ಹಿರಿಯೂರು, ಅ. 29: ಭದ್ರಾ ಮೇಲ್ದಂಡೆ ಯೋಜನೆಯಿಂದ ವಾಣಿವಿಲಾಸ ಸಾಗರ (ವಿ.ವಿ. ಸಾಗರ) ಜಲಾಶಯಕ್ಕೆ ಈ ವರ್ಷ ಕನಿಷ್ಠ ಎರಡು ಟಿಎಂಸಿ ನೀರನ್ನು ತುರ್ತಾಗಿ ಹರಿಸಬೇಕು ಎಂದು ವಿ.ವಿ. ಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರ ರೈತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕಸವನಹಳ್ಳಿ ರಮೇಶ್ ಒತ್ತಾಯಿಸಿದ್ದಾರೆ.
ಹಿರಿಯೂರು ನಗರದ ವೀರಶೈವ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ (ಅ. 29) ನಡೆದ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲೂಕುಗಳ ಸಣ್ಣ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಸುತ್ತಿರುವುದು ಸಂತೋಷದ ಸಂಗತಿ. ಇದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತಿದೆ ಎಂದು ಹೇಳಿದರು.
ಅದೇ ರೀತಿ ಮಧ್ಯ ಕರ್ನಾಟಕದ ಪ್ರಮುಖ ಜಲಾಶಯವಾಗಿರುವ ವಾಣಿವಿಲಾಸ ಸಾಗರಕ್ಕೆ ಜಿಲ್ಲೆಯ ಬಹುತೇಕ ತಾಲೂಕುಗಳ ಕುಡಿಯುವ ನೀರಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ ಕನಿಷ್ಠ ಎರಡು ಟಿಎಂಸಿ ನೀರು ಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುವ ಆತಂಕವಿದೆ. ಅಲ್ಲದೆ, 2027ರ ಬೇಸಿಗೆ ಹಂಗಾಮಿನಲ್ಲಿ ಅಚ್ಚುಕಟ್ಟುದಾರ ರೈತರಿಗೆ ನೀರು ಒದಗಿಸುವುದೂ ಕಷ್ಟವಾಗಬಹುದು ಎಂದು ಎಚ್ಚರಿಸಿದರು.
ಆದ್ದರಿಂದ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಭದ್ರಾ ಮೇಲ್ದಂಡೆ ಯೋಜನೆಯಿಂದ ವಿ.ವಿ. ಸಾಗರ ಜಲಾಶಯಕ್ಕೆ ಎರಡು ಟಿಎಂಸಿ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತೋಟಗಾರಿಕೆ ಬೆಳೆಗಳು ಒಣಗುವ ಆತಂಕ
ಸಮಿತಿಯ ಸಂಚಾಲಕ ಆರನಕಟ್ಟೆ ಶಿವಕುಮಾರ್ ಮಾತನಾಡಿ, ಅಚ್ಚುಕಟ್ಟುದಾರ ರೈತರ ಜಮೀನುಗಳಿಗೆ ನೀರು ಮೀಸಲಿಡದಿದ್ದರೆ ಈಗಾಗಲೇ ಬೆಳೆದು ನಿಂತಿರುವ ತೋಟಗಾರಿಕೆ ಬೆಳೆಗಳು ಒಣಗುವ ಆತಂಕವಿದೆ. ರೈತರ ಹಿತ ಕಾಪಾಡಲು ನೀರು ಹಂಚಿಕೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಸಮಿತಿಯ ನಿರ್ದೇಶಕ ಪಿಟ್ಲಾಲಿ ಶ್ರೀನಿವಾಸ್ ಮಾತನಾಡಿ, ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸುವ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ವರ್ಷ ನೀರು ಪಂಪ್ ಮಾಡುವ ಕಾರ್ಯದಲ್ಲಿ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹೋರಾಟದ ಎಚ್ಚರಿಕೆ: ಹಿರಿಯೂರು ಬಂದ್‌ಗೆ ಚಿಂತನೆ
ಸಮಿತಿಯ ಕಾರ್ಯಾಧ್ಯಕ್ಷ ಎಚ್.ಆರ್. ತಿಮ್ಮಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಆಲೂರು ಸಿದ್ದರಾಮಣ್ಣ ಮಾತನಾಡಿ, ರೈತರ ಹಾಗೂ ಸಾರ್ವಜನಿಕರ ಕುಡಿಯುವ ನೀರಿನ ಹಿತದೃಷ್ಟಿಯಿಂದ ಸರ್ಕಾರ ತಕ್ಷಣ ಸ್ಪಂದಿಸಬೇಕು. ಬೇಡಿಕೆ ಈಡೇರದಿದ್ದರೆ ಶೀಘ್ರದಲ್ಲೇ ಹೋರಾಟ ರೂಪಿಸಿ ಹಿರಿಯೂರು ಬಂದ್‌ಗೆ ಕರೆ ನೀಡುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಚರ್ಚಿಸಲಾದ ಎಲ್ಲ ವಿಷಯಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅವರನ್ನು ಶೀಘ್ರದಲ್ಲೇ ಭೇಟಿ ಮಾಡಿ ಮನವಿ ಸಲ್ಲಿಸಲು ಸಮಿತಿ ತೀರ್ಮಾನಿಸಿತು.
ಸಭೆಯಲ್ಲಿ ಖಜಾಂಚಿ ಬಬ್ಬೂರು ಸುರೇಶ್, ಉಪಾಧ್ಯಕ್ಷ ರಾಜೇಂದ್ರ, ಸಿವಿಲ್ ಎಂಜಿನಿಯರ್ ಶಿವರಾಮ್ ಹೊನ್ನಯ್ಯ, ಆರ್.ಕೆ. ಗೌಡ, ಅದಿವಾಲ ತ್ರಯಂಬಕಮೂರ್ತಿ, ಎರೆನಾಡು ರೈತ ಸಂಘದ ಕೆ.ಟಿ. ರುದ್ರಮುನಿ, ಶಿಡ್ಲಯ್ಯನಕೋಟೆ ಮಲ್ಲಿಕಾರ್ಜುನಪ್ಪ ಹಾಗೂ ಮಮತಾ ಕೃಷ್ಣಮೂರ್ತಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದು, ತಮ್ಮ ಸಲಹೆಗಳನ್ನು ನೀಡಿದರು.
About The Author
Discover more from JANADHWANI NEWS
Subscribe to get the latest posts sent to your email.
