July 15, 2026
IMG-20260715-WA0180

ಚಳ್ಳಕೆರೆ, ಜು.15: 2026-27ನೇ ಸಾಲಿನ ಪ್ರಧಾನಮಂತ್ರಿ ಫಸಲ್ ಬಿಮಾ (ಬೆಳೆ ವಿಮೆ) ಯೋಜನೆ ಕುರಿತು ರೈತರಿಗೆ ಅರಿವು ಮೂಡಿಸುವ ಉದ್ದೇಶದಿಂದ ಕೃಷಿ ಇಲಾಖೆ ವತಿಯಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ತಾಲೂಕಿನ ನಗರಂಗೇರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ರಮೇಶ್ ಎಸ್.ಟಿ., ಪ್ರಸ್ತುತ ತಾಲೂಕಿನಾದ್ಯಂತ ಬರದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ಎಲ್ಲಾ ರೈತರು ಕಡ್ಡಾಯವಾಗಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲೂ ಇದೇ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
2026-27ನೇ ಸಾಲಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಚಳ್ಳಕೆರೆ ತಾಲೂಕಿನಲ್ಲಿ ಮಳೆಯಾಶ್ರಿತ ಶೇಂಗಾ ಬೆಳೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ, ತೊಗರಿ ಹಾಗೂ ಮುಸುಕಿನ ಜೋಳವನ್ನು ಹೋಬಳಿ ಮಟ್ಟದಲ್ಲಿ ಅಧಿಸೂಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಬರ, ನೆರೆ ಸೇರಿದಂತೆ ವಿವಿಧ ಪ್ರಾಕೃತಿಕ ವಿಕೋಪಗಳಿಂದ ಬೆಳೆ ಹಾನಿಯಾದಾಗ ರೈತರಿಗೆ ಆರ್ಥಿಕ ನೆರವು ದೊರೆಯಲು ಹಾಗೂ ಕೃಷಿ ಚಟುವಟಿಕೆಗಳನ್ನು ಮುಂದುವರಿಸಲು ಬೆಳೆ ವಿಮೆ ಯೋಜನೆ ಸಹಕಾರಿಯಾಗಲಿದೆ ಎಂದು ಹೇಳಿದರು.
ರೈತರು ತಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ, ಕರ್ನಾಟಕ ಒನ್ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರ (CSC) ಅಥವಾ ಬ್ಯಾಂಕ್ ಶಾಖೆಗಳಲ್ಲಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬಹುದು. ಬೆಳೆ ಸಾಲ ಪಡೆದ ರೈತರು ಸಾಲ ಪಡೆದಿರುವ ಬ್ಯಾಂಕ್ ಶಾಖೆಯಲ್ಲಿಯೇ ವಿಮೆ ಮಾಡಿಸಬೇಕು. ಬೆಳೆ ಸಾಲ ಪಡೆಯದ ರೈತರು ಸಂಬಂಧಿತ ದೃಢೀಕರಣ ನೀಡಿ ವಿಮೆಗೆ ನೋಂದಾಯಿಸಬಹುದು. ಸಾಲ ಪಡೆದ ಬೆಳೆಯ ಬದಲಾಗಿ ಬೇರೆ ಬೆಳೆಗೆ ವಿಮೆ ಮಾಡಿಸಬೇಕಾದರೆ ಬ್ಯಾಂಕ್‌ಗೆ ಭೇಟಿ ನೀಡಿ ಬೆಳೆ ಬದಲಾವಣೆ ಅರ್ಜಿ ಸಲ್ಲಿಸಬೇಕು ಎಂದು ವಿವರಿಸಿದರು.
ಪ್ರಸ್ತುತ ತಾಲೂಕಿನಲ್ಲಿ ಈವರೆಗೆ 661 ರೈತರು ಮಾತ್ರ ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದು, ಉಳಿದ ಎಲ್ಲಾ ರೈತರು ತಪ್ಪದೇ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಜುಲೈ 31 ಬೆಳೆ ವಿಮೆ ನೋಂದಣಿಗೆ ಕೊನೆಯ ದಿನಾಂಕವಾಗಿರುವುದರಿಂದ ವಿಳಂಬ ಮಾಡದೆ ಅರ್ಜಿ ಸಲ್ಲಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೆಡಿಪಿ ಸದಸ್ಯ ರಮೇಶ್, ಗ್ರಾಮ ಆಡಳಿತಾಧಿಕಾರಿ ರಘುನಾಥ್ ಸಿಂಗ್, ಗ್ರಾಮಸ್ಥರಾದ ಮುಸ್ತಫಾ, ನವೀನ್, ಗಿರೀಶ್ ಪಾಲನೇತ್ರ, ಚೆನ್ನಮ್ಮ, ಸುವರ್ಣಮ್ಮ, ಶಾರದಮ್ಮ, ಶ್ವೇತ, ವನಜಾಕ್ಷಿ, ವಿನೋದ್ ರಾಜ್, ತಿಪ್ಪೇಸ್ವಾಮಿ ಹಾಗೂ ಕೃಷಿ ಇಲಾಖೆ ಸಿಬ್ಬಂದಿಗಳಾದ ರಾಮಕೃಷ್ಣ, ಧನಂಜಯ, ಮಂಜುನಾಥ್, ಪ್ರಕಾಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading