ವರದಿ: ಎಂ ಶಿವಮೂರ್ತಿ ನಾಯಕನಹಟ್ಟಿ.
ನಾಯಕನಹಟ್ಟಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ಸಿದ್ಧಪಡಿಸಿ ವಿತರಿಸುವ ಅಕ್ಷರ ದಾಸೋಹ ಯೋಜನೆಯ ಅಡುಗೆ ಸಿಬ್ಬಂದಿಗೆ ಕಳೆದ ನಾಲ್ಕು ತಿಂಗಳಿಂದ ಸಮರ್ಪಕ ವೇತನ ದೊರೆಯದೆ ಸಂಕಷ್ಟ ಎದುರಿಸುವಂತಾಗಿದೆ. ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಸಿಬ್ಬಂದಿ ವೇತನ ವಿಳಂಬ ಹಾಗೂ ಪ್ರತಿ ತಿಂಗಳು ಸುಮಾರು ಒಂದು ಸಾವಿರ ರೂಪಾಯಿ ಕಡಿತ ಮಾಡಲಾಗುತ್ತಿದೆ ಎಂದು ಆರೋಪಿಸಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಶಾಲೆಯಲ್ಲಿ ಒಟ್ಟು 433 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಪ್ರತಿದಿನ ನೂರಾರು ಮಕ್ಕಳಿಗೆ ಅಡುಗೆ ಸಿದ್ಧಪಡಿಸಿ ಬಡಿಸುವ ಜವಾಬ್ದಾರಿಯನ್ನು ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ. ಬೆಳಿಗ್ಗೆಯಿಂದಲೇ ಶಾಲೆಗೆ ಆಗಮಿಸುವ ಅವರು ಕಾಳುಗಳನ್ನು ಸ್ವಚ್ಛಗೊಳಿಸುವುದು, ತರಕಾರಿಗಳನ್ನು ಸಿದ್ಧಪಡಿಸುವುದು, ಅಡುಗೆ ಮಾಡುವುದು, ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಸೇರಿದಂತೆ ವಿವಿಧ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆವರೆಗೂ ದುಡಿಯುತ್ತಿದ್ದರೂ ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ ಎಂಬುದು ಸಿಬ್ಬಂದಿಯ ಅಸಮಾಧಾನವಾಗಿದೆ.
ಕಳೆದ ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ವೇತನ ಸಮರ್ಪಕವಾಗಿ ಪಾವತಿಯಾಗಿಲ್ಲ. ಅಲ್ಲದೆ, ಬರಬೇಕಾದ ವೇತನದಲ್ಲಿ ಪ್ರತಿ ತಿಂಗಳು ಸುಮಾರು ಒಂದು ಸಾವಿರ ರೂಪಾಯಿಗಳಷ್ಟು ಕಡಿತ ಮಾಡಲಾಗುತ್ತಿದೆ ಎಂದು ಸಿಬ್ಬಂದಿ ದೂರಿದ್ದಾರೆ. ಈಗಾಗಲೇ ಕಡಿಮೆ ವೇತನದಲ್ಲಿ ಜೀವನ ನಿರ್ವಹಣೆ ಮಾಡುತ್ತಿರುವ ನಮಗೆ ವೇತನ ವಿಳಂಬ ಹಾಗೂ ಕಡಿತ ಮತ್ತಷ್ಟು ಆರ್ಥಿಕ ಸಂಕಷ್ಟ ತಂದೊಡ್ಡಿದೆ ಎಂದು ಅಡುಗೆ ಸಿಬ್ಬಂದಿ ಅಳಲು ವ್ಯಕ್ತಪಡಿಸಿದ್ದಾರೆ.
ಶಾಲೆಯ ಮಕ್ಕಳಿಗೆ ನಿಗದಿತ ಸಮಯಕ್ಕೆ ಗುಣಮಟ್ಟದ ಆಹಾರ ಸಿದ್ಧಪಡಿಸಿ ನೀಡಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ. ಆಹಾರ ಧಾನ್ಯಗಳನ್ನು ಸ್ವಚ್ಛಗೊಳಿಸುವುದರಿಂದ ಹಿಡಿದು ಅಡುಗೆ ತಯಾರಿಕೆ ಹಾಗೂ ಸ್ವಚ್ಛತಾ ಕಾರ್ಯಗಳವರೆಗೆ ಬಹುತೇಕ ಎಲ್ಲ ಕೆಲಸಗಳನ್ನು ನಾವೇ ಮಾಡಬೇಕಾಗಿದೆ. ಇಷ್ಟೆಲ್ಲಾ ಶ್ರಮ ವಹಿಸಿದರೂ ಸರ್ಕಾರದಿಂದ ಸಮರ್ಪಕ ವೇತನವಾಗಲಿ, ಹೆಚ್ಚುವರಿ ಸೌಲಭ್ಯಗಳಾಗಲಿ ದೊರೆಯುತ್ತಿಲ್ಲ ಎಂದು ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಕ್ಷರ ದಾಸೋಹ ಯೋಜನೆಯ ಯಶಸ್ವಿ ಅನುಷ್ಠಾನದಲ್ಲಿ ಅಡುಗೆ ಸಿಬ್ಬಂದಿಯ ಪಾತ್ರ ಮಹತ್ವದ್ದಾಗಿದೆ. ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ದಿನನಿತ್ಯ ಶ್ರಮಿಸುವ ಸಿಬ್ಬಂದಿಯ ಬದುಕಿನ ಭದ್ರತೆಗೂ ಸರ್ಕಾರ ಆದ್ಯತೆ ನೀಡಬೇಕಾಗಿದೆ. ಆದರೆ, ಇಂದಿನ ಬೆಲೆ ಏರಿಕೆಯ ಸಂದರ್ಭದಲ್ಲಿ ದೊರೆಯುತ್ತಿರುವ ಅಲ್ಪ ವೇತನದಲ್ಲಿ ಕುಟುಂಬ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಯ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕಳೆದ ನಾಲ್ಕು ತಿಂಗಳ ಬಾಕಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು ವೇತನದಲ್ಲಿ ಆಗುತ್ತಿರುವ ಕಡಿತದ ಕುರಿತು ಪರಿಶೀಲನೆ ನಡೆಸಿ, ಅರ್ಹ ವೇತನವನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸಬೇಕು. ಜೊತೆಗೆ ಕೆಲಸದ ಹೊರೆಗೆ ಅನುಗುಣವಾಗಿ ಗೌರವಧನ ಹೆಚ್ಚಿಸಿ, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ನಾಯಕನಹಟ್ಟಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಸಿಬ್ಬಂದಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.
