May 13, 2026
FB_IMG_1778676530858.jpg

ಚಿತ್ರದುರ್ಗಮೇ13:
ರಕ್ತದಾನ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಬಹುದು ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಬಿ.ವಿ. ಗಿರೀಶ್ ತಿಳಿಸಿದರು.

ಚಿತ್ರದುರ್ಗ ತಾಲ್ಲೂಕಿನ ಚಿಕ್ಕಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್), ಸರ್ಕಾರಿ ಕಲಾ ಕಾಲೇಜು ಹಾಗೂ ನೆಹರು ಯುವ ಕೇಂದ್ರದ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಹೆರಿಗೆ ಸಮಯದಲ್ಲಿ ಮಹಿಳೆಯರಿಗೆ, ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಹಾಗೂ ಅಪಘಾತಕ್ಕೊಳಗಾದವರಿಗೆ ರಕ್ತದ ಅವಶ್ಯಕತೆ ಹೆಚ್ಚಿರುತ್ತದೆ. ಇಂತಹ ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡುವುದರಿಂದ ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯ ಎಂದು ಅವರು ಹೇಳಿದರು.
ಚಿಕ್ಕಗೊಂಡನಹಳ್ಳಿ ಪಿಎಚ್‍ಸಿ ಆಡಳಿತ ವೈದ್ಯಾಧಿಕಾರಿ ಹಾಗೂ ಮಾನಸಿಕ ತಜ್ಞ ಡಾ. ಆರ್. ಮಂಜುನಾಥ್ ಮಾತನಾಡಿ, ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ರಕ್ತದಾನ ಮಾಡುವುದರಿಂದ ಕೇವಲ ದೈಹಿಕ ಆರೋಗ್ಯವಷ್ಟೇ ಅಲ್ಲದೆ, ಮಾನಸಿಕ ನೆಮ್ಮದಿ ಮತ್ತು ಚೈತನ್ಯವೂ ಹೆಚ್ಚುತ್ತದೆ. ಇದೊಂದು ಶ್ರೇಷ್ಠ ಪುಣ್ಯದ ಕೆಲಸ ಎಂದರು.
ಜಿಲ್ಲಾ ಆಸ್ಪತ್ರೆ ರಕ್ತನಿಧಿ ಕೇಂದ್ರದ ಡಾ. ರೂಪಾ ಮಾಹಿತಿ ನೀಡಿ, 18 ರಿಂದ 65 ವರ್ಷದೊಳಗಿನ ಆರೋಗ್ಯವಂತ ಪುರುಷರು ಮತ್ತು ಮಹಿಳೆಯರು ರಕ್ತದಾನ ಮಾಡಬಹುದು. ರಕ್ತದಾನದಿಂದ ಯಾವುದೇ ಅಶಕ್ತತೆ ಉಂಟಾಗುವುದಿಲ್ಲ. ಪೌಷ್ಟಿಕ ಆಹಾರ, ಹಸಿರು ತರಕಾರಿ ಮತ್ತು ಹೆಚ್ಚಿನ ನೀರು ಸೇವಿಸುವ ಮೂಲಕ ರಕ್ತದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು. ಜಂಕ್ ಫುಡ್‍ಗಳ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ಮಾತನಾಡಿ, ರಕ್ತದಾನದಿಂದ ದೇಹದಲ್ಲಿ ಹೊಸ ರಕ್ತಕಣಗಳು ಉತ್ಪತ್ತಿಯಾಗುತ್ತವೆ. ಇದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುವುದಲ್ಲದೆ ಕ್ಯಾನ್ಸರ್‍ನಂತಹ ಕಾಯಿಲೆಗಳನ್ನು ತಡೆಯಬಹುದು. ಆದರೆ ಕಾಮಾಲೆ ಮತ್ತು ಎಚ್‍ಐವಿ ಸೋಂಕಿತರು ರಕ್ತದಾನ ಮಾಡಲು ಅರ್ಹರಲ್ಲ ಎಂದು ತಿಳಿಸಿದರು.
ಎನ್‍ಎಸ್‍ಎಸ್ ಶಿಬಿರಾರ್ಥಿಗಳು ಗ್ರಾಮದಲ್ಲಿ ಪರಿಸರ ಸ್ವಚ್ಛತೆ ಕುರಿತು ಜಾಥಾ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಶಿಬಿರದಲ್ಲಿ ಆರು ಮಂದಿ ರಕ್ತದಾನ ಮಾಡಿದರು. ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ತಜ್ಞ ವೈದ್ಯರ ತಂಡವು 82 ಜನರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿತು.
ಕಾರ್ಯಕ್ರಮದಲ್ಲಿ ಎಮರ್ಜೆನ್ಸಿ ಮೆಡಿಸಿನ್ ತಜ್ಞ ವೈದ್ಯ ಡಾ.ಸಂತೋಷ್ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಮಜಹರ್ ಉಲ್ಲಾ, ಸಂಚಾಲಕ ಡಾ. ಪ್ರದೀಪ್ ಕುಮಾರ್, ಸದಸ್ಯ ಡಾ. ದೀಕ್ಷಿತ್, ನೆಹರು ಯುವ ಕೇಂದ್ರದ ಭರತ್, ಸರ್ಕಾರಿ ಕಲಾ ಕಾಲೇಜಿನ ಡಾ. ವಿ. ಪ್ರಸಾದ್, ಬಿ.ಕೆ. ಬಸವರಾಜ್, ಅಶೋಕ್ ಕುಮಾರ್, ಹಿರಿಯ ಪಿಎಚ್‍ಸಿಒ ಸುಧಾ, ಆರೋಗ್ಯ ನಿರೀಕ್ಷಣಾಧಿಕಾರಿ ಶಂಕ್ರನಾಯಕ್, ಪ್ರಯೋಗಶಾಲಾ ತಂತ್ರಜ್ಞ ಸಂದೀಪ್, ಮುರುಳೀಧರ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading