July 15, 2026
IMG-20260715-WA0206


ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ವಿಶೇಷ ಪ್ಯಾಕೇಜ್ ನೀಡಬೇಕು.
ವರದಿ:ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ಚಿತ್ರದುರ್ಗ ಜಿಲ್ಲೆ ಹಾಗೂ ಹೊಸದುರ್ಗ ತಾಲೂಕಿನಾದ್ಯಂತ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಸಾವಿರಾರು ಎಕರೆ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಸಾವೆ, ರಾಗಿ, ಜೋಳ, ನವಣೆ ಸೇರಿದಂತೆ ಸಿರಿಧಾನ್ಯ ಬೆಳೆಗಳು ಒಣಗಿ ನಾಶವಾಗಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಭೂಮಿಯನ್ನು ಹದಗೊಳಿಸಿ ಬಿತ್ತನೆಗೆ ಸಿದ್ಧಪಡಿಸಿ ಮಳೆಗಾಗಿ ಕಾಯುತ್ತಿರುವ ರೈತರಿಗೂ ಸರ್ಕಾರ ವಿಶೇಷ ಪರಿಹಾರ ಘೋಷಿಸಬೇಕು ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಬುರುಡೆಕಟ್ಟೆ ರಾಜೇಶ್ ಆಗ್ರಹಿಸಿದರು.
ಈ ಕುರಿತು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಟಿಯನ್ನುದ್ದೇಶಿ ಮಾತನಾಡಿದರು. ಕಸಬಾ, ಮಡದಕೆರೆ, ಶ್ರೀರಾಂಪುರ ಹಾಗೂ ಮುತ್ತೋಡು ಹೋಬಳಿಗಳ ಬರಪೀಡಿತ ಗ್ರಾಮಗಳಿಗೆ ರೈತ ಮೋರ್ಚಾ ತಂಡದೊAದಿಗೆ ಭೇಟಿ ನೀಡಿ ಬೆಳೆ ನಷ್ಟವನ್ನು ಪರಿಶೀಲಿಸಿದ ಅವರು, ರೈತರ ಅಹವಾಲುಗಳನ್ನು ಆಲಿಸಿದರು. ಹೊಲಗಳಲ್ಲಿ ಒಣಗಿ ನಿಂತ ಬೆಳೆಗಳನ್ನು ವೀಕ್ಷಿಸಿದ ತಂಡಕ್ಕೆ ರೈತರು ತಮ್ಮ ಅಳಲನ್ನು ತೋಡಿಕೊಂಡರು.
ಈ ಕುರಿತು ಸವಿವರದ ಮಾಹಿತಿ ನೀಡಿದ ಅವರು ಹೊಸದುರ್ಗ ತಾಲೂಕು ಸಂಪೂರ್ಣ ಮಳೆಯಾಧಾರಿತ ಕೃಷಿಯನ್ನು ಅವಲಂಬಿಸಿರುವ ಪ್ರದೇಶವಾಗಿದೆ. ಮುಂಗಾರು ವೈಫಲ್ಯದಿಂದ ರೈತರು ಸಾಲ ಮಾಡಿ ಖರೀದಿಸಿದ ಬೀಜ, ಗೊಬ್ಬರ ಹಾಗೂ ಕೃಷಿ ವೆಚ್ಚವೆಲ್ಲವೂ ವ್ಯರ್ಥವಾಗಿದೆ. ಅನೇಕ ಕಡೆ ಬಿತ್ತನೆ ಮಾಡಿದ ಬೀಜ ಮೊಳಕೆಯೊಡೆಯದೇ ಹಾಳಾಗಿದ್ದರೆ, ಮೊಳಕೆಯೊಡೆದ ಬೆಳೆಗಳು ನೀರಿಲ್ಲದೆ ಒಣಗಿ ಹೋಗಿವೆ. ಇದರಿಂದ ರೈತರು ತೀವ್ರ ನಿರಾಶೆಗೆ ಒಳಗಾಗಿದ್ದಾರೆ.
ಹೊಸದುರ್ಗ ತಾಲೂಕು ರಾಜ್ಯದಲ್ಲೇ ಸಿರಿಧಾನ್ಯ ಬೆಳೆಗಳನ್ನು ಬೆಳೆಯುವ ಪ್ರಮುಖ ಪ್ರದೇಶವಾಗಿದ್ದು ಸಾವೆ, ನವಣೆ, ರಾಗಿ, ಜೋಳ ಬೆಳೆಯೇ ಇಲ್ಲಿನ ರೈತರ ಪ್ರಮುಖ ಜೀವನಾಧಾರ. ಈ ಬೆಳೆಗಳು ಕೈಕೊಟ್ಟಿರುವುದರಿಂದ ರೈತ ಕುಟುಂಬಗಳ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿ ಕಾರ್ಮಿಕರಿಗೂ ಉದ್ಯೋಗದ ಅಭಾವ ಉಂಟಾಗಿದೆ. ಸರ್ಕಾರ ತಕ್ಷಣ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿದರು.
ಚಿತ್ರದುರ್ಗ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್ ಮಾತನಾಡಿ ಸರ್ಕಾರ ತಕ್ಷಣದಿಂದಲೇ ರೈತರ ಬೆಳೆ ಸಾಲ ಮರುಪಾವತಿಗೆ ಕಾಲಾವಕಾಶ ನೀಡಬೇಕು. ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಒದಗಿಸಲು ಗೋ ಶಾಲೆ ಪ್ರಾರಂಭಿಸಬೇಕು ಹಾಗೂ ತಾಲೂಕಿನ ಎಲ್ಲಾ ಗ್ರಾಮಗಳಿಗೆ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜಂಟಿ ತಂಡಗಳನ್ನು ಕಳುಹಿಸಿ ಬೆಳೆ ನಷ್ಟದ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು. ಸಮೀಕ್ಷೆ ವರದಿ ಆಧರಿಸಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪರಿಹಾರ ಹಣ ಜಮೆ ಮಾಡಬೇಕು. ಬೆಳೆ ವಿಮೆ ನೋಂದಣಿ ಅವಧಿಯನ್ನು ವಿಸ್ತರಿಸಿ ಹೆಚ್ಚಿನ ರೈತರಿಗೆ ಅವಕಾಶ ಕಲ್ಪಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಡಿ ಎಸ್ ಪ್ರದೀಪ್, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಲಿಂಗದೇವರು, ಮಂಡಲ ರೈತ ಮೋರ್ಚಾ ಅಧ್ಯಕ್ಷ ಮನು ಕುಮಾರ್ ಉಪಾಧ್ಯಕ್ಷ ಚಿತ್ರಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪಾಟೀಲ್, ಮಲ್ಲಿಕಾರ್ಜುನ್, ಈಶ್ವರ್, ಪ್ರಕಾಶ್, ತಿಪ್ಪೇಶ್, ಸಚಿನ್, ಹಾಗೂ ಬಿಜೆಪಿ ರೈತ ಮೋರ್ಚ ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading