April 22, 2026
IMG-20260208-WA0108.jpg

ಚಳ್ಳಕೆರೆ: ನಗರದ ಆದರ್ಶ ವಿದ್ಯಾಲಯ, ನಾಯಕನಹಟ್ಟಿ ರಸ್ತೆ ಸರ್ಕಾರಿ ಆಸ್ಪತ್ರೆ ಹಾಗೂ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪ ನೂತನ ನಂದಿನಿ ಹಾಲು ಮತ್ತು ಹಾಲು ಉತ್ಪನ್ನ ಪಾರ್ಲರ್‌ಗಳನ್ನು ಶಾಸಕ ಟಿ. ರಘುಮೂರ್ತಿ ಉದ್ಘಾಟಿಸಿದರು.
ಉದ್ಘಾಟನೆಯ ಬಳಿಕ ಮಾತನಾಡಿದ ಅವರು, ಹಾಲು ಉತ್ಪಾದಕರಿಗೆ ಸ್ಥಿರ ಮಾರುಕಟ್ಟೆ ಒದಗಿಸುವುದು ಹಾಗೂ ಗ್ರಾಹಕರಿಗೆ ಶುದ್ಧ ಮತ್ತು ಗುಣಮಟ್ಟದ ಹಾಲು ಉತ್ಪನ್ನಗಳನ್ನು ನೇರವಾಗಿ ತಲುಪಿಸುವ ಉದ್ದೇಶದಿಂದ ನಂದಿನಿ ಪಾರ್ಲರ್‌ಗಳನ್ನು ಆರಂಭಿಸಲಾಗಿದೆ ಎಂದರು.ನಂದಿನಿ ಕೇವಲ ಬ್ರಾಂಡ್ ಅಲ್ಲ, ಅದು ರೈತರ ಬದುಕಿನ ಆಧಾರ ಎಂದು ಬಣ್ಣಿಸಿದ ಅವರು, ಹಾಲಿನ ದರ ಹೆಚ್ಚಾದಾಗ ಅದರ ಲಾಭ ನೇರವಾಗಿ ರೈತರಿಗೆ ತಲುಪಬೇಕು ಎಂಬ ಉದ್ದೇಶದಿಂದ ಸರ್ಕಾರ ಹಾಗೂ ಸಹಕಾರ ಸಂಘಗಳು ಬದ್ಧವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು. ಗ್ರಾಮೀಣ ಆರ್ಥಿಕತೆಯನ್ನು ಸದೃಢಗೊಳಿಸುವಲ್ಲಿ ನಂದಿನಿಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸಾರ್ವಜನಿಕರು ನಂದಿನಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ರೈತರನ್ನು ಉತ್ತೇಜಿಸಬೇಕು ಎಂದು ಕರೆ ನೀಡಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಪಾರ್ಲರ್‌ಗಳನ್ನು ಆರಂಭಿಸಲಾಗುವುದು ಎಂದರು.ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ವಿದ್ಯಾಧರ್ ಮಾತನಾಡಿ, ನಂದಿನಿ ಪಾರ್ಲರ್‌ಗಳ ವಿಸ್ತರಣೆ ರೈತ ಮತ್ತು ಗ್ರಾಹಕ ಎರಡರಿಗೂ ಲಾಭದಾಯಕವಾಗಿದೆ ಎಂದರು. ಚಿತ್ರದುರ್ಗ ಜಿಲ್ಲೆಯಲ್ಲಿ ಆರು ನಂದಿನಿ ಪಾರ್ಲರ್‌ಗಳನ್ನು ತೆರೆದಿದ್ದು, ಅವುಗಳಲ್ಲಿ ನಾಲ್ಕು ಪಾರ್ಲರ್‌ಗಳು ಚಳ್ಳಕೆರೆಯಲ್ಲಿ ಉದ್ಘಾಟನೆಯಾಗಿವೆ ಎಂದರು. ಕಳೆದ 18 ತಿಂಗಳಲ್ಲಿ 55 ಫ್ರಾಂಚೈಸಿ ಪಾರ್ಲರ್‌ಗಳನ್ನು ಆರಂಭಿಸಲಾಗಿದ್ದು, ನಂದಿನಿ ಸುಮಾರು 170 ಉತ್ಪನ್ನಗಳನ್ನು ತಯಾರಿಸುತ್ತಿದೆ ಎಂದು ಮಾಹಿತಿ ನೀಡಿದರು. ನಂದಿನಿ ಉತ್ಪನ್ನಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು. ತಿರುಪತಿ ಟಿಟಿಡಿ ಸಂಸ್ಥೆಯಿಂದ ನಂದಿನಿ ತುಪ್ಪಕ್ಕೆ ಬೇಡಿಕೆ ಬಂದಿರುವುದನ್ನು ಉಲ್ಲೇಖಿಸಿದರು. ದಾವಣಗೆರೆ ಜಿಲ್ಲೆಯಲ್ಲಿ ಬೃಹತ್ ಹಾಲು ಸಂಸ್ಕರಣ ಘಟಕ ಆರಂಭಿಸಲು ಟೆಂಡರ್ ಕರೆಯಲಾಗಿದೆ ಎಂದರು.
ಒಕ್ಕೂಟದ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಮಾತನಾಡಿ, ನಂದಿನಿ ಉತ್ಪನ್ನಗಳ ಜನಪ್ರಿಯತೆಗೆ ರೈತರ ಶ್ರಮ ಹಾಗೂ ಸಹಕಾರ ವ್ಯವಸ್ಥೆಯೇ ಕಾರಣ ಎಂದರು. ಪಾರ್ಲರ್‌ಗಳ ಮೂಲಕ ನೇರ ಮಾರಾಟ ಹೆಚ್ಚಿದಂತೆ ರೈತರ ಆದಾಯವೂ ಹೆಚ್ಚುತ್ತಿದೆ. ತಾಲೂಕಿನಲ್ಲಿ ಹಾಲು ಉತ್ಪಾದಕ ಸಂಘಗಳ ಸಂಖ್ಯೆ 55ರಿಂದ 66ಕ್ಕೆ ಏರಿಕೆಯಾಗಿದ್ದು, ದಿನನಿತ್ಯ ಸುಮಾರು 45,000 ಲೀಟರ್ ಹಾಲು ಉತ್ಪಾದನೆ ನಡೆಯುತ್ತಿದೆ. ಇದರಿಂದ ವ್ಯಾಪಾರ ವಹಿವಾಟು ಶೇಕಡಾ 27ರಷ್ಟು ಹೆಚ್ಚಾಗಿದೆ ಎಂದರು. ಯುವಕರಿಗೆ ಸ್ವಯಂ ಉದ್ಯೋಗಾವಕಾಶ ಕಲ್ಪಿಸಲು ಪಾರ್ಲರ್ ನಿರ್ವಹಣೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ರೇವಣಸಿದ್ದಪ್ಪ, ಶೇಖರಪ್ಪ, ವ್ಯವಸ್ಥಾಪಕ ಎಸ್.ಜೆ. ಶೇಖರ್, ಎಚ್‌ಪಿಪಿಸಿ ಕಾಲೇಜಿನ ಪ್ರಾಂಶುಪಾಲ ದೇವಪ್ಪ, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಸೇರಿದಂತೆ ಹಾಲು ಒಕ್ಕೂಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಉದ್ಘಾಟನೆಯ ಬಳಿಕ ನಂದಿನಿ ಹಾಲು, ಮೊಸರು, ಬೆಣ್ಣೆ, ತುಪ್ಪ, ಐಸ್‌ಕ್ರೀಮ್ ಸೇರಿದಂತೆ ವಿವಿಧ ಹಾಲು ಉತ್ಪನ್ನಗಳ ಮಾರಾಟ ಆರಂಭಗೊಂಡಿತು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading