April 18, 2026

ಬೆಂಗಳೂರು, ಏಪ್ರಿಲ್ 18: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026–2031ರ ಅವಧಿಗೆ ನಡೆಯಲಿದ್ದ ಚುನಾವಣಾ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ವಿಧಿಸಲಾಗಿದೆ.

ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದ ಹಿನ್ನೆಲೆ ರಾಜ್ಯ ಚುನಾವಣಾಧಿಕಾರಿಗಳು ಈ ಮಹತ್ವದ ಆದೇಶ ಹೊರಡಿಸಿದ್ದಾರೆ.
ಸಂಘದ ಪ್ರಧಾನ ಕಾರ್ಯದರ್ಶಿಗಳ ಮನವಿ ಹಾಗೂ ಸಂಬಂಧಿತ ದಾಖಲೆಗಳ ಆಧಾರದ ಮೇಲೆ ಏಪ್ರಿಲ್ 1ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗಿತ್ತು. ಬಳಿಕ ಏಪ್ರಿಲ್ 11ರಿಂದ ರಾಜ್ಯದ ವಿವಿಧ ತಾಲೂಕು, ಜಿಲ್ಲಾ ಹಾಗೂ ವಿಶೇಷ ಶಾಖೆಗಳ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿತ್ತು.
ಆದರೆ ಉಡುಪಿ ಜಿಲ್ಲೆಯ ಮತದಾರರ ಪಟ್ಟಿ ಮತ್ತು ಚುನಾವಣಾಧಿಕಾರಿಗಳ ನೇಮಕಾತಿಯಲ್ಲಿ ಬೈಲಾ ನಿಯಮಗಳ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಈಗಾಗಲೇ ಆ ಜಿಲ್ಲೆಯ ಚುನಾವಣೆಗೆ ತಾತ್ಕಾಲಿಕ ತಡೆ ನೀಡಲಾಗಿತ್ತು. ಇದರ ನಡುವೆ ಸಂಘದ ಚುನಾವಣಾ ಘಟನಾವಳಿಗಳ ವಿರುದ್ಧ ಹೈಕೋರ್ಟ್‌ನಲ್ಲಿ ದಾಖಲಾಗಿದ್ದ ಹಲವು ರಿಟ್ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ.
ನ್ಯಾಯಾಲಯದ ಆದೇಶದಲ್ಲಿ, “01.04.2026ರಂದು ಪ್ರಕಟಿಸಲಾದ ಚುನಾವಣಾ ವೇಳಾಪಟ್ಟಿಯನ್ನು ಮುಂದಿನ ವಿಚಾರಣೆವರೆಗೂ ಸ್ಥಗಿತಗೊಳಿಸಲಾಗಿದೆ” ಎಂದು ಸ್ಪಷ್ಟಪಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾಧಿಕಾರಿಗಳು ಕೆಳಗಿನ ಪ್ರಮುಖ ನಿರ್ದೇಶನಗಳನ್ನು ನೀಡಿದ್ದಾರೆ:
ಏಪ್ರಿಲ್ 19ರಂದು ನಡೆಯಬೇಕಿದ್ದ ಮತದಾನ ಪ್ರಕ್ರಿಯೆ ಮುಂದಿನ ಆದೇಶದವರೆಗೂ ಸ್ಥಗಿತ
ಮುದ್ರಿತ ಮತಪತ್ರಗಳನ್ನು ಮುಚ್ಚಿದ ಲಕೋಟೆಯಲ್ಲಿ ಸುರಕ್ಷಿತವಾಗಿ ಇರಿಸುವುದು
ಮುದ್ರಣವಾಗದ ಮತಪತ್ರಗಳನ್ನು ಮುದ್ರಿಸದೇ ಉಳಿಸುವುದು
ಎಲ್ಲಾ ಚುನಾವಣಾ ಘಟನಾವಳಿಗಳ ಸ್ಥಿತಿ ವರದಿ ತಕ್ಷಣ ಸಲ್ಲಿಸುವುದು
ಹೊಸ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯುವುದು
ಅವಿರೋಧ ಆಯ್ಕೆಯ ಫಲಿತಾಂಶ ಪ್ರಕಟಣೆಯನ್ನೂ ಮುಂದೂಡುವುದು
ರಾಜ್ಯದ ಎಲ್ಲಾ ತಾಲೂಕು, ಜಿಲ್ಲಾ ಹಾಗೂ ವಿಶೇಷ ಶಾಖೆಗಳ ಚುನಾವಣಾಧಿಕಾರಿಗಳಿಗೆ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಈ ತಾತ್ಕಾಲಿಕ ತಡೆಯಿಂದ ಶಿಕ್ಷಕರ ಸಂಘದ ಚುನಾವಣಾ ಪ್ರಕ್ರಿಯೆಗೆ ಭಾರೀ ಹಿನ್ನಡೆಯಾಗಿದ್ದು, ಮುಂದಿನ ನ್ಯಾಯಾಲಯದ ಆದೇಶದ ಮೇಲೆ ಮುಂದಿನ ಕ್ರಮಗಳು ನಿರ್ಧಾರವಾಗಲಿವೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading