ಚಳ್ಳಕೆರೆ: ಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡಿ, ಅವುಗಳ ಸದ್ಬಳಕೆಗೆ ಅರಿವು ಮೂಡಿಸುವ ಮೂಲಕ ಕಾರ್ಮಿಕರನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಬೇಕು ಎಂದು ಅಪರ ಸಿವಿಲ್ ನ್ಯಾಯಾಧೀಶ ಬಿ.ಆರ್. ಪುನೀತ್ ಹೇಳಿದರು.
ನಗರದ ನ್ಯಾಯಾಲಯ ಆವರಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ದೇಶದ ಅಭಿವೃದ್ಧಿ ಹಾಗೂ ಜನಸಾಮಾನ್ಯರಿಗೆ ಮೂಲಭೂತ ಸೌಲಭ್ಯಗಳ ಒದಗಿಕೆಗೆ ಕಾರ್ಮಿಕರ ಶ್ರಮವೇ ಆಧಾರ. ಕಾರ್ಮಿಕರು ದೇಶದ ಬೆನ್ನೆಲುಬಾಗಿದ್ದು, ಅವರ ಸೇವೆಯಿಲ್ಲದೆ ಸಮಾಜದ ಪ್ರಗತಿಯನ್ನು ಊಹಿಸಲು ಸಾಧ್ಯವಿಲ್ಲ” ಎಂದು ಹೇಳಿದರು.
ಕಾರ್ಮಿಕರ ಕಲ್ಯಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಮಾಹಿತಿ ಕೊರತೆಯಿಂದ ಹಲವರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ವಿಷಾದಿಸಿದರು. ಕೆಲಸದ ಸ್ಥಳಗಳಲ್ಲಿ ಶೋಷಣೆಗೆ ಒಳಗಾದ ಕಾರ್ಮಿಕರು ಕಾನೂನು ಸೇವಾ ಸಮಿತಿಗೆ ದೂರು ನೀಡಬಹುದಾಗಿದ್ದು, ಅವರಿಗೆ ನ್ಯಾಯ ದೊರಕಿಸುವಲ್ಲಿ ಸಮಿತಿ ಹಾಗೂ ವಕೀಲರು ಸಹಕಾರ ನೀಡಲಿದ್ದಾರೆ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಅಶ್ವತ ನಾಯಕ ಮಾತನಾಡಿ, “ಎಲ್ಲಾ ಕ್ಷೇತ್ರಗಳ ಪ್ರಗತಿಗೂ ಕಾರ್ಮಿಕರ ಶ್ರಮ ಅವಶ್ಯಕ. ಕಾರ್ಮಿಕರ ದುಡಿಮೆಯಿಂದ ಬಂಡವಾಳಶಾಹಿಗಳು ಶ್ರೀಮಂತರಾಗುತ್ತಿದ್ದರೂ, ದುಡಿಯುವ ವರ್ಗದ ಆರ್ಥಿಕ ಸ್ಥಿತಿ ನಿರೀಕ್ಷಿತ ಮಟ್ಟದಲ್ಲಿ ಸುಧಾರಿಸುತ್ತಿಲ್ಲ” ಎಂದು ಹೇಳಿದರು.
ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕಾರ್ಮಿಕರು ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದ ಅವರು, ಕಾರ್ಮಿಕರ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಉಚಿತ ಶಿಕ್ಷಣ ಸೌಲಭ್ಯವಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ವಕೀಲ ಹನುಮಂತರಾಯ ಮಾತನಾಡಿ, ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ಸಮಾನ ವೇತನ, ಸಾಮಾಜಿಕ ಭದ್ರತೆ, ರಜೆ ಹಾಗೂ ನಿಗದಿತ ಕೆಲಸದ ಅವಧಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವುದು ಮಾಲೀಕರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಾರ್ಮಿಕ ಇಲಾಖೆ ಅಧಿಕಾರಿ ಕುಸುಮ ಕಾರ್ಮಿಕ ಇಲಾಖೆಯಿಂದ ದೊರೆಯುವ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಕೀಲರಾದ ಗೋವಿಂದಪ್ಪ, ನ್ಯಾಯಾಲಯ ಸಿಬ್ಬಂದಿಗಳಾದ ನಾಗರತ್ನ, ತೇಜೋವತಿ, ಕಾರ್ಮಿಕ ಇಲಾಖೆ ಸಿಬ್ಬಂದಿ, ಕಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.