April 18, 2026
IMG-20260418-WA0201.jpg

ಚಳ್ಳಕೆರೆ:
ಕಾಯಿದೆ ಮತ್ತು ಕಾನೂನಿನ ಜೊತೆಗೆ ಮಾನವೀಯತೆ ಮತ್ತು ಅಂತಃಕರಣದ ದಡಿಯಲ್ಲಿ ಅಧಿಕಾರಿಗಳು ಕೆಲಸ ನಿರ್ವಹಿಸಿದರೆ ಜನಸಾಮಾನ್ಯರು ಇಲಾಖೆ ಹಾಗೂ ಸರ್ಕಾರದ ಮೇಲೆ ಅಪಾರ ನಂಬಿಕೆ ಇಡುತ್ತಾರೆ ಎಂದು ನಿವೃತ್ತ ಕೆಎ ಅಧಿಕಾರಿ ಹಾಗೂ ಮಣಕಾಲ್ಮೂರು ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಎನ್. ರಘುಮೂರ್ತಿ ಹೇಳಿದರು.ತಾಲೂಕಿನ ತಪ್ಪಗೊಂಡನಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮನೆ ಕಳೆದುಕೊಂಡ ಚಿತ್ರಲಿಂಗಪ್ಪ ಅವರ ಮನೆಗೆ ಭೇಟಿ ನೀಡಿದ ಅವರು, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಕಷ್ಟದ ಸಮಯದಲ್ಲಿ ನಿಮ್ಮೊಂದಿಗೆ ಇರುವುದಾಗಿ ಭರವಸೆ ನೀಡಿದರು.ಕಾರ್ಯಕರ್ತರೊಂದಿಗೆ ಗ್ರಾಮಕ್ಕೆ ಆಗಮಿಸಿದ ಅವರು, ಸಂತ್ರಸ್ತ ಕುಟುಂಬಕ್ಕೆ ತಕ್ಷಣ ಅಗತ್ಯವಿರುವ ಆಹಾರ ಧಾನ್ಯಗಳು ಹಾಗೂ ಗೃಹೋಪಯೋಗಿ ವಸ್ತುಗಳನ್ನು ನೀಡಿದರು. ಮಳೆ ಮತ್ತು ಭೂಮಿಯನ್ನು ನಂಬಿಕೊಂಡು ಬದುಕುವ ಜನರ ಸ್ಥಿತಿ ಇಂದು ಅತ್ಯಂತ ಚಿಂತಾಜನಕವಾಗಿದೆ. ತಮ್ಮ ಜೀವನವನ್ನು ತಾವೇ ಸಾಗಿಸುವ ಪರಿಸ್ಥಿತಿಯಲ್ಲಿರುವವರಿಗೆ ಇಂತಹ ಪ್ರಾಕೃತಿಕ ಅವಘಡಗಳು ಸಂಭವಿಸುವುದು ವಿಷಾದನೀಯ ಎಂದು ಹೇಳಿದರು.
ಇಂತಹ ಸಂದರ್ಭಗಳಲ್ಲಿ ಅಧಿಕಾರಿಗಳು ಕನಿಷ್ಠ ಪರಿಹಾರ ಹಾಗೂ ಅಗತ್ಯ ವಸ್ತುಗಳನ್ನು ಸರ್ಕಾರದ ವತಿಯಿಂದ ಒದಗಿಸಿ ಸಾಂತ್ವನ ನೀಡಿದರೆ ಸಾರ್ವಜನಿಕರು ವ್ಯವಸ್ಥೆಯ ಮೇಲೆ ನಂಬಿಕೆ ಇಡುತ್ತಾರೆ. ಆದರೆ ಈ ಕುಟುಂಬಕ್ಕೆ ಇನ್ನೂ ಸಮರ್ಪಕ ನೆರವು ದೊರಕದಿರುವುದು ದುರ್ದೈವಕರ ಸಂಗತಿ ಎಂದು ಅವರು ಅಭಿಪ್ರಾಯಪಟ್ಟರು.
ಪ್ರತಿಯೊಂದು ಮನೆಯಲ್ಲೂ ಸಣ್ಣ ಮಕ್ಕಳು ಮತ್ತು ವೃದ್ಧರು ಇರುವುದರಿಂದ ಯುವಕರು ಮುಂಜಾಗ್ರತೆ ವಹಿಸಬೇಕು. ಗ್ಯಾಸ್ ಸಿಲಿಂಡರ್, ಹುಲ್ಲು ಹಾಗೂ ಜಾನುವಾರುಗಳ ಮೇವು ಮುಂತಾದವುಗಳನ್ನು ಜೋಪಾನವಾಗಿ ಇಡಬೇಕು. ಇಂತಹ ಘಟನೆಗಳು ನಡೆದಾಗ ತಕ್ಷಣ ಅಗ್ನಿಶಾಮಕ ದಳವನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಂಗಾರೆಡ್ಡಿ, ಯರಗುಂಟಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading