ಹೊಸದುರ್ಗ, ಜೂನ್ 16: ಸಮಾಜದ ಕಟ್ಟಕಡೆಯ ಫಲಾನುಭವಿಗಳಿಗೂ ಗ್ಯಾರೆಂಟಿ ಯೋಜನೆಗಳ ಸೌಲಭ್ಯ ತಲುಪಿಸಿ ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವುದೇ ಸರ್ಕಾರದ ಉದ್ದೇಶ ಎಂದು ಗ್ಯಾರೆಂಟಿ ಯೋಜನೆಗಳ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ ಹೇಳಿದರು.
ಪಟ್ಟಣದ ಗ್ಯಾರೆಂಟಿ ಯೋಜನೆ ಸಮಿತಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಡಿಸೆಂಬರ್‌ನಲ್ಲಿ ನಡೆದ ರಾಜ್ಯಮಟ್ಟದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಭೆಯಲ್ಲಿ ಸುಮಾರು ₹79 ಸಾವಿರ ಕೋಟಿ ಹಣ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗದೆ ಬ್ಯಾಂಕುಗಳಲ್ಲಿಯೇ ಉಳಿದಿರುವುದು ಗಮನಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಯೋಜನೆಗಳಲ್ಲಿ ಅಗತ್ಯ ಪರಿಷ್ಕರಣೆ ಕೈಗೊಳ್ಳಲು ಮುಂದಾಗಿದೆ ಎಂದು ತಿಳಿಸಿದರು.
ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳ ಹಣ ರಾಜ್ಯದ ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉದ್ದೇಶವಾಗಿದ್ದು, ಶೀಘ್ರದಲ್ಲೇ ಪರಿಷ್ಕರಣೆ ಪೂರ್ಣಗೊಳಿಸಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದರು.
ಗ್ಯಾರೆಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ಬಿಜೆಪಿ, ಇತ್ತೀಚಿನ ಹಲವು ರಾಜ್ಯಗಳ ಚುನಾವಣೆಯಲ್ಲಿ ಇದೇ ಮಾದರಿಯ ಯೋಜನೆಗಳನ್ನು ಘೋಷಣೆ ಮಾಡಿ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದ ಅವರು, ಯೋಜನೆಗಳ ಅನುಷ್ಠಾನಕ್ಕಾಗಿ ಅಗತ್ಯ ಅನುದಾನವನ್ನು ಸರ್ಕಾರ ಮುಂಚಿತವಾಗಿಯೇ ಕಾಯ್ದಿರಿಸಿದ್ದು, ಇದರಿಂದ ರಾಜ್ಯ ಅಥವಾ ಸರ್ಕಾರ ದಿವಾಳಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಬದಲಾಗಿ ಆರ್ಥಿಕವಾಗಿ ಹಿಂದುಳಿದವರು, ಬಡವರು ಮತ್ತು ನಿರ್ಗತಿಕರಿಗೆ ಈ ಯೋಜನೆಗಳು ನೆರವಾಗಿವೆ ಎಂದರು.
ವಿರೋಧ ಪಕ್ಷದ ನಾಯಕರು ಗ್ಯಾರೆಂಟಿ ಸಮಿತಿಗಳ ಅಗತ್ಯವನ್ನು ಪ್ರಶ್ನಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಸುಮಾರು 4 ಸಾವಿರ ಗ್ಯಾರೆಂಟಿ ಸಮಿತಿಗಳು ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ಅಲ್ಲದೆ, ಫಲಾನುಭವಿಗಳ ನೋಂದಣಿಯನ್ನು ಸುಲಭಗೊಳಿಸಲು ಹೊಸ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯದರ್ಶಿಗಳು, ಪಿಡಿಒಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಶೀಘ್ರ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ಯಾರೆಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷ ಶಿವಣ್ಣ, ತಾಲೂಕು ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್, ಮುಖಂಡರಾದ ಗೋ. ತಿಪ್ಪೇಶ್, ಚಿಕ್ಕಣ್ಣ, ಕೋಟಪ್ಪ, ದೀಪಿಕಾ ಸತೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ನಾಗತಿಹಳ್ಳಿ ಮಂಜುನಾಥ್
About The Author
Discover more from JANADHWANI NEWS
Subscribe to get the latest posts sent to your email.