July 17, 2026
FB_IMG_1784308705200


ಹಿರಿಯೂರು :
ನಗರದ ಪ್ರಧಾನ ರಸ್ತೆಗೆ ಹೊಂದಿಕೊಂಡಿರುವ ನೂರು ಹಾಸಿಗೆ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ಲೋಕಾಯುಕ್ತ ಅಧಿಕಾರಿಗಳ ತಂಡ ದಿಡೀರ್ ಭೇಟಿ ನೀಡಿದಾಗ ಅಲ್ಲಿ ಕಂಡದ್ದು, ಕೊಳಕಾಗಿದ್ದ ಶೌಚಾಲಯ, ಕಿಲುಬುಗಟ್ಟಿದ ಕುಡಿಯುವ ನೀರಿನಡ್ರಮ್ ಆಸ್ಪತ್ರೆ ಅವ್ಯವಸ್ಥೆಯನ್ನು ಸಾಕ್ಷೀಕರಿಸಿತು.
ಆಸ್ಪತ್ರೆಗೆ ಭೇಟಿ ನೀಡಿದ ಲೋಕಾಯುಕ್ತ ಡಿ.ವೈ.ಎಸ್.ಪಿ ಕಲಾವತಿ ಕೆ, ಮೃತ್ಯುಂಜಯ ಹಾಗೂ ಇನ್ಸ್ ಪೆಕ್ಟರ್ ಬಸವರಾಜ ಪಾಟೀಲ್ ನೇತೃತ್ವದ ತಂಡ, ಆಸ್ಪತ್ರೆ ಆವರಣದಲ್ಲಿ ರಿಪೇರಿ ಕಾಣದೆ ನಿಂತಿದ್ದ ಆಂಬುಲೆನ್ಸ್, ಆಸ್ಪತ್ರೆಯಲ್ಲಿನ ಪುರುಷರ ವಾರ್ಡ್, ಮಹಿಳೆಯರ ವಾರ್ಡ್, ಕಿರುಶಸ್ತ್ರ ಚಿಕಿತ್ಸಾ ಕೊಠಡಿ, ಮೆಡಿಸಿನ್ ರೂಮ್, ಶಸ್ತ್ರಚಿಕಿತ್ಸಾ ಕೊಠಡಿ, ರಕ್ತ ಸಂಗ್ರಹಣ ಘಟಕ, ಅಡುಗೆ ಕೋಣೆ ಕುಡಿಯುವ ನೀರಿನ ಟ್ಯಾಂಕ್ ನ ಜೊತೆಗೆ ನೌಕರರ ಹಾಜರಾತಿಯನ್ನು ಪರಿಶೀಲಿಸಿತು.
ಈ ವೇಳೆ ಆಸ್ಪತ್ರೆಯ ಮೊದಲ ಮಹಡಿಯ ಶಸ್ತ್ರಚಿಕಿತ್ಸಾ ಕೋಣೆಯ ಪಕ್ಕದ ಕುಡಿಯುವ ನೀರಿನ ನಲ್ಲಿಗಳು ತುಕ್ಕು ಹಿಡಿದಿರುವುದು, ಕಿಲುಬುಗಟ್ಟಿರುವುದು ಎರಡು ನಲ್ಲಿಗಳಲ್ಲಿ ಒಂದರಲ್ಲಿ ಮಾತ್ರ ನೀರು ಬರುತ್ತಿರುವುದನ್ನು ಕಂಡ ಡಿ.ವೈ.ಎಸ್.ಪಿ.ಕಲಾವತಿಯವರು ನೀರಿನ ಉಸ್ತುವಾರಿ ನೋಡಿಕೊಳ್ಳುವವರನ್ನು ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆಯಲ್ಲಿ ತ್ಯಾಜ್ಯದ ರಾಶಿ ಬಿದ್ದಿದ್ದನ್ನು ನೋಡಿದ ಅಧಿಕಾರಿಗಳು ಶೀಘ್ರ ವಿಲೇವಾರಿ ಮಾಡುವಂತೆ ಸೂಚಿಸಿದರು, ಅಡುಗೆಕೋಣೆ, ಮೆಡಿಸಿನ್ ಕೊಠಡಿಗಳನ್ನು ಪರಿಶೀಲಿಸುವಾಗ ಎರಡು ವರ್ಷಗಳಿಂದ ಟೆಂಡರ್ ಆಗದಿರುವ ಕಾರಣಕ್ಕೆ ರೋಗಿಗಳಿಗೆ ಹಾಲು, ಹಣ್ಣು ಬ್ರೆಡ್ ಕೊಡುತ್ತಿಲ್ಲ ಎಂದು ಅಲ್ಲಿನ ಸಿಬ್ಬಂದಿಗಳು ತಿಳಿಸಿದರು.
ಸ್ಥಳದಲ್ಲಿದ್ದ ದಲಿತ ಮುಖಂಡ ಹೆಗ್ಗೆರೆ ಮಂಜುನಾಥ್ ಈ ಕುರಿತು ಮಾತನಾಡಿ, ರಾತ್ರಿಪಾಳಿಯ ವೈದ್ಯರು ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ, ಇದ್ದರೂ ವಿಶ್ರಾಂತಿ ಕೊಠಡಿಯಲ್ಲಿರುತ್ತಾರೆ. ರೋಗಿಗಳು ಅವರನ್ನು ಅಲ್ಲಿಗೆ ಹುಡುಕಿಕೊಂಡು ಹೋಗಬೇಕು, ನರ್ಸ್ ಗಳು ರೋಗಿಗಳೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುವಂತೆ ಆದೇಶಿಸಬೇಕು ಎಂಬುದಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಜೈರಾಮ್, ಲೋಕಾಯುಕ್ತ ಇಲಾಖೆಯ ಮಂಜುನಾಥ್, ವೆಂಕಟೇಶ್ ಕುಮಾರ್, ಪುಷ್ಪಾ, ವೀರೇಶ್, ಶ್ರೀನಿವಾಸ್, ಸಂತೋಷ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading