ಹೊಸದುರ್ಗ: ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಸೀಮಿತವಾಗದೇ ಓದಿನ ಜೊತೆಗೆ ವಿವಿಧ ಜ್ಞಾನ, ಕೌಶಲ್ಯ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಶಾಂತಪ್ಪ ಆರ್ ಹೇಳಿದರು.




ಪಟ್ಟಣದ ಕನ್ನಡ ಭವನದಲ್ಲಿ ರಾಜ್ಯ ಶ್ರೀ ವೀರ ಮಡಿವಾಳ ಮಾಚಿದೇವ ಯುವ ಸೇನಾ ಪಡೆಯ ಸಂಸ್ಥಾಪಕ ಹಾಗೂ ಕಾರ್ಯಾಧ್ಯಕ್ಷ ನಾಗತಿಹಳ್ಳಿ ಮಂಜುನಾಥ್ ಅವರ ನೇತೃತ್ವದಲ್ಲಿ ಚಿತ್ರದುರ್ಗ ಮತ್ತು ದಾವಣಗೆರೆ ಉಭಯ ಜಿಲ್ಲೆಗಳ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ 9ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ ಬಳಿಕ ಸರ್ಕಾರಿ ಉದ್ಯೋಗಗಳು ದೊರೆಯುತ್ತಿದ್ದವು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಪಿಯುಸಿ ಮತ್ತು ಪದವಿ ಪೂರ್ಣಗೊಳಿಸಿದ ಬಳಿಕವೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉತ್ತೀರ್ಣರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಇಂದಿನ ಕಾಲಘಟ್ಟದಲ್ಲಿ ಅಂಕಗಳು ಅಥವಾ ಅಂಕಪಟ್ಟಿ ಮಾತ್ರ ಜೀವನದಲ್ಲಿ ಯಶಸ್ಸು ತರುವುದಿಲ್ಲ. ಪಿಹೆಚ್‌ಡಿ ಮಾಡಿದ ಹಲವರು ಸಹ ಉದ್ಯೋಗಕ್ಕಾಗಿ ವಿವಿಧ ವೃತ್ತಿಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದನ್ನು ಕಾಣಬಹುದು. ಆದ್ದರಿಂದ ವಿದ್ಯಾರ್ಥಿಗಳು ಓದಿನ ಜೊತೆಗೆ ಬಹುಮುಖ ಪ್ರತಿಭೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪಿಯುಸಿ ಮುಗಿದ ತಕ್ಷಣವೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿ ನಿರಂತರವಾಗಿ ಪರೀಕ್ಷೆಗಳಲ್ಲಿ ಭಾಗವಹಿಸಬೇಕು. ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಪಾರ ಶ್ರಮ ಪಡುತ್ತಿರುವುದರಿಂದ ಅವರ ಕನಸುಗಳನ್ನು ನನಸಾಗಿಸುವ ಹೊಣೆಗಾರಿಕೆ ವಿದ್ಯಾರ್ಥಿಗಳ ಮೇಲಿದೆ ಎಂದು ತಿಳಿಸಿದರು.
ಧತ್ತಿ ನಿಧಿಯನ್ನು ಉದ್ಘಾಟಿಸಿ ಮಾತನಾಡಿದ ಕನಕ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ. ಎಂ.ಹೆಚ್. ಕೃಷ್ಣಮೂರ್ತಿ, ಸಮಾಜಮುಖಿ ಕಾರ್ಯಗಳನ್ನು ಸಂಘಟಿತವಾಗಿ ನಡೆಸುವುದು ಸುಲಭದ ಕೆಲಸವಲ್ಲ. ಒಂದು ಸಂಘಟನೆ ನಿರ್ಮಿಸಲು ಧೈರ್ಯ, ತಾಳ್ಮೆ ಮತ್ತು ಸಮಾಜವನ್ನು ಮುನ್ನಡೆಸುವ ಬದ್ಧತೆ ಅಗತ್ಯವಿದೆ ಎಂದರು. ಇಂತಹ ಸಂಘಟನೆಗಳಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸಿದರು.
ರಾಜ್ಯ ಶ್ರೀ ವೀರ ಮಡಿವಾಳ ಮಾಚಿದೇವ ಯುವ ಸೇನಾ ಪಡೆಯ ಅಧ್ಯಕ್ಷ ಲಕ್ಷ್ಮೀಸಾಗರ್ ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಶ್ರೀ ವೀರ ಮಡಿವಾಳ ಮಾಚಿದೇವ ಸಂಘದ ಮಾಜಿ ಕಾರ್ಯದರ್ಶಿ ಹಾಗೂ ಹಿರಿಯ ಪತ್ರಕರ್ತ ಎನ್.ಕೆ. ತಿಪ್ಪೇಸ್ವಾಮಿ ವಿದ್ಯಾರ್ಥಿಗಳ ಜವಾಬ್ದಾರಿ ಮತ್ತು ಜೀವನ ಮೌಲ್ಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹರಿಹರ ನಗರಸಭೆಯ ಕಂದಾಯ ನಿರೀಕ್ಷಕಿ ಚೈತ್ರ ಕೆ.ಎನ್., ಮಾಡದಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆಂಕೆರೆ ಅಂಜನಮೂರ್ತಿ, ಗೊರವಿನಕಲ್ಲು ಚಿದಾನಂದ, ಜಾನಕಲ್ಲು ಹೆಚ್. ಹನುಮಂತಪ್ಪ, ಸ್ಟುಡಿಯೋ ಬಸವರಾಜ್, ರಾಜು ಬುಳಸಾಗರ, ಪುನೀತ್‌ಕುಮಾರ್ ಬೀಡಾ, ರವಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯೋಗಿತಾ ಜಿ ಅವರ ನೃತ್ಯ ಪ್ರದರ್ಶನ ಗಮನಸೆಳೆಯಿತು. ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
About The Author
Discover more from JANADHWANI NEWS
Subscribe to get the latest posts sent to your email.