು. ವಿವಿಧೆಡೆ ಗ್ರಾಮಸ್ಥರು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಗ್ರಾಮದೇವತೆ ಶ್ರೀ ಚೌಡೇಶ್ವರಿ ದೇವಿಯ ಸನ್ನಿಧಿಯಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ವಿಸರ್ಜನಾ ಮೆರವಣಿಗೆ ಶಾಂತಿಯುತವಾಗಿ ನಡೆಯಿತು. ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಗಣೇಶ ಮೂರ್ತಿಯನ್ನು ಗ್ರಾಮದ ಕೆರೆಯಲ್ಲಿ ಭಕ್ತಿಪೂರ್ವಕವಾಗಿ ವಿಸರ್ಜಿಸಲಾಯಿತು.
ಉತ್ಸವದ ಯಶಸ್ಸಿಗೆ ಗ್ರಾಮದ ಮುಖಂಡರು, ಯಜಮಾನರು, ಯುವಕ-ಯುವತಿಯರು ಹಾಗೂ ಜೈ ಭೀಮ್ ಶ್ರೀ ಯುವ ವಿನಾಯಕ ಸಂಘದ ಸರ್ವ ಸದಸ್ಯರು ಸಹಕಾರ ನೀಡಿದರು.
ವರದಿ: ಕೋಡಿಹಳ್ಳಿ ಟಿ. ಶಿವಮೂರ್ತಿ



About The Author
Discover more from JANADHWANI NEWS
Subscribe to get the latest posts sent to your email.