May 18, 2026
IMG-20260518-WA0184.jpg

ಹೊಸದುರ್ಗ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಚಿತ್ರದುರ್ಗ ಶ್ರೀ ಮಾಚಿದೇವ ಮಹಾ ಸಂಸ್ಥಾನ ಮಠದ ಶ್ರೀ ಡಾ. ಬಸವ ಮಾಚಿದೇವ ಸ್ವಾಮೀಜಿ ಹೇಳಿದರು.

ತಾಲೂಕು ಶ್ರೀ ವೀರ ಮಡಿವಾಳ ಮಾಚಿದೇವ ಸಂಘದ ವತಿಯಿಂದ ಭಾನುವಾರ ಪಟ್ಟಣದ ಶ್ರೀ ದುರ್ಗಾಂಬಿಕಾ ಸಮುದಾಯ ಭವನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, “ಮಾತಿಗಿಂತ ಕೃತಿ ಮುಖ್ಯ. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮತ್ತು ಸಾಧನೆ ಮಾಡುವ ಮನೋಭಾವ ಅಗತ್ಯ. 30 ವರ್ಷಗಳ ಹಿಂದೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಓದಿದರೆ ಅದೇ ದೊಡ್ಡ ಸಾಧನೆ ಆಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಬದಲಾವಣೆ ತಂದಿದ್ದು, ನಾವು ಸಹ ಕಾಲಕ್ಕೆ ತಕ್ಕಂತೆ ಬದಲಾಗಬೇಕು” ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಎಐ ತಂತ್ರಜ್ಞಾನ ಜಗತ್ತನ್ನು ಆಳುವ ಮಟ್ಟಕ್ಕೆ ಬೆಳೆಯಲಿದೆ. ಮನುಷ್ಯನ ಕೆಲಸಗಳನ್ನೂ ನಿಯಂತ್ರಿಸುವ ಸ್ಥಿತಿಗೆ ತಲುಪಲಿದೆ. ಆದ್ದರಿಂದ ಮಕ್ಕಳಿಗೆ ಈಗಿನಿಂದಲೇ ಎಐ ತಂತ್ರಜ್ಞಾನದ ಅರಿವು ಮತ್ತು ಬಳಕೆ ಕಲಿಸುವುದು ಅತ್ಯಗತ್ಯ ಎಂದು ತಿಳಿಸಿದರು.
ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದ ನ್ಯಾಯವಾದಿ ಎಸ್. ಗಂಗಾಧರ್, “ನಾವು ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಸಮಾಜ, ಗುರು-ಹಿರಿಯರ ಬಗ್ಗೆ ಗೌರವ ಇರಬೇಕು. ಸಮಾಜಕ್ಕೆ ಋಣಿಯಾಗಿರುವ ಮನೋಭಾವ ಬೆಳೆಸಿಕೊಳ್ಳಬೇಕು. ಸಂಕಷ್ಟದ ಸಮಯದಲ್ಲಿ ಸಮಾಜದ ಬಂಧುಗಳಿಗೆ ನೆರವಾಗುವ ಸೇವಾ ಮನೋಭಾವ ಅಗತ್ಯ” ಎಂದು ಹೇಳಿದರು.
ನಿವೃತ್ತ ಶಿಕ್ಷಕ ಹಾಗೂ ಹಿರಿಯ ಮುಖಂಡ ಯಗಟಿ ವೈ.ಕೆ. ರಂಗಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಸಂಘದ ಅಧ್ಯಕ್ಷ ಬಿ. ಲೋಕೇಶಪ್ಪ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಬಿ.ಆರ್. ರಾಮಕೃಷ್ಣ, ಪತ್ರಕರ್ತ ಹಾಗೂ ಸಂಘದ ಮಾಜಿ ಕಾರ್ಯದರ್ಶಿ ಎನ್.ಕೆ. ತಿಪ್ಪೇಸ್ವಾಮಿ, ಇಸ್ತ್ರೀ ಕಾರ್ಮಿಕರ ಸಂಘದ ಅಧ್ಯಕ್ಷ ಬಿ. ಪರಮೇಶ್ವರಪ್ಪ, ಎಂ.ಸಿ.ಡಿ ಟ್ರಸ್ಟ್ ಅಧ್ಯಕ್ಷ ಎಂ. ಸುರೇಶ್, ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಮೇಶ್, ಕೆಲ್ಲೋಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಗಿರಿಜಾ, ಕೆಂಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಂಜನ್‌ಕುಮಾರ್, ಬಾಗೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಕವಿತಾ, ಬಾಗೂರು ಹನುಮಂತಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading