ಚಿತ್ರದುರ್ಗ: ಮಾಧ್ಯಮ ಕ್ಷೇತ್ರದಲ್ಲಿ ಸುದೀರ್ಘ ಹಾಗೂ ಅಪಾರ ಸೇವೆ ಸಲ್ಲಿಸಿರುವ ಚಿತ್ರದುರ್ಗದ ಹಿರಿಯ ಪತ್ರಕರ್ತ ಡಿ. ಉಮಾಪತಿ ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಚಿತ್ರದುರ್ಗದ ದಿವಂಗತ ಕೆ. ದಾಸಪ್ಪ ಹಾಗೂ ದಿವಂಗತ ಹನುಮಮ್ಮ ದಂಪತಿಯ ಪುತ್ರರಾದ ಡಿ. ಉಮಾಪತಿ ಅವರು, ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಂತರ ಪತ್ರಿಕೋದ್ಯಮದತ್ತ ಒಲವು ಬೆಳೆಸಿಕೊಂಡು ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟರು.
ಖ್ಯಾತ ಪತ್ರಕರ್ತ ಖಾದ್ರಿ ಶ್ಯಾಮಣ್ಣ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಪ್ರಭ’ ಪತ್ರಿಕೆಯ ಮೂಲಕ ತಮ್ಮ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಉಮಾಪತಿ ಅವರು, ತಮ್ಮ ಅತ್ಯುತ್ತಮ ವರದಿಗಾರಿಕೆ ಹಾಗೂ ಅಂಕಣ ಬರಹಗಳ ಮೂಲಕ ವಿಶೇಷ ಗುರುತಿಸಿಕೊಂಡರು.
ತದನಂತರ ‘ವಿಜಯ ಕರ್ನಾಟಕ’ ಮತ್ತು ‘ಪ್ರಜಾವಾಣಿ’ ಪತ್ರಿಕೆಗಳಲ್ಲಿ ಹಲವು ದಶಕಗಳ ಕಾಲ ದೆಹಲಿ ಮೂಲದ ವಿಶೇಷ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿ, ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ವಿದ್ಯಮಾನಗಳ ಕುರಿತು ಆಳವಾದ ವಿಶ್ಲೇಷಣೆಗಳನ್ನು ಓದುಗರಿಗೆ ನೀಡುತ್ತಾ ಬಂದಿದ್ದಾರೆ.
ಪ್ರಸ್ತುತ ‘ಈ ದಿನ.ಕಾಮ್’ ಜಾಲತಾಣದ ಗೌರವ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಡಿ. ಉಮಾಪತಿ ಅವರಿಗೆ ಇದೀಗ ರಾಜ್ಯದ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಚಿತ್ರದುರ್ಗ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.
ಹಿರಿಯ ಪತ್ರಕರ್ತ ಡಿ. ಉಮಾಪತಿ ಅವರಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ಪತ್ರಕರ್ತರು, ಗಣ್ಯರು ಹಾಗೂ ಜಿಲ್ಲೆಯ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.
