ಚಿತ್ರದುರ್ಗ ಮೇ.19:
ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಮತ್ತು ಘನತ್ಯಾಜ್ಯ ನಿರ್ವಹಣೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಚಿತ್ರದುರ್ಗ ನಗರಸಭೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಕೇಂದ್ರ ಸರ್ಕಾರದ ‘ಘನತ್ಯಾಜ್ಯ ವಸ್ತುಗಳ (ವ್ಯವಸ್ಥಾಪನೆ ಮತ್ತು ನಿರ್ವಹಣೆ) ನಿಯಮಗಳು-2026ರ ಅನ್ವಯ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ನಗರದ ಎಲ್ಲಾ ಸಾರ್ವಜನಿಕರು, ಮನೆಗಳು ಹಾಗೂ ವ್ಯಾಪಾರೋದ್ಯಮಿಗಳು ತಮ್ಮಲ್ಲಿ ಉತ್ಪತ್ತಿಯಾಗುವ ಕಸವನ್ನು ಕಡ್ಡಾಯವಾಗಿ ನಾಲ್ಕು ವಿಭಾಗಗಳಾಗಿ ವಿಂಗಡಿಸಿ ನಗರಸಭೆಯ ಕಸ ಸಂಗ್ರಹಣಾ ವಾಹನಗಳಿಗೆ ನೀಡಬೇಕು.
ಕಸವನ್ನು ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಹಾಗೂ ಸ್ಪೆಷಲ್ ಕೇ ವೇಸ್ಟ್ ಎಂದು ಪ್ರತ್ಯೇಕಿಸಬೇಕಾಗುತ್ತದೆ. ಅಡುಗೆ ಮನೆಯ ತ್ಯಾಜ್ಯ, ತರಕಾರಿ, ಮಾಂಸದ ತ್ಯಾಜ್ಯ, ಹಣ್ಣು, ಹೂವು ಹಾಗೂ ಕೊಳೆಯುವ ವಸ್ತುಗಳನ್ನು ಹಸಿ ತ್ಯಾಜ್ಯದ ವಿಭಾಗದಲ್ಲೂ, ಪ್ಲಾಸ್ಟಿಕ್, ಬಟ್ಟೆ, ಕಬ್ಬಿಣ, ರಬ್ಬರ್ ಮತ್ತು ಮರದ ವಸ್ತುಗಳನ್ನು ಒಣ ತ್ಯಾಜ್ಯದ ವಿಭಾಗದಲ್ಲೂ ನೀಡಬೇಕು. ಡೈಪರ್ಸ್, ಸ್ಯಾನಿಟರಿ ನ್ಯಾಪ್‍ಕಿನ್ಸ್‍ಗಳಂತಹ ವಸ್ತುಗಳನ್ನು ಸ್ಯಾನಿಟರಿ ತ್ಯಾಜ್ಯ ಎಂದು ಪ್ರತ್ಯೇಕಿಸಬೇಕು. ಇನ್ನುಳಿದಂತೆ ಪೇಂಟ್ ಡಬ್ಬಗಳು, ಔಷಧ ಬಾಟಲಿಗಳು, ಇ-ವೇಸ್ಟ್, ಬಲ್ಬ್, ಹಳೆಯ ಬ್ಯಾಟರಿಗಳು ಹಾಗೂ ಬಳಸಿದ ಸೂಜಿ, ಸಿರಿಂಜ್ ಮತ್ತು ಬ್ಯಾಂಡೇಜ್‍ಗಳನ್ನು ವಿಶೇಷ ತ್ಯಾಜ್ಯದ ಅಡಿಯಲ್ಲಿ ನೀಡಲು ಸೂಚಿಸಲಾಗಿದೆ.
ಸಾರ್ವಜನಿಕರು ಕಸವನ್ನು ಮೂಲದಲ್ಲೇ ವಿಂಗಡಿಸಿ ನೀಡದಿದ್ದರೆ ಕೇವಲ ದಂಡ ವಿಧಿಸುವುದಷ್ಟೇ ಅಲ್ಲದೆ, ಅವರಿಗೆ ನೀಡಲಾಗುತ್ತಿರುವ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಎಚ್ಚರಿಕೆ ನೀಡಿದೆ.
ಚಿತ್ರದುರ್ಗ ನಗರವನ್ನು ಸ್ವಚ್ಛವಾಗಿಡಲು ಮತ್ತು ಈ ಹೊಸ ಕಸ ನಿರ್ವಹಣಾ ನಿಯಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ನಗರದ ಎಲ್ಲಾ ನಾಗರಿಕರು ಹಾಗೂ ವರ್ತಕರು ನಗರಸಭೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತರು ಕೋರಿದ್ದಾರೆ.
=========
About The Author
Discover more from JANADHWANI NEWS
Subscribe to get the latest posts sent to your email.